ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಂತ ಆತ್ಮೀಯ ‘ಆತ್ಮೀಯರು’

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎಚ್‌. ಎಂ. ಮರುಳಸಿದ್ಧಯ್ಯ ಅವರು (ಹಿರೇಕುಂಬಳ ಗುಂಟೆ ಮಠದ) ಬರೆದಿರುವ ‘ಆತ್ಮೀಯರು’ ಕೃತಿ ನನಗೆ ತಿಳಿದ ಮಟ್ಟಿಗೆ ಹೊಸತು. ಅವರ ಹುಟ್ಟೂರು ಹಿರೇಕುಂಬಳ ಗುಂಟೆಗೆ ಹೋಗಿದ್ದಾಗ ನನಗೆ ಅನಿಸಿದ್ದು, ಆ ಊರಲ್ಲಿ ಮತ್ತು ಇತರ ಊರುಗಳಲ್ಲಿ ಅವರು ಮಾಡಿರುವ ‘ಸಮಾಜ ಕಾರ್ಯ’ ಅಪೂರ್ವವಾದುದು.

ಅವರು ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾಗಿ ಸಾವಿರಾರು  ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಸಮಾಜ ಕಾರ್ಯವನ್ನು ಬೋಧಿಸಿ ಅವರಿಗೆ ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಚೋದನೆಯಾಗಿದ್ದಾರೆ. ಅವರ ವಿದ್ವತ್ತಿನಷ್ಟೇ  ಪ್ರಮುಖವಾದುದು ಅವರೇ ನಿಸ್ವಾರ್ಥವಾಗಿ ಹಳ್ಳಿ ಹಳ್ಳಿಗಳಲ್ಲಿ ಮಾಡಿರುವ ಸಮಾಜ ಕಾರ್ಯ. ಅದರಿಂದಾಗಿ ಸಾವಿರಾರು ಹಳ್ಳಿಗಳ ಜನರು ಎಚ್ಚೆತ್ತಿದ್ದಾರೆ, ಅವರಿಗಾಗಿ ಜನರು ಬಹುವಾಗಿ ಸುಧಾರಿಸಿದ್ದಾರೆ, ಆರ್ಥಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ದೃಢವಾಗಿದ್ದಾರೆ.

ಮರುಳಸಿದ್ಧಯ್ಯ ಅವರಿಗೆ ಈಗ ಎಂಬತ್ತಮೂರು ವರ್ಷ ವಯಸ್ಸಾಗಿ, ಓಡಾಡಲು ತೊಂದರೆಯಾಗಿ, ಹೊರಗಡೆ ಹೋದಾಗ ಇತರರು ತಳ್ಳುವ ಚಕ್ರದ ವಾಹನವನ್ನೇ ಅವಲಂಬಿಸುವ ದೈಹಿಕ ಸ್ಥಿತಿಯಲ್ಲಿದ್ದರೂ ಅವರ ಮಾನಸಿಕ ಸ್ಥಿತಿ ಹಿಂದಿಗಿಂತ ದೃಢವಾಗಿದೆ. ದೈಹಿಕ ಶಕ್ತಿಯನ್ನು ಮಾನಸಿಕ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿರುವುದು ಅತ್ಯಂತ ಅಚ್ಚರಿಯ ವಿಷಯ. ಅವರ ಆತ್ಮೀಯತೆ, ಲೋಕಜ್ಞಾನ, ಜ್ಞಾಪಕಶಕ್ತಿ ಇವುಗಳ ನೇರ ಪರಿಚಯ ಮಾಡಿಕೊಡುತ್ತದೆ, ಅವರ ಲೇಖನಗಳ ಸಂಗ್ರಹ ‘ಆತ್ಮೀಯರು’ (ಕಂಡಂತೆ, ಕಂಡಷ್ಟು) ಕೃತಿ.

ತನ್ನ ಹಿಂದಿನ ಬದುಕಿನ ಕಾಲದ ಆತ್ಮೀಯರನ್ನು, ಬಂಧುಗಳನ್ನು, ಬಾಲ್ಯದ ಗೆಳೆಯರನ್ನು, ಗುರುಗಳನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಕೃತಿಯಲ್ಲಿ ಮೂವತ್ತೊಂದು ಜನ ‘ಆತ್ಮೀಯರ’ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟಿದ್ದಾರೆ. ಅವರಿಗೂ ತಮಗೂ ನಿಕಟ ಸಂಪರ್ಕವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಪ್ರತಿ ಲೇಖನ ಬರೆಯುವಾಗಲೂ ಮರುಳಸಿದ್ಧಯ್ಯನವರು ಹನಿಗಣ್ಣಿನಿಂದ ಭಾವಾವಿಷ್ಟರಾಗಿದ್ದರೆ ಆಶ್ಚರ್ಯವಿಲ್ಲ.

ಈ ಕೃತಿಯಲ್ಲಿ ಕಾಲೇಜಿನ ಸ್ನೇಹಿತ ರಾಮಚಂದ್ರಪ್ಪನಿಂದ ಹಿಡಿದು ಗುರು ಗೋಯಲ್‌ರವರೆಗೂ ಇರುವ ಚಿತ್ರಣಗಳನ್ನು ಕಾಣಬಹುದು. (ಸ್ನೇಹಿತನ ಹೆಸರಿನ ಮುಂದೆ ಏಕವಚನ ಪ್ರತ್ಯಯ ಗುರುವಿನ ಹೆಸರಿನ ಮುಂದೆ ಬಹುವಚನ ಪ್ರತ್ಯಯ ಗಮನಿಸಿ – ಇದು ಸರ್ವೇ ಸಾಮಾನ್ಯ). ಉದಾಹರಣೆಗೆ ‘ಅವ್ವನಾದ ಅಕ್ಕ: ಬಸಕ್ಕ’ ಎನ್ನುವ ಲೇಖನ ನೋಡಬಹುದು. ತಮ್ಮ ಬಾಲ್ಯದ ಗೆಳೆಯ ನಾಗಪ್ಪನವರ ಬಗ್ಗೆ ಬರೆದಿರುವ ಲೇಖನದಲ್ಲಿ ತಾವು ಹುಟ್ಟಿ ಬೆಳೆದ ಬಳ್ಳಾರಿ ಜಿಲ್ಲೆಯ ಪರಿಚಯವಿದೆ; ನಾಗಪ್ಪನವರಂತಹ ಶ್ರೇಷ್ಠ, ಆದರೆ ಪ್ರಖ್ಯಾತರಲ್ಲದ ವ್ಯಕ್ತಿಯ ಪರಿಚಯವಿದೆ.

ಹಲವು ಸಾಹಿತಿಗಳ ಜೊತೆ ಒಡನಾಟ ಬೆಳೆಸಿಕೊಂಡಿದ್ದ ಮರುಳಸಿದ್ಧಯ್ಯನವರು ವೃತ್ತಿಯಲ್ಲಿ ಸಮಾಜಕಾರ್ಯ ಪ್ರಾಧ್ಯಾಪಕರಾಗಿದ್ದರೂ ಪ್ರವೃತ್ತಿಯಲ್ಲಿ ಇಂದಿಗೂ ಸಾಹಿತಿಗಳೇ, ಹಲವು ಸಾಹಿತ್ಯಕ ಕೃತಿ ರಚಿಸಿರುವರಲ್ಲದೆ ಅವರ ಸಮಾಜಕಾರ್ಯ ಸಂಬಂಧ ಲೇಖನಗಳಲ್ಲೂ ಒಬ್ಬ ಸಾಹಿತಿಯ ಕಾವ್ಯಮಯ ಭಾಷೆ ಎದ್ದು ಕಾಣುತ್ತದೆ. ಚೆನ್ನವೀರ ಕಣವಿ, ಗೋಪಾಲಕೃಷ್ಣ ಅಡಿಗ. ಪಾ.ವೆಂ. ಆಚಾರ್ಯ, ಬಸವರಾಜ ಕಟ್ಟೀಮನಿ ಅವರಂತಹ ಶ್ರೇಷ್ಠ ಕವಿ, ಸಾಹಿತಿಗಳು,
ಟಿ. ತಿಪ್ಪೇಸ್ವಾಮಿ, ಸುಶೀಲಮ್ಮರಂತಹ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತರನ್ನು, ಶಿಕ್ಷಣ ತಜ್ಞರನ್ನು, ಎಂ.ವಿ. ರಾಜಶೇಖರನ್‌,
ಎಚ್‌.ಎನ್‌. ದೊರೆಸ್ವಾಮಿ ಅವರಂತಹ ದೇಶಭಕ್ತರನ್ನು, ಹಿರೇಮಲ್ಲೂರು ಈಶ್ವರನ್‌, ಸಿ.ಪಿ. ಗೋಯಲ್‌ರಂತಹ ಶ್ರೇಷ್ಠ ವಿದ್ವಾಂಸರನ್ನು, ಗೊ.ರು. ಚನ್ನಬಸಪ್ಪ, ರಾ.ನಂ. ಚಂದ್ರಶೇಖರ್‌ ಅವರಂತಹ ಕನ್ನಡ ಕಾರ್ಯಕರ್ತರನ್ನು ಕುರಿತು ಮಾಹಿತಿ ಸಂಪದ್ಭರಿತ ಲೇಖನಗಳಿವೆ.

ಜಯಲಕ್ಷ್ಮಮ್ಮಣ್ಣಿ,  ಬಿ.ಎಲ್‌. ಮಂಜುನಾಥ್‌ ಅವರು ಕುಲಪತಿಗಳಾಗಿದ್ದ ಅವಧಿಯ ಅವರ ಆತ್ಮೀಯ ಪರಿಚಯ ಇಲ್ಲಿದೆ. ‘ವಿಶ್ವವನ್ನೇ ತಮ್ಮ ಹೃದಯದಲ್ಲಿಟ್ಟುಕೊಂಡು ಕಾಪಾಡಿದ ಸುತ್ತೂರು ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ’ ಅವರ ಕುರಿತ ಲೇಖನವಂತೂ ನನ್ನನ್ನು ಭಾವುಕನನ್ನಾಗಿಸಿತು. ನಾನೂ, ಮರುಳಸಿದ್ಧಯ್ಯನವರಂತೆ 1953ರ ಕಾಲದಲ್ಲಿ ಮೈಸೂರಿನ ಸುತ್ತೂರು ಹಾಸ್ಟೆಲ್ಲಿನಲ್ಲಿದ್ದಾಗ ಆ ಹಾಸ್ಟೆಲ್‌ ಅನ್ನು ನಡೆಸುತ್ತಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳನ್ನು ನಾನು ದರ್ಶನ ಮಾಡಿದ್ದರೂ ಅವರನ್ನು ಮರುಳಸಿದ್ಧಯ್ಯನವರಷ್ಟು  ಹತ್ತಿರದಿಂದ ಕಂಡಿರಲಿಲ್ಲ. ಇಲ್ಲಿ ಪರಿಚಯ ಮಾಡಿಕೊಟ್ಟಿರುವ ಮಹನೀಯರು ಕರ್ನಾಟಕದವರು ಮಾತ್ರವಲ್ಲ, ಭಾರತದವರು ಮತ್ತು ವಿದೇಶಿ ಮಹನೀಯರೂ ಇದ್ದಾರೆ.

ಮರುಳಸಿದ್ಧಯ್ಯನವರು ಭಾರತದ ಹಲವೆಡೆ ಗೋಷ್ಠಿಗಳಲ್ಲಿ ಭಾಗವಹಿಸಿರುವುದಲ್ಲದೆ ವಿದೇಶಗಳಿಗೆ ಹಲವು ಬಾರಿ ಹೋಗಿ ಅಲ್ಲಿಯೂ ಪ್ರಬಂಧಗಳನ್ನು ಮಂಡಿಸಿ  ವಿದ್ವಾಂಸರ ಮೆಚ್ಚುಗೆ ಪಡೆದಿದ್ದಾರೆ. ಈಗಲೂ ಅವರ ಮನೆಗೆ ದೇಶ, ವಿದೇಶಗಳ ವಿದ್ವಾಂಸರು ಬಂದು ಅವರ ಭೇಟಿ ಮಾಡಿ ಅವರ ಜೊತೆ ಕಾಲ ಕಳೆಯುತ್ತಾರೆ; ಹಾಗೆಯೇ ಸಮಾಜಕಾರ್ಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕಾಣುವ ಮರುಳಸಿದ್ಧಯ್ಯನವರು ಎಲ್ಲ ಕಡೆಯ ಪ್ರಾಜ್ಞರನ್ನು ಸೆಳೆಯುವ ಬೆಂಗಳೂರಿನ ಸೂಜಿಗಲ್ಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT