ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಾಗಿ ಡಿ. ರಾಮನಮಲಿ ಆಯ್ಕೆ

ಹರಪನಹಳ್ಳಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 13 ಡಿಸೆಂಬರ್ 2012, 6:25 IST
ಅಕ್ಷರ ಗಾತ್ರ

ಹರಪನಹಳ್ಳಿ: ಇದೇ 24ರಂದು ನಡೆಯಲಿರುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೂಕ್ಷ್ಮಸಂವೇದನೆಯ ಬರಹಗಾರ, ಸಾಹಿತಿ ಡಿ. ರಾಮನಮಲಿ ಅವರನ್ನು  ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಿದೆ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಘೋಷಿಸಿದರು.

ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಪರಿಷತ್ ತಾಲ್ಲೂಕು ಘಟಕ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಘಟಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಡಿ. 24ರಂದು ಸಮ್ಮೇಳನ ನಡೆಸಲು ಉದ್ದೇಶಿಸಿದೆ. ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯಲಿದೆ.

ಬೆಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣ ನೆರವೇರಲಿದೆ. ನಂತರ, ಪ್ರವಾಸಿಮಂದಿರದಿಂದ ಸಮ್ಮೇಳನದ ಸರ್ವಾಧ್ಯಕ್ಷರನ್ನು ಅಲಂಕೃತ ವಾಹನದಲ್ಲಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರ, ಭಜನೆ, ಕೋಲಾಟ, ಡೊಳ್ಳು, ಸಮಾಳ ಸೇರಿದಂತೆ ವಿವಿಧ ಕಲಾತಂಡಗಳ ವೈಭವದ ಮೆರವಣಿಗೆ ಮೂಲಕ ಸಮ್ಮೇಳನದ ವೇದಿಕೆಗೆ ಕರೆತರಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಚುಟುಕು ಸಾಹಿತಿ ಎಚ್. ದುಂಡಿರಾಜ್ ನೆರವೇರಿಸುವರು. ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ `ಕೃಷಿ ಮತ್ತು ಜಾಗತಿಕರಣದ ಸವಾಲುಗಳು', ತಾಲ್ಲೂಕಿನ ಇತಿಹಾಸದ ಗತವೈಭವದ ಮೆಲಕು ಹಾಕುವ ಹಿನ್ನೆಲೆಯಲ್ಲಿ `ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಸಂದರ್ಭಗಳು' ಹಾಗೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಶ್ರೀಮಂತ ಪರಂಪರೆಯ ಅವಲೋಕನಕ್ಕೆ ಸಂಬಂಧಿಸಿದಂತೆ

`ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಾಲ್ಲೂಕಿನ ಕೊಡುಗೆ' ವಿಷಯದ ಮೇಲೆ ಮೂರು ವಿಶೇಷ ಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ರಾಮಪ್ರಸಾದ್ ಗಾಂಧಿ, ಜಿಲ್ಲಾ ಘಟಕ ಗೌರವ ಕಾರ್ಯದರ್ಶಿಗಳಾದ ಬಾ.ಮ. ಬಸವರಾಜಯ್ಯ, ಎಚ್. ಮಲ್ಲಿಕಾರ್ಜುನ, ಕೋಶಾಧ್ಯಕ್ಷ ಎಂ.ಪಿ. ಚಂದ್ರಪ್ಪ, ವಿಶೇಷ ಆಹ್ವಾನಿತ ಎಸ್. ಹೇಮಪ್ಪ, ಹಿರಿಯ ಸಾಹಿತಿ ಕುಂ.ಬಾ. ಸದಾಶಿವಪ್ಪ, ಸಮ್ಮೇಳನ ಹಣಕಾಸು ಸಮಿತಿ ಅಧ್ಯಕ್ಷ ಪಿ. ರಾಮನಗೌಡ, ಆಹಾರ ಸಮಿತಿ ಅಧ್ಯಕ್ಷ ಪೂಜಾರ್ ಷಣ್ಮುಖಪ್ಪ, ತಾಲ್ಲೂಕು ಘಟಕದ ಕೋಶಾಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ಕಾರ್ಯಕಾರಿ ಸಮಿತಿ ಸದಸ್ಯ ಎಚ್. ದೇವರಾಜ, ಚಿಕ್ಕಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT