ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಶಿಥಿಲ ಕಟ್ಟಡ ತೆರವಿಗೆ ಆಗ್ರಹ

Last Updated 4 ಜೂನ್ 2011, 6:45 IST
ಅಕ್ಷರ ಗಾತ್ರ

ಅಥಣಿ: ಪಟ್ಟಣ ಪ್ರದೇಶದ ಕರಣಿ ಗಲ್ಲಿಯಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅನಾಹುತಕ್ಕೆ ಸಿಲುಕಿ ಸತತ 36 ಗಂಟೆಗಳ ಕಾಲ ಹೊತ್ತಿ ಉರಿದಿದ್ದ ಸ್ವಾಮಿ ಕಲೆಕ್ಷನ್ ಕಟ್ಟಡದ ಪಳೆಯುಳಿಕೆಯ ತಾಪ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಬಹುತೇಕ ಶಾಂತಗೊಂಡಿದೆ. ಆದರೆ  ಜ್ವಾಲೆಯ ತೀವ್ರ ಪ್ರಖರತೆಗೆ ಸಿಕ್ಕು ಸುಟ್ಟು ಕರಕಲಾಗಿ ಹೋಗಿರುವ ಈ ಐದು ಅಂತಸ್ತಿನ ಕಟ್ಟಡದ ಮೇಲ್ಭಾಗದ ಅವಶೇಷಗಳು ಯಾವುದೇ ಹಂತದಲ್ಲಿ ಕುಸಿದು ಬೀಳಬಹುದೆಂದು ಸುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. 

ಘಟನೆ ಸಂಭವಿಸಿದ ಸಂದರ್ಭದಲ್ಲಿ ಹೆಚ್ಚಿನ ಅನಾಹುತಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಅಂದಿನ ಮಟ್ಟಿಗೆ ಮಾತ್ರ ಪೊಲೀಸ್ ಅಧಿಕಾರಿಗಳು ಹೇಳಿದಂತೆ ಕೇಳಿ ಮನೆ ತೊರೆದು ಹೋಗಿದ್ದ ದುರಂತ ಕಟ್ಟಡದ ಸುತ್ತಲಿನ ನಿವಾಸಿಗಳಿಗೆ ಸದ್ಯ ಮನೆಗೆ  ಮರಳಿ ವಾಪಸ್ಸಾಗುವ ಮಾತು ಬಂದಾಗ ಮನದಲ್ಲಿ ದುಗುಡ ಹೆಚ್ಚುತ್ತಿದೆ. ಬುಧವಾರ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆಪೋಶನ ತೆಗೆದುಕೊಂಡ ಸಂದರ್ಭದಲ್ಲಿ ತಮ್ಮ ಮನೆ ಲೆಕ್ಕಿಸದೆ ಕಟ್ಟಡದ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ನತದೃಷ್ಟರ ಪ್ರಾಣ ರಕ್ಷಿಸಲು ಅವಿರತ ಶ್ರಮ ಪಟ್ಟಿದ್ದ ನೆರೆಹೊರೆಯವರು ಕೂಡ ಈಗ ತಮ್ಮ ಅತಂತ್ರ ಸ್ಥಿತಿಯನ್ನು ಕಂಡು ತಾವೇ ಅನುಕಂಪ ಪಡುವಂತಹ ಪರಿಸ್ಥಿತಿಗೆ ತಲುಪಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಬಳಿ ಅಲ್ಲಿಯ ನಿವಾಸಿಗಳು ಶಿಥಿಲಗೊಂಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.  

 ಇದೇ ವೇಳೆ ಅಳಲು ತೋಡಿಕೊಂಡ ಅಣೆಪ್ಪನವರ ಕುಟುಂಬದ ಸದಸ್ಯರೊಬ್ಬರು, ಈ ಪ್ರದೇಶದಲ್ಲಿ ನಡೆಯುತ್ತಿದ್ದ ಭಾರೀ ಪ್ರಮಾಣದ  ವ್ಯಾಪಾರ ವಹಿವಾಟಿನಿಂದ ಈ ಬಡಾವಣೆಯ ಪ್ರತಿಯೊಬ್ಬ ನಿವಾಸಿಗಳ ಖಾಸಗಿ ಬದುಕಿಗೆ ಧಕ್ಕೆ ಉಂಟಾಗಿತ್ತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸದರಿ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಶಿಥಿಲಗೊಂಡಿರುವ ಈ ಬಹುಮಹಡಿ ಕಟ್ಟಡಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ಅಪಾಯದ ಭೀತಿಯನ್ನು ಎದುರಿಸುತ್ತಿರುವ ಚಂದ್ರಶೇಖರ ಮಮದಾಪೂರ, ಶಿವಯೋಗಿ ಮೋಟಗಿ, ಮಹಾಂತೇಶ ಅವಟಿಮಠ, ಮುರಗೆಪ್ಪ ಸವದಿ, ಅಪ್ಪಾಸಾಬ್ ದಲಾಲ, ಪುಟ್ಟು ಕಾರ್ಚಿ, ಮೋಹನ ಅಣೆಪ್ಪನವರ, ಕಸ್ತೂರಿ ಝುಂಜುರವಾಡ, ಶಿಲ್ಪಾ ತೊದಲಬಾಗಿ, ಗುರುಪಾದ ದಲಾಲ ಸೇರಿದಂತೆ ಕರಣಿ ಗಲ್ಲಿ ಹಾಗೂ ಬುರುಡಗಲ್ಲಿಯ ನೂರಾರು ನಿವಾಸಿಗಳು ಸಚಿವರ ಎದುರು ತಮ್ಮ ಗೋಳನ್ನು ತೋಡಿಕೊಂಡರು.

ತಹಸೀಲದಾರ ಶರಣಬಸಪ್ಪ ಕೋಟೆಪ್ಪಗೋಳ, ಪುರಸಭೆ ಮುಖ್ಯಾಧಿಕಾರಿ ಕೆ.ಬಿ ಬೀರಣಗಿ, ಹೆಸ್ಕಾಂ ಅಧಿಕಾರಿ ಪಾರ್ಥನಹಳ್ಳಿ ಇನ್ನಿತರ ಅಧಿಕಾರಿಗಳಾದ ಎಚ್.ಕೆ ವಂಟಗೋಡಿ, ಜೆ.ಎಸ್. ನೇಮಗೌಡರ, ರವೀಂದ್ರ ನಾಯ್ಕೋಡಿ, ಜಿ.ಎಸ್ ಬುರ್ಲಿ, ಎ.ಎಂ.ಕುಲಕರ್ಣಿ ಮುಖಂಡರಾದ ಉಮೇಶ ರಾವ್ ಬೊಂಟೊಡ್ಕರ, ಮಲ್ಲೇಶ ಹುದ್ದಾರ, ರಾಮನಗೌಡ ಪಾಟೀಲ, ಚನ್ನಪ್ಪ ಪೂಜಾರಿ, ರಾಜು ಬುಲಬುಲೆ, ಸದಾಶಿವ ಬಾಗಡಿ ಸಚಿವರೊಂದಿಗೆ ಇದ್ದರು. ನಂತರ ಸ್ವಾಮಿ ಕಲೆಕ್ಷನ್ಸ್ ಮಾಲೀಕ ದಾನಯ್ಯ ಹಿರೇಮಠ ಮನೆಗೆ ತೆರಳಿದ ಸಚಿವರು ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT