ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಸಂಸತ್‌ಗಿಂತ ಹಿರಿಯರು: ಕೇಜ್ರಿವಾಲ್

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಸಂಸತ್‌ಗಿಂತ ದೊಡ್ಡವರು. ಒಬ್ಬ ಪ್ರಜೆಯಾಗಿ ಸಂಸತ್ ಅನ್ನು ಪ್ರಶ್ನಿಸುವ ಎಲ್ಲ ಹಕ್ಕೂ ಅವರಿಗಿದೆ~ ಎಂದು ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

`ಸಂಸತ್‌ಗಿಂತ ಪ್ರಜೆಗಳು ಹೆಚ್ಚು ಮುಖ್ಯ. ಅಣ್ಣಾ ಹಾಗೂ ಪ್ರತಿ ಪ್ರಜೆಯೂ ಸಂಸತ್‌ಗಿಂತ ದೊಡ್ಡವರು. ಸಂವಿಧಾನದ ಆಶಯವೂ ಇದೇ ಆಗಿದೆ~ ಎಂದು ಕೇಜ್ರಿವಾಲ್, ಸಿಎನ್‌ಎನ್- ಐಬಿಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂಸತ್‌ನಲ್ಲಿ ಮಸೂದೆಯೊಂದು ಅನುಮೋದನೆಯಾಗಲು ಉಪವಾಸ ಸತ್ಯಾಗ್ರಹದ ಬೆದರಿಕೆ ಎಷ್ಟು ಸರಿ ಎಂಬ ಪ್ರಶ್ನೆಗೆ ಅವರು ಈ ರೀತಿ ಸಮರ್ಥನೆ ನೀಡಿದರು.

ಹಿಸ್ಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕೆನ್ನುವ ಪ್ರಚಾರಾಂದೋಲನವನ್ನು ಸಮರ್ಥಿಸಿಕೊಂಡ ಅವರು,  ಜನಲೋಕಪಾಲ್ ಮಸೂದೆಗೆ ಅನುಮೋದನೆ ನೀಡುವುದು ಆಡಳಿತ ಪಕ್ಷದ ಕರ್ತವ್ಯ ಎಂದರು.

ಈ ಆಂದೋಲನವು ಕಾಂಗ್ರೆಸ್ ವಿರೋಧಿ ಅಲೆ ಹುಟ್ಟಿಸುವ ಉದ್ದೇಶದಿಂದ ಕೂಡಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, `ಲೋಕಪಾಲ್ ಮಸೂದೆಗೆ ಬೆಂಬಲ ನೀಡುವ ಆಶ್ವಾಸನೆಯನ್ನು ಈಡೇರಿಸದಿದ್ದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧವೂ ಪ್ರಚಾರ ಮಾಡಬೇಕಾಗುತ್ತದೆ~ ಎಂದು ಹೇಳಿದರು.

ಹಜಾರೆ ತಂಡವು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ, `ಇಲ್ಲಿ ಕಾಂಗ್ರೆಸ್ ಅಂದರೆ, ಯುಪಿಎ ಎಂದು ಅರ್ಥ. ಕೇವಲ ಕಾಂಗ್ರೆಸ್ ಪಕ್ಷವೊಂದೇ ಅಲ್ಲ~ ಎಂದು ಅವರು ಸ್ಪಷ್ಟನೆ ನೀಡಿದರು.

ಬಿಕ್ಕಟ್ಟು ಶಮನಕ್ಕೆ ಪ್ರಯತ್ನ
ಹಿಸ್ಸಾರ್ (ಹರಿಯಾಣ), (ಐಎಎನ್‌ಎಸ್):
ಹಿಸ್ಸಾರ್ ಉಪಚುನಾವಣೆ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಕಾಂಗ್ರೆಸ್ ಪಕ್ಷವು ಅಣ್ಣಾ ಹಜಾರೆ ಅವರ ಸಂಪರ್ಕದಲ್ಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಜನಲೋಕಪಾಲ್ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕಾರಣ ಉಪಚುನಾವಣೆಯಲ್ಲಿ ಆ ಪಕ್ಷದ ಪರ ಮತ ಹಾಕದಿರುವಂತೆ ಅಣ್ಣಾ ತಂಡ ಪ್ರಚಾರ ನಡೆಸುತ್ತಿದೆ.

`ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಬಹುಶಃ ಕಾಂಗ್ರೆಸ್‌ನ ಕೆಲವರು ಅಣ್ಣಾ ಅವರನ್ನು ಸಂಪರ್ಕಿಸುತ್ತಿರಬಹುದು~ ಎಂದು ಕೇಜ್ರಿವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಬಲ ಲೋಕಪಾಲ್ ಮಸೂದೆ ಅನುಮೋದನೆಗೆ ಕಾಂಗ್ರೆಸ್ ಪಕ್ಷ ಎಲ್ಲಿಯ ತನಕ ಬದ್ಧವಾಗಿರುವುದಿಲ್ಲವೋ, ಅಲ್ಲಿಯವರೆಗೆ ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

`ಇದೇ 13ರಂದು ನಡೆಯಲಿರುವ ಹಿಸ್ಸಾರ್ ಉಪಚುನಾವಣೆಯನ್ನು ನಮ್ಮ ತಂಡವು ಲೋಕಪಾಲ್ ಮಸೂದೆಯ ಮೇಲಿನ ಜನಾಭಿಮತ ಎಂದು ಪರಿಗಣಿಸುತ್ತಿದೆ. ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಉತ್ತರ ನೀಡುವಂತೆ ನಾನು ಹಿಸ್ಸಾರ್ ಜನರಿಗೆ ಮನವಿ ಮಾಡಿಕೊಳ್ಳುತ್ತೇನೆ~ ಎಂದೂ ಹೇಳಿದರು.

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಜಾರೆ: ದಿಗ್ವಿಜಯ್ ಲೇವಡಿ
ಆಗ್ರಾ (ಪಿಟಿಐ):
ಅಣ್ಣಾ ಹಜಾರೆ ಅವರು ಕಾಂಗ್ರೆಸ್ ವಿರೋಧಿ ಪಕ್ಷಗಳ ಮುಖವಾಡ ಹಾಕಿಕೊಂಡಿರುವುದರಿಂದ ಬಿಜೆಪಿ ಅವರನ್ನು ತನ್ನ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಉದ್ದೇಶಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಉಳಿದ ಪಕ್ಷಗಳ ಅಭ್ಯರ್ಥಿಗಳು ಎಷ್ಟು ವಿಶ್ವಾಸಾರ್ಹರು ಎನ್ನುವುದು ಗೊತ್ತಿದ್ದೂ ಹಿಸ್ಸಾರ್ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತೆ ಹಜಾರೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಶನಿವಾರ ಸಂಜೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ ಆಸ್ತಿ ಸಂಪಾದಿಸಿರುವ ಮುಖ್ಯಮಂತ್ರಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಪ್ರತಿಭಟನೆ ಮಾಡುವುದನ್ನು ಬಿಟ್ಟು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹಜಾರೆ ತಂಡ ಮೂರು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದು ವಿಪರ್ಯಾಸ.  ಅಣ್ಣಾ ತಂಡದ ಸದಸ್ಯರೆಲ್ಲರೂ ಕಾಂಗ್ರೆಸ್ ವಿರೋಧಿಗಳು ಎಂದು ಅವರು ದೂರಿದರು.

ತೀವ್ರ ಹಣಾಹಣಿ: ಕಾಂಗ್ರೆಸ್‌ಗೆ ಚಿಂತೆ
ಒಂದು ಕಡೆ ಹಿಸ್ಸಾರ್ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟ್ದ್ದಿದರೆ, ಇನ್ನೊಂದೆಡೆ ಆಡಳಿತಾರೂಢ ಕಾಂಗ್ರೆಸ್‌ಗೆ ಅಣ್ಣಾ ತಂಡವನ್ನು ಎದುರಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ.

ಪಕ್ಷವು ಮೂರು ಬಾರಿ ಆಯ್ಕೆಯಾಗಿದ್ದ ಜೈ ಪ್ರಕಾಶ್ (58) ಅವರನ್ನು  ಹರಿಯಾಣ ಜನಹಿತ ಕಾಂಗ್ರೆಸ್ (ಎಚ್‌ಜೆಸಿ) ಅಭ್ಯರ್ಥಿ ಕುಲ್‌ದೀಪ್ ಬಿಷ್ಣೋಯಿ (42) ಅವರ ವಿರುದ್ಧ ಕಣಕ್ಕೆ ಇಳಿಸಿದೆ. ಐಎನ್‌ಎಲ್‌ಡಿಯ ಅಜಯ್ ಸಿಂಗ್ ಚೌಟಾಲ (50) ಕೂಡ ಕಣದಲ್ಲಿದ್ದಾರೆ.

ಎಚ್‌ಜೆಸಿ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT