ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಪೇಕ್ಷಿತ ಕರೆ ನಿಷೇಧ : ಸೆಪ್ಟೆಂಬರ್ 27ರಿಂದ ಜಾರಿ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು ಗಡುವು ವಿಸ್ತರಣೆಗಳ ನಂತರ ಕೊನೆಗೂ, ಸೆಪ್ಟೆಂಬರ್ 27ರಿಂದ ಅನಪೇಕ್ಷಿತ ಕರೆ ನಿಷೇಧ ಜಾರಿಗೊಳಿಸಲು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ `ಟ್ರಾಯ್~ ನಿರ್ಧರಿಸಿದೆ. 

ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಿಗೆ ಬರುವ ವಾಣಿಜ್ಯ ಕರೆ ಮತ್ತು `ಎಸ್‌ಎಂಎಸ್~ಗಳನ್ನು ಸೆಪ್ಟೆಂಬರ್ 27ರಿಂದ ನಿಷೇಧಿಸಲಾಗುತ್ತದೆ ಎಂದು `ಟ್ರಾಯ್~ ಸೋಮವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಈಗಾಗಲೇ ಅನಪೇಕ್ಷಿತ ಕರೆ ನಿಷೇಧಕ್ಕಾಗಿ ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ (ಎನ್‌ಸಿಪಿಆರ್) ನೋಂದಾಯಿಸಿಕೊಂಡಿರುವ ಸಾವಿರಾರು ಗ್ರಾಹಕರಿಗೆ ಇನ್ನು ಮುಂದೆ  ವಾಣಿಜ್ಯ ಕರೆಗಳ ಕಿರಿಕಿರಿ ತಪ್ಪಲಿದೆ.

ಅನಪೇಕ್ಷಿತ ಕರೆ ನಿಷೇಧಕ್ಕೆ ಸಂಬಂಧಿಸಿದ ನಿಯಮಗಳು ಅಂತಿಮಗೊಂಡಿವೆ. ಈ ನಿಷೇಧ ಸೆಪ್ಟೆಂಬರ್ 27ರಿಂದ ದೇಶದ ಎಲ್ಲ ದೂರವಾಣಿ ವೃತ್ತಗಳಲ್ಲಿ ಜಾರಿಗೆ ಬರಲಿದೆ. ಸದ್ಯ ದೇಶದಲ್ಲಿ 850 ದಶಲಕ್ಷ ಮೊಬೈಲ್ ಮತ್ತು 34 ದಶಲಕ್ಷ ಸ್ಥಿರ ದೂರವಾಣಿ ಚಂದಾದಾರರಿದ್ದಾರೆ ಎಂದು `ಟ್ರಾಯ್~ ಹೇಳಿದೆ.

ಟೆಲಿ ಮಾರುಕಟ್ಟೆ ಕರೆ ನಿಷೇಧಕ್ಕೆ ಸಂಬಂಧಿಸಿದಂತೆ `ಟ್ರಾಯ್~ ಕಳೆದ ವರ್ಷವೇ ಶಿಫಾರಸು ಸಲ್ಲಿಸಿತ್ತು. ಆದರೆ, ವಾಣಿಜ್ಯ ಕರೆಗಳ ಸಂಖ್ಯಾ ಸರಣಿ ಇತ್ಯರ್ಥಗೊಳ್ಳದ ಕಾರಣ ಮತ್ತು ಕೆಲವು ಕಂಪೆನಿಗಳು ಗಡುವು ವಿಸ್ತರಣೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇದನ್ನು ಮುಂದೂಡಲಾಗಿತ್ತು. 

 ಟೆಲಿ ಮಾರುಕಟ್ಟೆ ಕರೆಗಳಿಗೆ ಟ್ರಾಯ್ `140~ ಸಂಖ್ಯಾ ಸರಣಿ ನಿಗದಿಪಡಿಸಿದೆ. ಈ ಸಂಖ್ಯೆಗಳಿಂದ ಅಂತ್ಯಗೊಳ್ಳುವ ಕರೆಗಳನ್ನು ಚಂದಾದಾರರು ಸುಲಭವಾಗಿ ಗುರುತಿಸಬಹುದು ಹಾಗೂ ಇವುಗಳ ನಿಷೇಧಕ್ಕಾಗಿ ದೂರವಾಣಿ ಸೇವಾ ಸಂಸ್ಥೆಗೆ ಮನವಿ ಸಲ್ಲಿಸಬಹುದು.

ಈಗಾಗಲೇ `ಎನ್‌ಸಿಪಿಆರ್~ನಲ್ಲಿ  ನೋಂದಣಿ ಮಾಡಿಕೊಂಡಿರುವ ಗ್ರಾಹಕರು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.  ನಿಯಮ ಉಲ್ಲಂಘಿಸಿದರೆ ಟೆಲಿ ಮಾರುಕಟ್ಟೆ ಕಂಪೆನಿಗಳು ಕನಿಷ್ಠ ್ಙ25 ಸಾವಿರದಿಂದ ಗರಿಷ್ಠ ್ಙ2.5 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ.

ಅನಪೇಕ್ಷಿತ ಕರೆ, `ಎಸ್‌ಎಂಎಸ್~ ನಿಷೇಧಕ್ಕಾಗಿ ಗ್ರಾಹಕರಿಗೆ ಹಲವು ಆಯ್ಕೆಗಳನ್ನು ಕಲ್ಪಿಸಲಾಗಿದೆ. `ಸಂಪೂರ್ಣ ನಿಷೇಧ~ ಆಯ್ಕೆಯನ್ನು ಗ್ರಾಹಕ ಆಯ್ದುಕೊಂಡರೆ, ಯಾವುದೇ ವಾಣಿಜ್ಯ ಕರೆಗಳು, ಸಂದೇಶಗಳು ದೂರವಾಣಿಗೆ ಬರುವುದಿಲ್ಲ. ಆಯ್ದ ಸೇವೆಗಳು ಬೇಕಿದ್ದರೆ, ಅದಕ್ಕಾಗಿ ಪ್ರತ್ಯೇಕ ಆಯ್ಕೆಗಳನ್ನು ನೀಡಲಾಗಿದೆ.

ಅನಪೇಕ್ಷಿತ ಕರೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಸುಮಾರು 47 ಸಾವಿರ ದೂರುಗಳು ದಾಖಲಾಗುತ್ತಿವೆ ಎಂದು `ಟ್ರಾಯ್~ ಹೇಳಿದೆ. ಆಗಸ್ಟ್ 25ರ ವರೆಗೆ ಸುಮಾರು 130 ದಶಲಕ್ಷ ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ನಿಷೇಧಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ವಾಣಿಜ್ಯ ಕರೆಗಳಿಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮೇ 2011ರ ವರೆಗೆ `ಟ್ರಾಯ್~ ಸುಮಾರು 72 ಸಾವಿರ ನೋಂದಾಯಿತ ಟೆಲಿ ಮಾರುಕಟ್ಟೆ ಸಂಪರ್ಕಗಳನ್ನು ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT