ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ ಅನುಮಾನ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ
Last Updated 4 ಡಿಸೆಂಬರ್ 2012, 6:28 IST
ಅಕ್ಷರ ಗಾತ್ರ

ಮಂಡ್ಯ: ಬೆಳಗಾವಿಯಲ್ಲಿರುವ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡಿಸಿದರೆ, ಅಲ್ಲಿ ನಡೆಯುವ ವಾಸ್ತವಾಂಶದ ಚರ್ಚೆಯ ಮೇಲೆ ಪಕ್ಷವು ನಿರ್ಧಾರ ಕೈಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಅಧಿವೇಶನ ನಡೆಯುವುದು ಅನುಮಾನವಾಗಿದೆ. ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಮೊದಲ ಅಧಿವೇಶನ ನಡೆಸಿದ ಕೀರ್ತಿ ಪಡೆಯುವುದಕ್ಕಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತರಾತುರಿಯಲ್ಲಿ ಅಧಿವೇಶನ ನಡೆಸುತ್ತಿದ್ದಾರೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯದ ಹಲವಾರು ವಿಷಯಗಳ ಬಗೆಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿದೆ. ಆದರೆ, ಆರು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಏನು ಚರ್ಚೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಯಂತೆ ಇದು ಬಿಜೆಪಿ ಮತ್ತು ಕೆಜೆಪಿ ಸಮ್ಮಿಶ್ರ ಸರ್ಕಾರವಾಗಿದೆ. ಸರ್ಕಾರವು ಅವರನ್ನು ಮೆಚ್ಚಿಸುವಲ್ಲಿಯೇ ಕಾಲ ಕಳೆಯುತ್ತಿದೆ. ಕಬ್ಬಿನ ಬೆಲೆ, ಬೆಂಗಳೂರಿನ ಕಸ ಸೇರಿದಂತೆ ಯಾವುದೇ ಸಮಸ್ಯೆ ಕುರಿತೂ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜಗದೀಶ ಶೆಟ್ಟರ್ ಅವರು ಬಾಯಿ ಬಿಡುತ್ತಿಲ್ಲ. ದಿಟ್ಟ ನಿಲುವು ತೆಗೆದುಕೊಳ್ಳದ್ದರಿಂದಾಗಿ ಸಾರ್ವಜನಿಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು.

ಶಾಸಕ ಎಂ.ಶ್ರೀನಿವಾಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಶೋಕ್ ಜಯರಾಮ್, ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT