ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಸ್ಥಿತಿಯಲ್ಲಿ ಕೈಮಗ್ಗ ಸದಸ್ಯರು

ಹಳ್ಳ ಹಿಡಿದ ಸುವರ್ಣ ವಸ್ತ್ರ ಯೋಜನೆ
Last Updated 19 ಏಪ್ರಿಲ್ 2013, 13:31 IST
ಅಕ್ಷರ ಗಾತ್ರ

ಸಿದ್ದಾಪುರ: ನಕ್ಸಲ್ ಪೀಡಿತ ಪ್ರದೇಶಗಳ ಮಹಿಳೆಯರಿಗೆ ಜೀವನ ಭದ್ರತೆ ಕಲ್ಪಿಸುವ  ನಿಟ್ಟಿನಲ್ಲಿ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ  `ಸುವರ್ಣ ವಸ್ತ್ರ ಯೋಜನೆ' ಅಧಿಕಾರಿಗಳು ಮತ್ತು ಸದಸ್ಯರ ಪರಸ್ಪರ ಅಸಹಕಾರದಿಂದ ಹಳ್ಳಹಿಡಿಯುವ ಹಂತಕ್ಕೆ ತಲುಪಿದೆ.

ಕುಂದಾಪುರ ತಾಲ್ಲೂಕಿನ ಕೊಲ್ಲೂರು, ಚಿತ್ತೂರು, ಹಳ್ಳಿಹೊಳೆ, ಕಮಲಶಿಲೆ, ವ್ಯಾಪ್ತಿಯಲ್ಲಿ ಗ್ರಾಮೀಣ ಜೀವನ ಭದ್ರತೆ ಉದ್ದೇಶದಿಂದ ಆರಂಭವಾದ ಈ ಯೋಜನೆಯಡಿ ಈ ಭಾಗದ 100 ಮಂದಿ ಸದಸ್ಯರು ತರಬೇತಿ ಪಡೆದಿದ್ದು, ಅಧಿಕಾರಿಗಳ ಅಸಹಕಾರದಿಂದ ಆತ್ತ ಕೈಮಗ್ಗವೂ ಇಲ್ಲದೇ ಇತ್ತ ಕೃಷಿ ಕಾರ್ಯವೂ ಇಲ್ಲದೇ ತೊಳಲಾಡುತ್ತಿದ್ದಾರೆ.

2009ರಲ್ಲಿ ಕೊಲ್ಲೂರು ಅರಣ್ಯಾಧಿಕಾರಿ ಎಸ್.ವಿ.ಕಂಬಳಿ ಅವರ ಮಾರ್ಗದರ್ಶನದಲ್ಲಿ ಕ್ರೀಡಾ ಮತ್ತು ಜವಳಿ ಇಲಾಖೆಯ ಸಚಿವ ಗೂಳಿಹಟ್ಟಿ ಡಿ.ಶೇಖರ್‌ವರು ಸ್ವತಃ ಮುತುವರ್ಜಿ ವಹಿಸಿ ಕೈಮಗ್ಗ ತರಬೇತಿ ಕೇಂದ್ರಗಳನ್ನು ಕೊಲ್ಲೂರು ಸಮೀಪದ ಬಾವಡಿ, ಚಿತ್ತೂರಿನ ಹರ, ಹಳ್ಳಿಹೊಳೆ, ಕಬ್ಬಿನಾಲೆ ಮತ್ತು ವಾಟೆಬಚ್ಚಲುಗಳಲ್ಲಿ ಆರಂಭಿಸಿದ್ದರು. 

2009ರಿಂದ ಪ್ರತಿ 6 ತಿಂಗಳಂತೆ 5 ಕೇಂದ್ರಗಳಲ್ಲಿ 20ಜನರಂತೆ 100 ಜನ ಶಿಬಿರಾರ್ಥಿಗಳು ತರಬೇತಿ ಪಡೆದಿದ್ದು, ಪ್ರತಿಕೇಂದ್ರದಲ್ಲಿ ಒಬ್ಬರು ನುರಿತ ತರಬೇತಿದಾರರನ್ನು ನೇಮಕ ಮಾಡಿ ಅವರಿಗೆ 6 ಸಾವಿರ ಮಾಸಿಕ ಸಂಬಳವನ್ನು ನೀಡಲಾಗುತ್ತಿತ್ತು. ತರಬೇತಿ ಅವಧಿಯಲ್ಲಿ ಮಾಸಿಕ 2ಸಾವಿರ ಶಿಷ್ಯ ವೇತನ ನೀಡಲಾಗಿತ್ತು.

ತರಬೇತಿ ಪಡೆದ ಹರಕೇಂದ್ರದ 15, ಕಬ್ಬಿನಾಲೆ ಕೇಂದ್ರದ 18 ಮತ್ತು ವಾಟೆಬಚ್ಚಲು ಕೇಂದ್ರದ ಶಿಬಿರಾರ್ಥಿಗಳಿಗೆ ಕೈಮಗ್ಗದ ನಿಗಮವೇ 66 ಕೈಮಗ್ಗದ ಯಂತ್ರಗಳನ್ನು ವಿತರಿಸಿತ್ತು. ಅಲ್ಲದೇ  ಕೆಲವು ಕೇಂದ್ರದ ಫಲಾನುಭವಿಗಳಿಗೆ ಉಚಿತ ಸೋಲಾರ್ ದೀಪ, ಪರಿಶಿಷ್ಟರಿಗೆ ಸೌಲಭ್ಯ ಮತ್ತು ಸ್ವಂತ ಮನೆ ನಿರ್ಮಾಣಕ್ಕೆ ರೂ.60ಸಾವಿರ ಸಹಾಯಧನ ನೀಡಲಾಗಿತ್ತು.

ತರಬೇತಿ ಅವಧಿಯಲ್ಲಿ ಪ್ರಮುಖ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರಗಳನ್ನು ವೀಕ್ಷಿಸಿದ್ದರು ಮತ್ತು ಹಳ್ಳಿಹೊಳೆ ಮತ್ತು ಗ್ರಾಮೀಣ ಭಾಗದ ರೈತ ಮಹಿಳೆಯರು ಉತ್ಪಾದಿಸಿದ ವಸ್ತ್ರಗಳನ್ನು ಚಿತ್ತೂರು ವ್ಯಾಪ್ತಿಯಲ್ಲಿ ಮತ್ತು ಚಕ್ರಾಮೈದಾನ ಪ್ರದೇಶಲ್ಲಿ  ಕೈಮಗ್ಗ ವಸ್ತ್ರಗಳನ್ನು ಮಾರಾಟ ಮತ್ತು ವಿಕ್ರಯಿಸುವ ಕೇಂದ್ರಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು.

ಕೈಕೊಟ್ಟ ಇಲಾಖೆ: 66 ಯಂತ್ರಗಳನ್ನು ಪಡೆದ ಎಲ್ಲಾ ಕೇಂದ್ರಗಳ ಮಹಿಳೆಯರು ತಮಗೆ  ನೀಡಿದ ಯಂತ್ರಗಳನ್ನು ಸ್ವಂತ ಖರ್ಚಿನಲ್ಲಿ ಮನೆಗೆ ತಂದಿದ್ದಾರೆ.  ಕೆಲವು ಮಹಿಳೆಯರು ಕೈಮಗ್ಗ ನೇಯ್ಗೆಯನ್ನು ಆರಂಭಿಸಿದ್ದು, ಕೆಲವು ಮನೆಯ ಮೂಲೆಯಲ್ಲಿ ಬಿದ್ದಿವೆ. ಹಳ್ಳಿ ಹೊಳೆ ಹೊಸಬಾಳು ಕೇಂದ್ರದಲ್ಲಿ 2010 ಫೆಬ್ರುವರಿಯಿಂದ 20 ಜನ ಫಲಾನುಭವಿಗಳಲ್ಲಿ ಸದಸ್ಯರಾದ ರತ್ನ 8 ಬೆಡ್‌ಶೀಟ್, ಲಕ್ಷ್ಮಿ, ಗುಲಾಬಿ 15, ಸುಶೀಲಾ 2, ರೇವತಿ 1, ಗಿರಿಜಾ 4, ಶಾರದಾ ಮತ್ತು ಮಂಜುಳಾ ಒಂದು ಧೋತಿಯನ್ನು  ತಯಾರಿಸಿದ್ದಾರೆ. ಇದೇ ಕೇಂದ್ರ  ತರಬೇತಿ ಕೇಂದ್ರದಲ್ಲಿ 15 ಯಂತ್ರವನ್ನು ಪಡೆದಿದ್ದು, 5 ಯುವತಿಯರು ಮದುವೆಯಾಗಿ ಬೇರೆ ಊರಿಗೆ ಹೋಗಿದ್ದು, ಅವರಿಗೆ ನೀಡಿದ ಯಂತ್ರಗಳು ಮನೆಯಲ್ಲಿ ಧೂಳು ತಿನ್ನುತ್ತಿವೆ. ಸದಸ್ಯರಿಗೆ ಸೋಲಾರ್ ಮತ್ತು ಮನೆಗಳನ್ನು ನೀಡಲಾಗಿದೆ. ಆದರೆ ಬಟ್ಟೆಯ ತಯಾರಿಕೆ ಮಂದಗತಿಯಲ್ಲಿ ಸಾಗುತ್ತಿದೆ.

`ಹಲವು ತಿಂಗಳಿನಿಂದ ಅಧಿಕಾರಿಗಳು ನಮ್ಮ ಘಟಕಕ್ಕೆ ಬರುತ್ತಿಲ್ಲ. ಮಹಿಳೆಯರು ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ' ಎಂದು ಕಬ್ಬಿನಾಲೆ ಕೇಂದ್ರದ ತರಬೇತುದಾರ ಅಶೋಕ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ವಾಟೆಬಚ್ಚಲಿನಲ್ಲಿ ತರಬೇತಿ ಪಡೆದ 20 ಸದಸ್ಯರಲ್ಲಿ ಇಬ್ಬರಿಗೆ ಸೋಲಾರ್ ನೀಡಲಾಗಿದೆ. `ನಿಗಮದವರು ಯಂತ್ರಗಳನ್ನು ಮಾತ್ರ ನೀಡಿದ್ದು, ಮಗ್ಗಕ್ಕೆ ನೂಲನ್ನು ಸುತ್ತಲು ಬೇರೆ ಕಡೆಗೆ ತೆಗೆದುಕೊಂಡು ಹೋಗಬೇಕು. ಕಳಪೆ ನೂಲನ್ನು ಸರಬರಾಜು ಮಾಡಿದ್ದು, ಇಡೀ ದಿನಕ್ಕೆ ಒಂದು ಲುಂಗಿ ತಯಾರಿಸಬಹುದು. ಒಂದು ಲುಂಗಿಗೆ ರೂ. 52 ನೀಡಿದರೆ ಸಾಕಾಗುವುದಿಲ್ಲ. ಬೇರೆ ಕೂಲಿ ಕೆಲಸಕ್ಕೆ ಹೋದರೆ 200ರೂಪಾಯಿಗೂ ಹೆಚ್ಚು ಸಂಬಳ ನೀಡುತ್ತಾರೆ. ಬೆಡ್‌ಶೀಟ್ ಮಾಡಲು ಸೂಚಿಸಿದರೆ ನಾವು ಮಾಡುತ್ತೇವೆ. ಉತ್ಪಾದಿಸಿದ ಬಟ್ಟೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುವುದಿಲ್ಲ' ಎಂದು ವಾಟೆಬಚ್ಚಲು ಮಹಿಳೆಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ನಿರಂತರ ಉತ್ಪಾದನೆ ಬೇಕು: ತಾಲ್ಲೂಕಿನಲ್ಲಿರುವ 4 ಕೈಮಗ್ಗ ಕೇಂದ್ರಗಳ ಮೂಲಕ ತರಬೇತಿ ಪಡೆದ ಸದಸ್ಯರಿಗೆ ಮಗ್ಗ ಯಂತ್ರಗಳನ್ನು ವಿತರಿಸಿದ್ದು, ಅವರಿಗೆ ಕೆಸಿಡಿಸಿ ನೂಲನ್ನು ಸರಬರಾಜು ಮಾಡಲಾಗಿದೆ. ಅಲ್ಲದೇ ಅವರು ಉತ್ಪಾದಿಸಿದ ಬಟ್ಟೆಗಳನ್ನು ಪಡೆದು ಸದಸ್ಯರಿಗೆ  ನೀಡಲಾಗಿದೆ. ಆದರೆ ಅವರು ನಿರಂತರವಾಗಿ ಬಟ್ಟೆ ಉತ್ಪಾದನೆ ಮಾಡುತ್ತಿಲ್ಲ, ಕೈಮಗ್ಗ ಯಂತ್ರದಿಂದ ನಿರಂತರ ಬಟ್ಟೆಯನ್ನು ಉತ್ಪಾದನೆ ಮಾಡದೇ ಇದ್ದರೆ ಯಂತ್ರದ ಲೀಡ್‌ಗಳು ಹಾಳಾಗಿ ಹೋಗಿ ಬಟ್ಟೆ ಉತ್ಪಾದಿಸಲು ಆಗುವುದಿಲ್ಲ.  ಆದ್ದರಿಂದ ಸದಸ್ಯರು ನಿರಂತರ ಬಟ್ಟೆ ಉತ್ಪಾದನೆ ಮಾಡಬೇಕು  ಎಂದು ಉಡುಪಿ ಜಿಲ್ಲೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿ ನರೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT