ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಜಿಲ್ಲೆಯ ವಿವಿಧೆಡೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಆಕ್ರೋಶ
Last Updated 9 ಜನವರಿ 2014, 5:58 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹಾಯಧನ ಅಡುಗೆ ಅನಿಲ ಹಾಗೂ ಆಟೊ ರಿಕ್ಷಾ ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಗರ ಮಹಿಳಾ ಮೋರ್ಚಾದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮೊದಲೇ ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ಜನರಿಗೆ ಅಡುಗೆ ಅನಿಲ ಹಾಗೂ ಆಟೊ ಗ್ಯಾಸ್‌ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಈ ಕೂಡಲೇ ಅನಿಲ ಬೆಲೆಯನ್ನು ಇಳಿಕೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ, ಬಿಜೆಪಿ ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಪಾಂಡೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಖಾ ಮುರಳೀಧರ್, ಮಹಾಲಕ್ಷ್ಮೀ, ಗಿರಿಜಾ ಪಾಟೀಲ್‌, ಪದಾಧಿಕಾರಿಗಳಾದ ಸೀತಾಲಕ್ಷ್ಮೀ, ಗೀತಾ, ಮಲ್ಲಮ್ಮ, ಎಸ್‌.ಲಕ್ಷ್ಮಮ್ಮ ಮತ್ತಿತರರು ವಹಿಸಿದ್ದರು.

ಸಾಮಾನ್ಯರ ಬದುಕಿಗೆ ಬರೆ
ಸಾಗರ:
ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಕೇಂದ್ರದ ಯುಪಿಎ ಸರ್ಕಾರ ಕಳೆದ ಐದು ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಇದರಿಂದ ಸಾಮಾನ್ಯ ಜನರು ಬದುಕುವುದೇ ಕಷ್ಟವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದರು.

ಈ ಹಿಂದೆ ಅಡುಗೆ ಅನಿಲ ಪೂರೈಕೆಗೆ ಮಿತಿ ಹೇರುವ ಮೂಲಕ ಯುಪಿಎ ಸರ್ಕಾರ ಜನರಿಗೆ ಶಾಕ್‌ ನೀಡಿತ್ತು. ಇದೀಗ ಸಬ್ಸಿಡಿರಹಿತ ಸಿಲಿಂಡರ್‌ ಬೆಲೆ  ಏರಿಸಿದ್ದರಿಂದ ಇದನ್ನೇ ನಂಬಿ ಸಣ್ಣಪುಟ್ಟ ವಹಿವಾಟು ನಡೆಸುವ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎನ್ನುವುದಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಟೀಕಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಚೇತನ್‌ರಾಜ್‌ ಕಣ್ಣೂರು, ನಗರ ಘಟಕದ ಅಧ್ಯಕ್ಷ ಸತೀಶ್‌ಬಾಬು, ಕಾರ್ಯದರ್ಶಿ ರವೀಶ್‌ಕುಮಾರ್‌, ಕಸ್ತೂರಿ ನಾಗರಾಜ್, ಶಾಂತಾ ದೇವಪ್ಪ, ನಗರಸಭಾ ಸದಸ್ಯ ಸಂತೋಷ್‌ಶೇಟ್‌ ಮತ್ತಿತರರು ಭಾಗವಹಿಸಿದ್ದರು.

ದರ ಹೆಚ್ಚಳಕ್ಕೆ ವಿರೋಧ
ಹೊಸನಗರ: 
ಅಡುಗೆ ಅನಿಲ ಹಾಗೂ ಆಟೊ ಅನಿಲ ದರ ಹೆಚ್ಚಳ ಖಂಡಿಸಿ ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಂತಿ ಭಾಸ್ಕರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 

ಈಗಾಗಲೇ  ಹಲವು ಬಾರಿ ಅನಿಲ ದರ ಏರಿಸಿದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ಬಡ ಹಾಗೂ ಮಧ್ಯದ ವರ್ಗದ ಜನರು ಕಂಗಾಲು ಆಗಿದ್ದಾರೆ ಎಂದರು. ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಶಾಲಿ ಜೋಗಿ, ಕುಸುಮಾವತಿ, ಪದ್ಮಾ ಸುರೇಶ್, ರತ್ನಮ್ಮ, ನಿರ್ಮಲ ಗಣೇಶ್, ಸುಕನ್ಯಾ, ಗುಲಾಬಿ ಮರಿಯಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT