ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಧಿಕಾರ ಪಿಪಾಸುಗಳಿಂದಲೇ ಪಕ್ಷಕ್ಕೆ ಹಿನ್ನಡೆ'

ಬಿಜೆಪಿ ರಾಜ್ಯ ಕಾರ್ಯದರ್ಶಿ ಗೋಪಿನಾಥ್ ರೆಡ್ಡಿ ಅಭಿಮತ
Last Updated 16 ಜುಲೈ 2013, 5:14 IST
ಅಕ್ಷರ ಗಾತ್ರ

ರಾಮನಗರ:  `ಪಕ್ಷದಲ್ಲಿ ಅಧಿಕಾರ ಪಿಪಾಸುಗಳ ಸಂಖ್ಯೆ ಹೆಚ್ಚಿದ ಕಾರಣದಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು' ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಗೋಪಿನಾಥ್ ರೆಡ್ಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ರಾಮ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ `ಜಿಲ್ಲಾ ಅಧ್ಯಕ್ಷರ ಆಯ್ಕೆ' ಸಭೆಯಲ್ಲಿ ಅವರು ಮಾತನಾಡಿದರು.
`ಪಕ್ಷದ ಆಂತರಿಕ ಕಚ್ಚಾಟದಿಂದ ಬೇಸತ್ತ ರಾಜ್ಯದ ಜನರು ಬೇರೆ ದಾರಿಯಿಲ್ಲದೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಅಷ್ಟೆ' ಎಂದು ಅವರು ವ್ಯಾಖ್ಯಾನಿಸಿದರು.

ತಾನಾಗಿಯೇ ಬದಲಾಗುತ್ತದೆ: `ರಾಜಕೀಯ ಎಂಬುದು ಪ್ರಕೃತಿ ವೈಪರಿತ್ಯದ ತರಹ. ರಾಜಕೀಯದಲ್ಲಿ ಏಳು ಬೀಳು ಸಹಜ. ಪ್ರಕೃತಿ ವೈಪರಿತ್ಯದ ರೀತಿಯಲ್ಲಿ ರಾಜಕೀಯವೂ ತಾನಾಗಿಯೇ ಬದಲಾಗುತ್ತದೆ. ಈ ಬದಲಾವಣೆಯನ್ನು ಒಂದಿಬ್ಬರಿಂದ ತರಲು ಸಾಧ್ಯವಿಲ್ಲ. ಸಹಜವಾಗಿಯೇ ಇಡೀ ವ್ಯವಸ್ಥೇ ತಾನಾಗಿಯೇ ಬದಲಾಗುತ್ತದೆ' ಎಂದು ಅವರು ವಿವರಿಸಿದರು.

`ಆದ್ದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ನಮಗೆ ರಾಜಕೀಯ ಭವಿಷ್ಯಕ್ಕಿಂತ ಸಮಾಜದ ಭವಿಷ್ಯ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಕೆಲಸ ನಿರ್ವಹಿಸಿದರೆ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ' ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚು ಶ್ರಮಿಸಬೇಕು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಪ್ರತಿ ಕಾರ್ಯಕರ್ತರು ತನ್ನದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಮೋದಿ ವಿರುದ್ಧ ಪಿತೂರಿ:
`ದೇಶದಲ್ಲಿ ಕಾಂಗ್ರೆಸ್ ಆಡಳಿತದಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯ ಮುಖಂಡ ಹಾಗೂ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪರ್ಯಾಯ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಮೋದಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಪಿತೂರಿ ನಡೆಸುತ್ತಿದ್ದಾರೆ' ಎಂದು ಅವರು ಆರೋಪಿಸಿದರು.

ಬಿಜೆಪಿಯು ಆಚಾರ, ವಿಚಾರಕ್ಕೆ ಒತ್ತು ನೀಡುವ ಪಕ್ಷ. ಸೈದ್ಧಾಂತಿಕ ಮತ್ತು ವೈಚಾರಿಕವಾಗಿ ಪಕ್ಷ ಸಂಘಟಿಸಬೇಕು. ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರಚಾರ ಮತ್ತು ವ್ಯವಹಾರದ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ನಾಗರಾಜು ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ. ಆದ್ದರಿಂದ ಕಾರ್ಯಕರ್ತರ ಜತೆ ಅತೀವ ಒಡನಾಟ ನಮ್ಮ ಪಕ್ಷದಲ್ಲಿ ಇದೆ. ಇಂತಹ ಕಾರ್ಯಕರ್ತರು ಬೇರೆಡೆಗೆ ಹೋದಾಗ ತೀವ್ರ ನೋವಾಗುತ್ತದೆ. ಅದಕ್ಕೆ ಆಸ್ಪದ ನೀಡಬಾರದು ಎಂದರು.

ಪಕ್ಷದಲ್ಲಿ ಸಾವಿರಾರು ತಪ್ಪುಗಳು ನಡೆದಿರಬಹುದು. ಆದರೆ ಅದೇ ಸಂದರ್ಭದಲ್ಲಿ ಲಕ್ಷಾಂತರ ಒಳ್ಳೆಯ ಕೆಲಸಗಳೂ ಆಗಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಒಗ್ಗಟ್ಟಾಗಿ ಪಕ್ಷ ಸಂಘಟಿಸಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಗೋಪಿ ಅವರು ಇದೇ ಸಂದರ್ಭದಲ್ಲಿ ಮರಳಿ ಬಿಜೆಪಿ ಸೇರಿದರು. ಕೆಜೆಪಿಗೆ ಹೋಗಿದ್ದ ಬಾಲಾಜಿ ಪುನಃ ಬಿಜೆಪಿಗೆ ಹಿಂದಿರುಗಿದರು. ಶೀಘ್ರದಲ್ಲಿಯೇ ಕನಕಪುರದಲ್ಲಿರುವ ಕೆಜೆಪಿಯ ಎಲ್ಲ ಪದಾಧಿಕಾರಿಗಳು ಬಿಜೆಪಿಗೆ ಸೇರಿಲಿದ್ದಾರೆ ಎಂದು ನೂತನ ಅಧ್ಯಕ್ಷ ನಾಗರಾಜು ಇದೇ ಸಂದರ್ಭದಲ್ಲಿ ಘೋಷಿಸಿದರು.

ಘಟಕಗಳ ನೂತನ ಅಧ್ಯಕ್ಷರು: ರಾಮನಗರ ನಗರ ಘಟಕ ಅಧ್ಯಕ್ಷರಾಗಿ ಪದ್ಮನಾಭ, ರಾಮನಗರ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಎಸ್.ಮಂಜುನಾಥ್, ಚನ್ನಪಟ್ಟಣ ನಗರ ಘಟಕದ ಅಧ್ಯಕ್ಷರಾಗಿ ಎಂ.ಎಸ್.ಸ್ವಾಮಿ, ಚನ್ನಪಟ್ಟಣ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಎಂ.ಎಲ್.ಪುಟ್ಟಪ್ಪ, ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಗನ್ನಾಥ್, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಡಾ, ನವೀನ್ ಅವರು ಆಯ್ಕೆಯಾದರು.

ಪಕ್ಷದ ಜಿಲ್ಲಾ ಉಸ್ತುವಾರಿ ಶಿವುಬೀರಪ್ಪ, ಸಹಾಯಕ ಚುನಾವಣಾಧಿಕಾರಿ ರಾಮಪ್ರಿಯ, ಮುಖಂಡರಾದ ಪದ್ಮನಾಭ, ಮುರಳಿ, ರವಿಕುಮಾರ ಗೌಡ, ಜಗದೀಶ್ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT