ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆಗಳ ವೈಯ್ಯಾರ: ಭೂರಮೆಗೆ ಸಿಂಗಾರ

Last Updated 14 ಅಕ್ಟೋಬರ್ 2011, 5:25 IST
ಅಕ್ಷರ ಗಾತ್ರ

ನಾಪೋಕ್ಲು: ಆಗಾಗ್ಗೆ ಸುರಿಯುತ್ತಿರುವ ಮಳೆ ಇಲ್ಲಿನ ಕಾಫಿಯ ತೋಟಗಳಲ್ಲಿ ಅಣಬೆಗಳ ಚಿತ್ತಾರ ಲೋಕವನ್ನು ಸೃಷ್ಟಿಸಿವೆ.

 ವಿವಿಧ ರೀತಿಯ ಅಣಬೆಗಳು ನೆಲದೊಳಗಿನಿಂದ ಮೂಡಿ ಕಣ್ಮನ ಸೆಳೆಯುತ್ತಿವೆ. ಮಳೆಗಾಲದ ಆರಂಭದಲ್ಲಿ ಅರಳುವ ನಾನಾ ನಮೂನೆಯ ಅಣಬೆಗಳು ವಿಶೇಷವಾಗಿವೆ. ಇವುಗಳೆಲ್ಲ ಮರ ಅಣಬೆಗಳು. ಮಳೆಗಾಲ ಕಳೆದು ಬಿಸಿಲು ವರ್ಷಧಾರೆಯ ಸಮ್ಮಿಲನದಲ್ಲಿ ಕಾಣಿಸಿಕೊಳ್ಳುವ ಇವು ಒಣಗಿದ ಮರಕ್ಕಂಟಿಕೊಂಡಿರುತ್ತವೆ. ನೋಡಲು ಸಣ್ಣದೊಂದು ಛತ್ರಿಯಂತಿರುತ್ತವೆ.

ನೆಲದಲ್ಲಿ ಮೂಡುವ ಅಣಬೆಗಳು ಮಳೆಗಾಲದ ಆರಂಭದಲ್ಲಿ ಯಾವುದೋ ಸಂದುಗೊಂದಿನಲ್ಲಿ ಹುಟ್ಟಿ ಸ್ವಲ್ಪಕಾಲ ಬೆಳೆದು ಉರುಳಿ ಹೋಗುತ್ತವೆ. ಇವುಗಳನ್ನು ನೋಡುವ ಭಾಗ್ಯ ಸಿಗುವುದು ಮಳೆಗಾಲದ ಆರಂಭದಲ್ಲಿ ಮಾತ್ರ.

ಮರ ಆಣಬೆಗಳು ಮಳೆಗಾಲ ಕಳೆಯುತ್ತಿದ್ದಂತೆ ಬಣ್ಣಬಣ್ಣಗಳಿಂದ ಕಂಗೊಳಿಸುತ್ತವೆ. ಶೀತ ಹವಾಮಾನದಲ್ಲಿ ಬಹುಕಾಲ ಉಳಿಯುತ್ತವೆ. ಶಿಲೀಂಧ್ರ ಸಸ್ಯ ಜಾತಿಗೆ ಸೇರಿದ ಅಣಬೆಗಳಿಗೆ ರೆಂಬೆ-ಕೊಂಬೆ-ಎಲೆಗಳು ಇರುವುದಿಲ್ಲ.

ಇದೊಂದು ಪರಾವಲಂಬಿ ಸಸ್ಯ. ಸಸ್ಯಗಳು ದ್ಯುತಿ ಸಂಶ್ಲೇಷಣೆ ಕ್ರಿಯೆ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಬೇಕಾಗುವ ಪತ್ರ ಹರಿತ್ತು ಇದರಲ್ಲಿರುವುದಿಲ್ಲ. ಬಹತೇಕ ಅಣಬೆಗಳು ಹುಟ್ಟಿದ ಒಂದು ದಿನ ಮಾತ್ರ ಚೆನ್ನಾಗಿರುತ್ತವೆ.

ಅಣಬೆಗಳ ಜೀವನ ಶೈಲಿಯೆ ವಿಶಿಷ್ಟ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆ ಆಕಾರ, ಗಾತ್ರ, ಅಣಬೆಗಳು ಕೊಳೆತು ನಾರುವ ವಸ್ತುಗಳ ಮೇಲೆ ಮರಗಳ ಕಾಂಡಗಳ ಮೇಲೆ ಸೆಗಣಿಯ ಮೇಲೆ ಕೊಳೆತ ಎಲೆಗಳ ರಾಶಿಯ ಮೇಲೆ ಹುತ್ತಗಳ ಮೇಲೆ ಹೀಗೆ ನಾನಾ ಸ್ಥಳಗಳಲ್ಲಿ ಪ್ರತ್ಯಕ್ಷವಾಗಿಬಿಡುತ್ತವೆ.

ಮಳೆಗಾಲದ ಆರಂಭದಲ್ಲಿ ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಗಳು ಕಾಣಸಿಗುತ್ತವೆ. ಹೆಚ್ಚಿನವು ನೋಟಕ್ಕಷ್ಟೇ ಚೆನ್ನ. ಕಾಫಿಯ ತೋಟಗಳಲ್ಲಿನ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕಾಡುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ.

ಅಣಬೆಗಳನ್ನು ಆಕಾರದ ಮೇಲೆ ಅಮನೀಟಾ, ಸಿಸೇರಿಯಾ, ಜೈಗಾಂಟಿಕ್ ಇತ್ಯಾದಿಯಾಗಿ ವಿಂಗಡಿಸಲಾಗುತ್ತದೆ. ಹಳ್ಳಿಗರು ಇವುಗಳನ್ನು ವಿವಿಧ  ಹೆಸರುಗಳಿಂದ ಕರೆಯುತ್ತಾರೆ. ನೆಲ ಅಣಬೆಗಳ ನಗು ಮಳೆಗಾಲದ ಆರಂಭದ ಕೆಲವು ದಿನಗಳು ಮಾತ್ರ ಸಿಕ್ಕರೆ ಮರ ಅಣಬೆಗಳ ಸೊಬಗು ಬಹುಕಾಲ ಗೋಚರಿಸುತ್ತವೆ. ಅಂದಹಾಗೆ ಕೆಲವೇ ಕೆಲವು ಅಣಬೆಗಳು ಮಾತ್ರ ಖಾದ್ಯಗಳಾಗಿ ಬಳಕೆಯಾಗುತ್ತವೆ. ಉಳಿದವೆಲ್ಲಾ ಒಣಮರದಲ್ಲಿ ಬಿನ್ನಾಣಗಿತ್ತಿಯರಂತೆ ಕಣ್ಮನ ಸೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT