ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಸಾಂಸ್ಕೃತಿಕ ಲೋಕ ಅನಾವರಣ

Last Updated 27 ಜನವರಿ 2012, 9:45 IST
ಅಕ್ಷರ ಗಾತ್ರ

ದಾವಣಗೆರೆ: ಆಕರ್ಷಕ ಪಥಸಂಚಲನ, ಮೊಳಗಿದ ದೇಶಭಕ್ತಿ ಗೀತೆ, ತ್ರಿವರ್ಣ ಧ್ವಜ ಹಾರಾಡುತ್ತಿದ್ದಂತೆಯೇ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಸಂಚಲನ. ದೇಶ, ನಾಡು-ನುಡಿ, ಸಂಸ್ಕೃತಿ, ಇತಿಹಾಸವನ್ನು ನೆನಪಿಸುವ ಅದ್ಭುತ ನೃತ್ಯರೂಪಕಗಳು...
-ಇದು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ನಡೆದ 63ನೇ ಗಣರಾಜ್ಯೋತ್ಸವ ಆಚರಣೆಯ ಒಂದು ಪಕ್ಷಿ ನೋಟ.

ಬ್ಯಾಂಡ್‌ಸೆಟ್‌ನ ತಾಳಬದ್ಧ ಸದ್ದಿಗೆ ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಸಶಸ್ತ್ರ ಮೀಸಲುಪಡೆ, ಗೃಹರಕ್ಷಕ ದಳ, ಭಾರತ ಸೇವಾದಳ ಇತ್ಯಾದಿ ತಂಡಗಳು ಬೂಟುಗಾಲಿನ ಹೆಜ್ಜೆಹಾಕಿದವು.
ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಗೌರವರಕ್ಷೆ ನೀಡಲಾಯಿತು. ಸಚಿವರು ಸಂದೇಶ ವಾಚಿಸಿದರು. ಎಲ್ಲ ಔಪಚಾರಿಕ ಕಾರ್ಯಕ್ರಮಗಳ ಬಳಿಕ ಅದ್ಭುತ ಸಾಂಸ್ಕೃತಿಕ ಲೋಕ ತೆರೆದುಕೊಂಡಿತು.

ಜಯ ಹೇ ಭಾರತ ಹಾಡು ಮೊಳಗಿತು. ಅದಕ್ಕೆ ನಗರದ ಪಿಜೆ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ-ರೂಪಕ ಪ್ರದರ್ಶನ ನಡೆಯಿತು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಥ್ಯಾಕರೆ ಸಾಹೇಬ, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಬಸವಣ್ಣನಿಂದ ಹಿಡಿದು ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ಸಚಿನ್ ತೆಂಡೂಲ್ಕರ್, ಧೋನಿ, ಕೊನೆಗೆ ಅಣ್ಣಾ ಹಜಾರೆವರೆಗೂ ಅನೇಕ ಮಂದಿ ರೂಪಕದಲ್ಲಿ ಬಂದು ಹಾದುಹೋದರು. ಈ ಸಮೂಹ ನೃತ್ಯ ಎಲ್ಲರ ಮನಸೆಳೆಯಿತು. ಚನ್ನಮ್ಮನ ಅರಮನೆ, ಬ್ರಿಟಿಷರ ಬಂದಿಖಾನೆ, ಗಲ್ಲುಗಂಬ ಎಲ್ಲವೂ ಮೈದಾನದಲ್ಲಿ ಕಾಣಿಸಿಕೊಂಡವು. ತ್ರಿವರ್ಣ ಧ್ವಜದ ವರ್ಣ ಸಂಯೋಜನೆಯಲ್ಲಿ ವಿದ್ಯಾರ್ಥಿಗಳು ನಿಲ್ಲುವುದರೊಂದಿಗೆ ರೂಪಕ ಅಂತ್ಯಗೊಂಡಿತು.

ವಿಶ್ವಚೇತನಾ ವಿದ್ಯಾಸಂಸ್ಥೆಯದ್ದು ಮುಂದಿನ ಸರದಿ, ಇಲ್ಲಿನ ವಿದ್ಯಾರ್ಥಿಗಳೂ ದೇಶಭಕ್ತಿಯ ಹಾಡಿಗೆ ಹೆಜ್ಜೆ ಹಾಕಿದರು. ಬಿಳಿ ಬಣ್ಣದ ಸಮವಸ್ತ್ರದೊಂದಿಗೆ ತ್ರಿವರ್ಣ ಧ್ವಜದ ಸಂಯೋಜನೆ ಸುಂದರವಾಗಿ ಮೂಡಿಬಂತು.
ಜಿಲ್ಲೆಯ ವಿವಿಧ ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ದೇವರಹಳ್ಳಿ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಅಮ್ಮಾಳ್, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ಎನ್. ಆನಂದ್, ವಿಶಾಲಾಕ್ಷಿ, ಮಹೇಶ್ವರಯ್ಯ, ಎಸ್. ಕೆಂಚಪ್ಪ, ಎಸ್. ಮಾಳಪ್ಪ ಕುಡಚಿ, ಎಲ್. ಆನಂದ, ಡಿ. ಆಕಾಶ್, ಬಿ.ಕೆ. ಮಂಜುನಾಥ್, ಎಸ್. ಏಕಾಂತ್, ಮಹಾಂತೇಶ್, ಎನ್. ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎಂ. ವೀರೇಶ್, ಮೇಯರ್ ಎಚ್.ಎನ್. ಗುರುನಾಥ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ,ಐಜಿಪಿ ಸಂಜಯ್ ಸಹಾಯ್ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್, ಜಿ.ಪಂ. ಸಿಇಒ ಗುತ್ತಿ ಜಂಬುನಾಥ್ ಇತರರು ಇದ್ದರು.
ಗಣರಾಜ್ಯೋತ್ಸವ ಆಚರಣೆ
ನಗರದ ವಿವಿಧ ಶಾಲಾ- ಕಾಲೇಜುಗಳಲ್ಲಿ ಗುರುವಾರ 63ನೇ ಗಣರಾಜ್ಯೋತ್ಸವ ಅದ್ದೂರಿಯಿಂದ ನಡೆಯಿತು.
ಹಳೇ ಕುಂದುವಾಡ: ಹಳೇ ಕುಂದುವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಂ. ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಕೆ.ಪಿ. ಬಸವರಾಜಪ್ಪ, ಹದಡಿ ನಾಗರಾಜಪ್ಪ, ಮಿಟ್ಲಕಟ್ಟೆ ಕರಿಯಪ್ಪ ಮತ್ತು ಹದಡಿ ಬಸಪ್ಪ ಹಾಜರಿದ್ದರು.

ಶಾಲಾ ಮುಖ್ಯಶಿಕ್ಷಕ ಎ.ಎನ್. ರಾಮಚಂದ್ರಪ್ಪ ಹಾಗೂ ಶಿಕ್ಷಕಿ ಗಾಯತ್ರಿ ಹೊನ್ನಪ್ಪ ಮಾತನಾಡಿದರು. ಶಿಕ್ಷಕರಾದ ಕೆ. ಸಿದ್ದಪ್ಪ, ಎಂ. ವೆಂಕಟೇಶ್, ಎ. ಪ್ರಭು, ಎಚ್. ಪರಶುರಾಮಪ್ಪ, ನಿಂಗಮ್ಮ, ಎಚ್.ಸಿ. ಶಶಿಕಲಾ, ಮತ್ತು ವಹೀದಾ ಬೇಗಂ, ಸುನಿತಾ ಇತರರು ಹಾಜರಿದ್ದರು.

ಮಾಂಟೆಸೊರಿ ಶಾಲೆ: ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅಮಿತ್‌ಕುಮಾರ್, ಸಂವಿಧಾನದ ರಚನೆ ಹಾಗೂ ಅದರ ಅಳವಡಿಕೆಯ ಬಗ್ಗೆ ತಿಳಿಸಿದರು.
ದಿನೇಶ್ ಮಾತನಾಡಿ, ರಾಷ್ಟ್ರನಾಯಕರ ಆದರ್ಶ ಹಾಗೂ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆಡಳಿತಾಧಿಕಾರಿ ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮೀ ಸ್ವಾಗತಿಸಿದರು.

ಕಲಾನಿಕೇತನ ಕಾಲೇಜು ಆಫ್ ಫ್ಯಾಷನ್ ಡಿಸೈನಿಂಗ್: ಸಂಸ್ಥೆಯ ಕಾರ್ಯದರ್ಶಿ ಅಶೋಕ್ ರಾಯಭಾಗಿ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಬಸವರಾಜಪ್ಪ ಮಾತನಾಡಿದರು. ಪ್ರಾಧ್ಯಾಪಕ ಎಸ್.ಎಂ. ಮಂಜುನಾಥ್ ಪ್ರಸಾದ್, ಬಿ.ಪಿ. ಪ್ರೀತಿ, ನೂತನ್‌ರಾಜ್ ಹಾಜರಿದ್ದರು. ವೀಣಾ ಹಾಗೂ ಕಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು.

ಕಮ್ಯುನಿಸ್ಟ್ ಪಕ್ಷ: ಕಾರ್ಯದರ್ಶಿ ಯಲ್ಲಪ್ಪ ಧ್ವಜಾರೋಹಣ ನೆರವೇರಿಸಿದರು. ಕೆ.ಬಿ. ಕೊಟ್ರೇಶ್, ಬಿ. ಮೆಹಬೂಬ್ ಸಾಬ್, ಟೈಲರ್ ರಾಘವೇಂದ್ರ, ಆರ್. ರಾಜಶೇಖರ್, ಸುನಿತಾ, ಕಂಚೀಕೆರೆ ಹನುಮಂತಪ್ಪ, ಪಿ. ಸಲೀಂ, ರೇಷ್ಮಾ ಭಾನು ಮತ್ತಿತರರು ಹಾಜರಿದ್ದರು.

ಸೋಮೇಶ್ವರ ವಿದ್ಯಾಲಯ: ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಯೋಗಿ ಕಂಬಾಳಿಮಠ್ ಧ್ವಜಾರೋಹಣ ಮಾಡಿದರು. ಕೆ.ಎಂ. ಸುರೇಶ್ ಮಾತನಾಡಿದರು. ಪ್ರಾಂಶುಪಾಲ ಪಿ.ಎನ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಭೋಗೇಂದ್ರಪ್ಪ, ಹರೀಶ್‌ಬಾಬು, ಹಾಜರಿದ್ದರು.

ವಿನೋಬ ನಗರ:  ಅಮಿತ್ ಚಿತ್ರಮಂದಿರದ ಬಳಿ ಜಿಲ್ಲಾ ಕಾಂಗ್ರೆಸ್ ಹಾಗೂ ಸಾರ್ವಜನಿಕ ಸೇವಾ ಸಮಿತಿ ವತಿಯಿಂದ 63ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಾರ್ವಜನಿಕ ಸೇವಾ ಸಮಿತಿ ಗೌರವಾಧ್ಯಕ್ಷ ಕೊಂಡಜ್ಜಿ ಹನುಮಂತಪ್ಪ, ಸಮಿತಿ ಅಧ್ಯಕ್ಷ ಎ. ನಾಗರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ರಾಜ್‌ಕುಮಾರ್, ಎಚ್. ಸುರೇಶ್, ಎಸ್. ರವಿ, ಎಸ್. ಮಲ್ಲಿಕಾರ್ಜುನ್, ಶಿವಾಜಿರಾವ್, ಆನಂದಭೈರವಿ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT