ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಬಂಡಾಯ ಸಲ್ಲ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಅಧಿಕಾರಕ್ಕಾಗಿ ಪಕ್ಷದ ವಿರುದ್ಧ ಬಂಡಾಯ ಏಳದೆ ತಾಳ್ಮೆಯಿಂದ ಕಾಯ್ದರೆ ಪಕ್ಷವೇ ಎಲ್ಲವನ್ನೂ ಕೊಡುತ್ತದೆ. ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವ ನಾನೇ ಈ ಮಾತಿಗೆ ಉದಾಹರಣೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಪಕ್ಷಕ್ಕೆ ನಾವು ಕೊಟ್ಟಿದ್ದು ಮತ್ತು ಪಕ್ಷ ನಮಗೆ ಕೊಟ್ಟಿದ್ದು ಎರಡನ್ನೂ ತೂಗಿ ನೋಡಿದಾಗ ಪಕ್ಷದಿಂದ ನಾವು ಪಡೆದ ತೂಕವೇ ಹೆಚ್ಚಾಗುತ್ತದೆ. ಅಂತಹ ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರವೃತ್ತಿ ಸಲ್ಲ. ಅಧಿಕಾರಕ್ಕಾಗಿ ಪಕ್ಷವನ್ನು ತೊರೆದು ಹೋಗುವ ಸಂಪ್ರದಾಯವೂ ಒಳ್ಳೆಯದಲ್ಲ~ ಎಂದರು.

`ಇಂದಿನ ಜನಕ್ಕೆ ಶಾಸಕರಾದ ಕೂಡಲೇ ಮಂತ್ರಿ ಪದವಿ ಬೇಕು. ಮಂತ್ರಿಯಾದ ಮೇಲೆ ಒಳ್ಳೆಯ ಖಾತೆ ಬೇಕು. ಅದೂ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಯೇ ಬೇಕು. ಸ್ವಚ್ಛ ನಡತೆ, ಪ್ರಾಮಾಣಿಕ ಮನೋಭಾವ ಮತ್ತು ಬದ್ಧತೆ ಇದ್ದರೆ ಸ್ಥಾನಮಾನಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ~ ಎಂದು ಶೆಟ್ಟರ್ ತಿಳಿಸಿದರು.

`ಎರಡೂವರೆ ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ಬೇಗ ಅಷ್ಟೆಲ್ಲ ಅವಕಾಶ ಸಿಕ್ಕವೇ ಎಂಬುದನ್ನು ನೆನಪಿಸಿಕೊಂಡರೆ ಸೋಜಿಗವಾಗುತ್ತದೆ. ಇದೆಲ್ಲ ತಾಳ್ಮೆಯಿಂದ ಕಾಯ್ದಿದ್ದರ ಫಲ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು~ ಎಂದು ಅವರು ಭಾವುಕರಾಗಿ ನುಡಿದರು.

`ಬಹುತೇಕರಿಗೆ ರಾಜಕಾರಣ ಚಟವಾಗಿದೆ. ಅದರಿಂದಲೇ ಎಲ್ಲವನ್ನೂ ಮಾಡಿಕೊಳ್ಳುತ್ತೇವೆ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಇದೆಲ್ಲ ತಪ್ಪು ಕಲ್ಪನೆ. ಜನರ ಸೇವೆ ಮಾಡಲು ರಾಜಕಾರಣ ಅತ್ಯುತ್ತಮ ಕ್ಷೇತ್ರವಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಿದರೆ ಅವರೇ ನಮ್ಮನ್ನು ನಾಯಕರನ್ನಾಗಿ ರೂಪಿಸುತ್ತಾರೆ~ ಎಂದು ವಿವರಿಸಿದರು.

ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರನ್ನೂ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶೆಟ್ಟರ್ ಅವರನ್ನು `ಬಂಗಾರದ ಮನುಷ್ಯ~ ಎಂದು ಬೊಮ್ಮಾಯಿ ಕೊಂಡಾಡಿದರು. ಮೇಯರ್ ಡಾ. ಪಾಂಡುರಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT