ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ವಿರುದ್ಧ ಅಪಪ್ರಚಾರ ಸಲ್ಲ

Last Updated 10 ಅಕ್ಟೋಬರ್ 2011, 6:50 IST
ಅಕ್ಷರ ಗಾತ್ರ

ಮೈಸೂರು: `ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಯಶಸ್ವಿಯಾದ ಗಾಂಧಿವಾದಿ ಅಣ್ಣಾ ಹಜಾರೆ ಅವರು ಮೀಸಲಾತಿ ವಿರೋಧಿ ಹೋರಾಟಕ್ಕೆ ಇಳಿಯುತ್ತಾರೆ ಎನ್ನುವ ಸಂದೇಹದ ಬೀಜವನ್ನು ಎಲ್ಲೆಡೆ ಬಿತ್ತುವುದು ಬೇಡ~ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅರವಿಂದ  ಮಾಲಗತ್ತಿ ಇಲ್ಲಿ ತಿಳಿಸಿದರು.

ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಭಾನುವಾರ ಏರ್ಪಡಿಸಿದ್ದ `ಪೂನಾ ಒಪ್ಪಂದದ ನಂತರ  ಭಾರತದ ರಾಜಕಾರಣ~ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

`ಮೀಸಲಾತಿ ವಿರುದ್ಧ ಅಣ್ಣಾ ಹಜಾರೆ ಹೋರಾಟ ಮಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೋರಾಟಕ್ಕೆ ಹಜಾರೆ ಕೈ ಹಾಕಿದ ನಂತರ ಈ  ಬಗ್ಗೆ ಚರ್ಚಿಸುವುದು ಸೂಕ್ತ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸುವುದು ಬೇಡ~ ಎಂದು ಹೇಳಿದರು.

`ಅಣ್ಣಾ ಹಜಾರೆ ಹೋರಾಟಕ್ಕೆ ಸಂಬಂಧಿಸಿದಂತೆ ದಲಿತರು ಮತ್ತು ಪ್ರಗತಿಪರರು ನೀಡಿದ ಹೇಳಿಕೆಗಳು ವ್ಯತಿರಿಕ್ತವಾಗಿವೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ವಿಚಾರವಾದಿಗಳು, ಬುದ್ಧಿವಂತರು ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಹೊರಗೆ ನಿಂತು ಮಾಡುವುದನ್ನು ನಿಲ್ಲಿಸಬೇಕು. ಇಲ್ಲಿ ವಿಚಾರವಂತರು, ಬುದ್ಧಿಜೀವಿಗಳ ಪ್ರಶ್ನೆ ಅಲ್ಲ. ದೇಶ, ನೆಲದ ವಿಚಾರ ಬಂದಾಗ ಎಲ್ಲರೂ ಬೆಂಬಲಿಸಬೇಕು~ ಎಂದು ಕರೆ ನೀಡಿದರು.

`ಪೂನಾ ಒಪ್ಪಂದದಲ್ಲಿ ಗಾಂಧೀಜಿ ಧರ್ಮಮುಖಿಯಾದರೆ, ಅಂಬೇಡ್ಕರ್ ದಲಿತಮುಖಿಯಾಗಿದ್ದರು. ಆದರೆ ಇಬ್ಬರ ಆಲೋಚನೆ ಮನುಕುಲಕ್ಕೆ ಒಳಿತನ್ನು ಬಯಸುವುದು ಆಗಿತ್ತು. ಆಗಿನ ಸಂದರ್ಭದಲ್ಲಿ ಗಾಂಧೀಜಿ ಅವರು ಅಂಬೇಡ್ಕರ್ ಅವರನ್ನು ಹಲಗಿನ ಮೇಲೆ ನಿಲ್ಲಿಸಿದ್ದರು.

ಇದು ಚರಿತ್ರೆ ಓದಿದರೆ ತಿಳಿಯುತ್ತದೆ. ಕುವೆಂಪು ಅವರು ಸಹ ಗಾಂಧೀಜಿ ಅವರ ಪರ ನಿಂತಿದ್ದರು. ಗಾಂಧೀಜಿ ಉಪವಾಸ ಕುಳಿತರೆ ಅವರೂ ಉಪವಾಸ ಕೂರುತ್ತಿದ್ದರು. ಆದರೆ ಗಾಂಧೀಜಿಯ  ಚಿಂತನಶೀಲತೆ ಗೊತ್ತಿದ್ದರೆ ಕುವೆಂಪು ಅವರು ಉಪವಾಸ ಕೂರುತ್ತಿರಲಿಲ್ಲ~ ಎಂದು ಹೇಳಿದರು.

`ಪೂನಾ ಒಪ್ಪಂದದ ಸಂದರ್ಭದಲ್ಲಿ ಗಾಂಧೀಜಿ ದಲಿತರ ನಾಯಕ ಎಂದು ಹೇಳಿಕೊಂಡರು. ಆದರೆ ಒಪ್ಪಂದದ ನಂತರ ಯಾರು ನಾಯಕರು ಎಂಬುದು ಜನಕ್ಕೆ ತಿಳಿಯಿತು. ಕಾನೂನಿನ ಮೂಲಕ ಸಮಾಜದ ಪರಿವರ್ತನೆ ಸಾಧ್ಯ ಎಂಬ ಅಂಬೇಡ್ಕರ್ ಮಾತು ಎಲ್ಲರಲ್ಲಿ ನೆನಪಿರಬೇಕು~ ಎಂದು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಸಿ.ಬಸವರಾಜು, ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಸರಸ್ವತಿ, ವಿಚಾರವಾದಿ ಡಾ.ಎಸ್.ಪ್ರೇಮ್‌ಕುಮಾರ್, ಬಿವಿಎಸ್‌ನ ಮಾನಸಗಂಗೋತ್ರಿ ಘಟಕದ ಅಧ್ಯಕ್ಷ ವಸಂತಕುಮಾರ್ ಎಂ.ದೊಡ್ಡಮಗ್ಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT