ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ತರಾಟೆ

ಸಾಲ ಯೋಜನೆ ಕುರಿತು ಲೀಡ್ ಬ್ಯಾಂಕ್‌ಗೆ ತಪ್ಪು ಮಾಹಿತಿ
Last Updated 29 ಡಿಸೆಂಬರ್ 2012, 10:22 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರದ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಕುರಿತು ಲೀಡ್ ಬ್ಯಾಂಕ್‌ಗೆ ತಪ್ಪು ಮಾಹಿತಿ ನೀಡಿರುವ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳನ್ನು ಸಂಸದ ಸುರೇಶ ಅಂಗಡಿ ಅವರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಂಕುಗಳ ಮೂಲಕ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, `ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಬ್ಯಾಂಕ್‌ಗಳು ತಪ್ಪು ಮಾಹಿತಿ ನೀಡುವುದರಿಂದ ಹಣಕಾಸು ಇಲಾಖೆಗೆ ತಪ್ಪು ವರದಿ ಸಲ್ಲಿಕೆಯಾಗುತ್ತದೆ. ಇದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ. ಸರ್ಕಾರದ ಸಾಲ ಯೋಜನೆಯು ಅರ್ಹ ನಿರುದ್ಯೋಗಿಗಳಿಗೆ, ಸಣ್ಣ ಉದ್ಯಮಿಗಳಿಗೆ ದೊರೆಯದಂತಾಗುತ್ತದೆ' ಎಂದರು.

`ಬ್ಯಾಂಕ್ ಆಫ್ ಇಂಡಿಯಾ, ಐಎನ್‌ಜಿ ವೈಶ್ಯ ಬ್ಯಾಂಕ್, ಕೋಟೆಕ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ' ಎಂದು ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.

`ಕೇಂದ್ರ ಹಣಕಾಸು ಸಚಿವಾಲಯದ ವರದಿ ಪ್ರಕಾರ ಕರ್ನಾಟಕದಲ್ಲಿ ಸಾಲ ಕಡಿಮೆ ಪ್ರಮಾಣದಲ್ಲಿ ವಿತರಣೆಯಾಗುತ್ತಿದೆ. ಹೀಗಾಗಿ ಬ್ಯಾಂಕ್‌ಗಳು ಆಸಕ್ತಿ ವಹಿಸಿ ಸಾಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕಿನವರು ಕಟ್ಟುನಿಟ್ಟಿನ ಆದೇಶ ನೀಡಬೇಕು' ಎಂದು ಸಂಸದರು ಒತ್ತಾಯಿಸಿದರು.

ಲೀಡ್ ಬ್ಯಾಂಕ್‌ನಡಿ ಬರುವ 38 ಬ್ಯಾಂಕ್‌ಗಳ ಪೈಕಿ ಕೇವಲ 20 ಬ್ಯಾಂಕ್‌ಗಳ ಪ್ರತಿನಿಧಿಗಳು ಮಾತ್ರ ಸಭೆಗೆ ಬಂದಿರುವುದನ್ನು ಗಮನಿಸಿದ ಸಂಸ ದರು, `ಕಾಟಾಚಾರಕ್ಕೆ ಸಭೆ ನಡೆಸುವುದಾದರೆ, ನಾವು ಇಲ್ಲಿಗೆ ಬರುವುದಿಲ್ಲ. ಸಾಮಾಜಿಕ ಕಳಕಳಿಯಿಂದ ಬ್ಯಾಂಕ್‌ಗಳು ಸರ್ಕಾರದ ಯೋಜನೆಯಲ್ಲಿ ಸಹಭಾಗಿತ್ವ ವಹಿಸಬೇಕು. ನಿರುದ್ಯೋಗಿಗಳಿಗೆ, ಸಣ್ಣ ಉದ್ಯಮಿಗಳಿಗೆ ಸಮರ್ಪಕವಾಗಿ ಬ್ಯಾಂಕ್‌ಗಳು ಸಾಲ ನೀಡಿದಾಗ ಮಾತ್ರ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ಸಭೆಗೆ ಬಾರದ ಬ್ಯಾಂಕ್‌ಗಳಿಗೆ ನೋಟಿಸ್ ಜಾರಿ ಮಾಡಬೇಕು. ಈ ಬಗ್ಗೆ ಹಣಕಾಸು ಇಲಾಖೆಗೆ ವರದಿ ನೀಡಲಾಗುವುದು' ಎಂದರು

`ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಇಲ್ಲಿನ ಜನರಿಗೆ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿಲ್ಲ. ಬದಲಿಗೆ ಬೆಳಗಾವಿಗೆ ನೀಡಬೇಕಾಗಿದ್ದ ಹಣವನ್ನು ಕೆಲವು ಬ್ಯಾಂಕ್‌ಗಳು ತಮ್ಮ ಕೇಂದ್ರವಾದ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯ ಗಳಲ್ಲಿ ಬಳಸಿಕೊಳ್ಳುತ್ತಿದೆ' ಎಂದರು.

ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ರೂ. 1409.96 ಕೋಟಿ, ಸಣ್ಣ ಕೈಗಾರಿಕೆಗಳಿಗೆ ರೂ. 89.73 ಕೋಟಿ ಹಾಗೂ ಇತರೆ ಪ್ರಾತಿನಿಧ್ಯ ಕ್ಷೇತ್ರಗಳಿಗೆ ರೂ. 390 ಕೋಟಿ,  ಸಾಲ ನೀಡಿ ಒಟ್ಟಾರೆ ರೂ. 3390.65 ಕೋಟಿ, ನೀಡಿಕೆ ವಾರ್ಷಿಕ ಗುರಿಯಲ್ಲಿ 1890.03 ಕೋಟಿ ರೂಪಾಯಿಗಳ ಸಾಲ ನೀಡಿ ಶೇ. 55.74ರಷ್ಟು ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ವಿವಿಧ ಸರ್ಕಾರಿ ಯೋಜನೆಗಳಿಗೆ ಬ್ಯಾಂಕುಗಳು ನೀಡುವ ಹಣಕಾಸು ಹಾಗೂ ಸಬ್ಸಿಡಿ ನೆರವಿನ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ. ಶಂಕರ, ಕಳಪೆ ಸಾಧನೆ ಮಾಡಿದ ಬ್ಯಾಂಕುಗಳ ವಿವರಗಳನ್ನು ತಮಗೆ ಒದಗಿಸಬೇಕು. ಈ ಕುರಿತು ಆಯಾ ಬ್ಯಾಂಕುಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯೋನೇಜರ್‌ಗೆ ಸೂಚಿಸಿದರು.

ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತಿನಿಧಿ ಆರ್.ಬಿ. ಚೌಧರಿ, ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಸಿದ್ಧಲಿಂಗಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಟಿ. ನಂದೀಶ ಭಾಗವಹಿಸಿದ್ದರು. ಲೀಡ್ ಬ್ಯಾಂಕ್ ಮ್ಯೋನೇಜರ್ ಸೂರ್ಯಕಾಂತ ಆರ್. ಗಂಗಾ ಅವರು ಬ್ಯಾಂಕುಗಳ ಪ್ರಗತಿ ವಿವರಗಳನ್ನು ಸಭೆಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT