ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಬಂಗಲೆ, ಸಿಬ್ಬಂದಿಗೆ ಸೋರುವ ಮನೆ!

Last Updated 8 ನವೆಂಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಅರಣ್ಯ ಸಂರಕ್ಷಣೆ, ಅಭಿವೃದ್ಧಿ ಕೆಲಸಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರ ದೊಡ್ಡದು. ಆದರೆ ಹಿರಿಯ ಅಧಿಕಾರಿಗಳಿಗೆ ಹೋಲಿಸಿದರೆ, ಕೆಳಹಂತದ ಸಿಬ್ಬಂದಿಗೆ ಸಿಗುವ ಸೇವಾ ಸೌಲಭ್ಯಗಳು ಮಾತ್ರ ಅಷ್ಟಕ್ಕಷ್ಟೆ. ಸವಲತ್ತುಗಳ ವಿಚಾರದಲ್ಲಿ ಇವರು ಸದಾ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ.

ನರಿಯ ಕೂಗು ಮುಗಿಲು ಮುಟ್ಟೀತೇ ಎಂಬಂತೆ ವರ್ಷಗಳಿಂದಲೂ ಈ ಸಿಬ್ಬಂದಿ ಬೇಡಿಕೆಗಳ ಪಟ್ಟಿಯನ್ನು ಇಡುತ್ತಲೇ ಬಂದಿದ್ದರೂ, ಅವರಿಗೆ ಸಿಕ್ಕ ಸೌಲಭ್ಯಗಳು ನಗಣ್ಯ. ವಲಯ ಅರಣ್ಯ ಅಧಿಕಾರಿಗಳು, ವನ ಪಾಲಕರು, ಅರಣ್ಯ ವೀಕ್ಷಕರು, ಅರಣ್ಯ ರಕ್ಷಕರು, ಚಾಲಕರು, ಗುಮಾಸ್ತರು, ಆನೆ ಮಾವುತರು, ಕಾವಾಡಿಗರು.. ಹೀಗೆ ಕೆಳಹಂತದ ಸಿಬ್ಬಂದಿ ಉತ್ತಮ ಸೇವಾ ಸೌಲಭ್ಯಗಳಿಗಾಗಿ ಹಂಬಲಿಸುತ್ತಲೇ ಇದ್ದಾರೆ.
ಕೆಳಹಂತದ ಈ ಸಿಬ್ಬಂದಿ ವರ್ಗ ಸದಾ ದುಡಿಯುವವರು.

ರಾತ್ರಿ-ಹಗಲೆನ್ನದೆ ಕರ್ತವ್ಯದ ಕರೆಗೆ ಓಗೊಡಬೇಕಾದವರು. ಆದರೆ ಸಣ್ಣಪುಟ್ಟ ಲೋಪಗಳಿಗೆ ಹೊಣೆ ಆಗಬೇಕಾದವರೂ ಇವರೇ. ವನ್ಯಪ್ರಾಣಿಗಳ ಹಾವಳಿಗೆ, ಅವು ನಾಡಿಗೆ ಲಗ್ಗೆ ಇಟ್ಟರೆ ಈ ಸಿಬ್ಬಂದಿಯನ್ನೇ ಹೊಣೆ ಮಾಡಲಾಗುತ್ತಿದೆ.
 
ಆದರೆ ಅವರ ಕೈಯಲ್ಲೊಂದು ಅತ್ಯಾಧುನಿಕ ಬಂದೂಕು ಕೂಡ ಇಲ್ಲದ ಸ್ಥಿತಿ ಇದೆ ಎಂಬುದು ವಾಸ್ತವ. ಹಳೇ ಕಾಲದ ಬಂದೂಕು, ಸರಿಯಾಗಿ ಚಾಲನೆಯಲ್ಲಿ ಇಲ್ಲದ ವಾಹನಗಳೇ ಹೆಚ್ಚು. ಕಾಡುಗಳ್ಳರನ್ನು ಎದುರಿಸಬೇಕಾದ ಸಂದರ್ಭಗಳಲ್ಲೂ ಇವರದು ಇದೇ ಗೋಳು. ವೀರಪ್ಪನ್ ವಿರುದ್ಧ ಸೆಣಸಿದ ಪೊಲೀಸ್ ಸಿಬ್ಬಂದಿಗೆ ಸಿಕ್ಕ ಪ್ರತಿಫಲ ಅರಣ್ಯ ಸಿಬ್ಬಂದಿಗೆ ದಕ್ಕಲೇ ಇಲ್ಲ.

ಸಿಬ್ಬಂದಿ ಕೊರತೆ, ವಸತಿ ಸೌಲಭ್ಯಗಳ ಶೋಚನೀಯ ಸ್ಥಿತಿಯಿಂದ ಈ ಸಿಬ್ಬಂದಿ ಅಷ್ಟೇ ಅಲ್ಲ, ಅವರ ಕುಟುಂಬದವರೂ ಬಸವಳಿದಿದ್ದಾರೆ. `ಹೊಸ ವಾಹನಗಳೆಲ್ಲ ಎಸಿಎಫ್, ಡಿಸಿಎಫ್ ಹಾಗೂ ಅದಕ್ಕೂ ಮೇಲಿನ ಅಧಿಕಾರಿ ವರ್ಗಕ್ಕೆ ಹೋಗುತ್ತವೆ.

ತಳ್ಳಿದರೂ ಚಾಲನೆಗೊಳ್ಳದ ವಾಹನಗಳಷ್ಟೆ ನಮಗೆ ಸಿಗುತ್ತವೆ. ಇಂತಹ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಸಂಬಂಧಪಟ್ಟವರಿಗೆ ಸರಿಯಾದ ಮಾಹಿತಿ ಕೊಡದೆ ಮುಚ್ಚಿಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಗುಮಾಸ್ತರ ಕೆಲಸವನ್ನು ಕೂಡ ನಾವೇ ಮಾಡಬೇಕು~ ಎಂದು ದುಬಾರೆಅರಣ್ಯ ತಾಣದ ಸಿಬ್ಬಂದಿ (ಹೆಸರು ಬಹಿರಂಗಪಡಿಸಲು ಇಚ್ಛಿಸಲಿಲ್ಲ) ನೋವು ತೋಡಿಕೊಂಡಿದ್ದಾರೆ.

`ಅರಣ್ಯ ರಕ್ಷಣೆ, ನಿರ್ವಹಣೆ, ಅಭಿವೃದ್ಧಿ ಕೆಲಸ ಕಾರ್ಯಗಳ ಜೊತೆಗೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸಭೆಗಳಿಗೆ ಹಾಜರಾಗಬೇಕು. ಗ್ರಾಮ ಸಭೆಗಳಿಗೆ ಹೋಗಬೇಕು. ಹಿರಿಯ ಅಧಿಕಾರಿಗಳಿಂದ ಒತ್ತಡ, ಕಿರುಕುಳ ತಾಳಿಕೊಳ್ಳಬೇಕು.
 
ಅವರು ಹೇಳಿದಂತೆ ನಡೆದುಕೊಳ್ಳದಿದ್ದರೆ ಇನ್ನಷ್ಟು ತೊಂದರೆ ಅನುಭವಿಸಬೇಕು. `ಕಾಣಿಕೆ~ ಒಪ್ಪಿಸಬೇಕು. ಸ್ಥಳ ನಿಯೋಜನೆಯಲ್ಲೂ ಅನ್ಯಾಯವನ್ನು ಸಹಿಸಿಕೊಳ್ಳಬೇಕು. ಪ್ರಯಾಣ ಭತ್ಯೆ ಮತ್ತಿತರ ಸೌಲಭ್ಯಗಳನ್ನೂ ಸರಿಯಾಗಿ ಕೊಡುವುದಿಲ್ಲ.

ಅಧಿಕಾರಿಗಳಿಗೆ ಬಂಗಲೆ, ನಮಗೆ ಗುಡಿಸಲು ವಾಸ. ಜನರ ಜೀವನಾಡಿಯಾದ ಇಲಾಖೆ ಇದು. ಆದರೆ ಅದಕ್ಕೆ ತಕ್ಕುದಾದ ಸೌಲಭ್ಯಗಳಿಲ್ಲ~ ಎಂದು ಅವರು ಕೆಳಹಂತದ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

`ಈ ಸಿಬ್ಬಂದಿ ವರ್ಗದ ವಸತಿ ಗೃಹಗಳ ಸ್ಥಿತಿ ಶೋಚನೀಯ. ದುರಸ್ತಿ ಕಾಣದೆ ವರ್ಷಗಳೇ ಆಗಿವೆ. ಸೋರುತ್ತಿರುವ ಮನೆ, ಕಚೇರಿಗಳ ನಿದರ್ಶನ ನೂರಾರು. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ.

ಪೊಲೀಸ್ ಇಲಾಖೆಗೆ ಹೋಲಿಸಿದರೆ ಕಾಡು ಕಾಯುವ ಈ ಸಿಬ್ಬಂದಿಗೆ ಸಿಗುವ ಸವಲತ್ತುಗಳು ತೀರಾ ಕಡಿಮೆ. ಇದೇ ರೀತಿ ಅನ್ಯಾಯ ಮುಂದುವರಿದರೆ ಕಾಡಿನಿಂದ ರಾಜಧಾನಿಗೆ ಲಗ್ಗೆ ಇಟ್ಟು ಹೋರಾಟಕ್ಕೂ ಸಿದ್ಧ~ ಎಂದು ರಾಜ್ಯ ಅರಣ್ಯ ನೌಕರರ ಮಹಾಮಂಡಳದ ಉಪಾಧ್ಯಕ್ಷ ಇ.ಆರ್. ರವೀಂದ್ರ ಅವರು ತಿಳಿಸಿದ್ದಾರೆ.

ಈ ಹಿಂದೆ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಅವರ ಅಧಿಕಾರ ಅವಧಿಯಲ್ಲಿ ಅರಣ್ಯ ನೌಕರರ ಮುಷ್ಕರ ನಡೆದಿತ್ತು. ಆಗೆಲ್ಲ ತಕ್ಷಣ ಅವರ ಬೇಡಿಕೆಗಳನ್ನು  ಈಡೇರಿಸಲಾಗಿತ್ತು. ಆ ನಂತರ ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು  ಕೊಟ್ಟಿಲ್ಲ ಎಂದು ಅವರು ದೂರಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಇಲ್ಲಿ ಸೌಲಭ್ಯಗಳು ಕಡಿಮೆ. ಕಠಿಣ ತರಬೇತಿ ಪಡೆದು ಬರುವ ಅರಣ್ಯ ಸಿಬ್ಬಂದಿಗೆ ಅದಕ್ಕೆ ತಕ್ಕ ಸೌಲಭ್ಯಗಳನ್ನು ಕೊಡಬೇಕು. ಹೀಗಾದಲ್ಲಿ ಈ ಸಿಬ್ಬಂದಿಯಿಂದ ಹೆಚ್ಚು ದಕ್ಷತೆ, ಉತ್ತಮ ಸೇವೆ ನಿರೀಕ್ಷಿಸಬಹುದು ಎಂಬುದು ನೌಕರರ ಒಕ್ಕೂಟದ ಒತ್ತಾಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT