ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಗೆ ಬೆಂಬಲ: ಬತ್ತದ ಉತ್ಸಾಹ

Last Updated 23 ಆಗಸ್ಟ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಮುಂದುವರೆದಿದ್ದು, ಮಂಗಳವಾರವೂ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಹತ್ತಾರು ಸಂಘಟನೆಗಳ ಸದಸ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವರ್ತಕರು ಹೋರಾಟದಲ್ಲಿ ಭಾಗವಹಿಸಿದ್ದರು. ಹೋರಾಟದ ಎಂಟನೇ ದಿನವಾದರೂ ಜನರ ಉತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ.
ತ್ರಿವರ್ಣ ಧ್ವಜ ಹಿಡಿದ ಮತ್ತು ಗಾಂಧಿ ಟೋಪಿ ಧರಿಸಿದ ನೂರಾರು ಯುವಕರು ಉದ್ಯಾನದಲ್ಲಿ ಸೇರಿದ್ದರು.

ಗುಂಪು ಗುಂಪಾಗಿ ಬಂದಿದ್ದವರು ತಮ್ಮದೇ ರೀತಿಯಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡರು. ಕೆಲವರು ಭ್ರಷ್ಟಾಚಾರದ ವಿರುದ್ಧ ಮೌನ ಪ್ರತಿಭಟನೆ ಮಾಡಿದರೆ, ಇನ್ನೂ ಕೆಲವರು ಘೋಷಣೆಗಳನ್ನು ಕೂಗಿದರು. ಎಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿವಿಧ ಬಡಾವಣೆಗಳಲ್ಲೂ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಜನಲೋಕಪಾಲ ಮಸೂದೆ ಅಂಗೀಕರಿಸುವಂತೆ ಆಗ್ರಹಿಸಿದರು. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸದಸ್ಯರು ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಿದರು. ಮಂಡಳಿತ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್, ಖಜಾಂಚಿ ಎಸ್.ಎ.ಚಿನ್ನೇಗೌಡ, ನಟಿಯರಾದ ಬಿ.ಸರೋಜಾದೇವಿ, ಜಯಮಾಲಾ, ಶೃತಿ, ಪ್ರಿಯಾ ಹಾಸನ್, ನಟರಾದ ಅಭಿಜಿತ್, ವಿಜಯ್ ರಾಘವೇಂದ್ರ, ನಿರ್ಮಾಪಕರಾದ ಎನ್.ಎಂ.ಸುರೇಶ್, ಕರಿಸುಬ್ಬು, ಎ.ಗಣೇಶ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ನಿರಂತರವಾಗಿ ಬೆಂಬಲ ನೀಡುವುದಾಗಿ ಅವರು ಘೋಷಿಸಿದರು.

ಕಮ್ಮಗೊಂಡನಹಳ್ಳಿ ನಿವಾಸಿಗಳು ಬೃಹತ್ ರ‌್ಯಾಲಿ ನಡೆಸಿದರು. ಎಂ.ಎನ್.ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ವರ್ತಕರ ಸಂಘದ ಸದಸ್ಯರು, ಸಾರ್ವಜನಿಕರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಜನರು ಪ್ರಬಲ ಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಕರ್ನಾಟಕ ಕಾಪರ್ ವೈಂಡಿಂಗ್ ವಯರ್ ಅಂಡ್ ಸಬ್‌ಮರ್ಸಿಬಲ್ ಟ್ರೇಡರ್ಸ್‌ (ಕಾಸ್ಟಾ) ಸಂಘದ ಸುಮಾರು ನೂರು ಮಂದಿ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಬೆಂಬಲಿಸಿದರು. ಹಜಾರೆ ಅವರನ್ನು ಬೆಂಬಲಿಸಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದರು. ಕೆ.ಆರ್.ವೃತ್ತದಲ್ಲಿರುವ ಯುವಿಸಿಎ ಎಂಜಿನಿಯರಿಂಗ್ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕುಮಾರಸ್ವಾಮಿಲೇಔಟ್ ಸಮೀಪದ ಇಸ್ರೊ ಬಡಾವಣೆಯ ನೂರಾರು ನಾಗರಿಕರು ರ‌್ಯಾಲಿ ನಡೆಸಿದರು. ವಿಜ್ಞಾನಿಗಳು, ಎಂಜಿನಿಯರ್‌ಗಳು, ಗೃಹಿಣಿಯರು ಇದರಲ್ಲಿ ಭಾಗವಹಿಸಿದ್ದರು.

ಮುನ್ನೂರು ಅಂಗಡಿಗಳನ್ನು ಬಂದ್ ಮಾಡಿದ ಸುಲ್ತಾನ್‌ಪೇಟೆಯ ಬೆಂಗಳೂರು ಡಿಸೈನರ್ಸ್‌ ಅಂಡ್ ಪ್ರಿಂಟರ್ಸ್‌ ಸಂಘಟನೆಯ ಸದಸ್ಯರು ಬೃಹತ್ ರ‌್ಯಾಲಿ ನಡೆಸಿದರು. ಸುಲ್ತಾನ್‌ಪೇಟೆ, ನಗರ್ತಪೇಟೆ, ಮನವರ್ತಿಪೇಟೆ ಮೂಲಕ ಸಾಗಿದ ರ‌್ಯಾಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಕ್ತಾಯವಾಯಿತು. ಸಂಘದ ಅಧ್ಯಕ್ಷ ಅಶೋಕ್ ಅವರು ಮಾತನಾಡಿ, `ಅಣ್ಣಾ ಅವರ ಹೋರಾಟಕ್ಕೆ ಬೆಂಬಲ ಸೂಚಿಸಲು ಹಾಗೂ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಈ ಬೃಹತ್ ರ‌್ಯಾಲಿ ನಡೆಸಲಾಗಿದೆ~ ಎಂದರು.

ಸಂಸದರ ದೂರವಾಣಿ ಸಂಖ್ಯೆ: ರಾಜ್ಯದ ಎಲ್ಲ ಸಂಸದರ ದೂರವಾಣಿ ಸಂಖ್ಯೆಯನ್ನು ರಟ್ಟಿನ ಬೋರ್ಡ್‌ನಲ್ಲಿ ಬರೆದಿಡಲಾಗಿತ್ತು. ಸಂಸದರಿಗೆ ಕರೆ ಮಾಡಿ ಲೋಕಪಾಲ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಜನ ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಅವರ ಮನವೊಲಿಸಿ ಎಂದು ಬೋರ್ಡ್‌ನಲ್ಲಿ ಬರೆಯಲಾಗಿತ್ತು.

ನೂರಾರು ಮಂದಿ ತಮ್ಮ ಕ್ಷೇತ್ರದ ಸಂಸದರ ಸಂಖ್ಯೆಯನ್ನು ಬರೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಸಂತೋಷ್ ಹೆಗ್ಡೆ ಮಾತನಾಡಿ, `74 ವರ್ಷ ವಯಸ್ಸಿನ ಅಣ್ಣಾ ಹಜಾರೆ ಅವರು ಹೋರಾಟ ಆರಂಭಿಸಿದ್ದಾರೆ. ಅವರು ಎಲ್ಲಿಯವರೆಗೂ ಹೋರಾಟ ಮಾಡುವರೋ ಆವರೆಗೂ ಬೆಂಬಲ ನೀಡುತ್ತೇನೆ~ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT