ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಯಮಿತ ಲೋಡ್‌ಶೆಡ್ಡಿಂಗ್

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮೊದಲೇ ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಒಂದು ವಾರದಿಂದ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ.

ಪವನ ವಿದ್ಯುತ್ ಉತ್ಪಾದನೆಯಲ್ಲಿನ ಗಣನೀಯ ಇಳಿಕೆ, ಬಳ್ಳಾರಿ ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗದೆ ಇರುವುದರಿಂದ ಕೊರತೆ ಉಂಟಾಗಿದೆ. ಮಳೆಗಾಲ ಮುಗಿದಿರುವುದೂ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಒಟ್ಟು ಎಂಟು ಘಟಕಗಳಿದ್ದು, 1,720 ಮೆಗಾವಾಟ್ ಉತ್ಪಾದನೆ ಆಗಬೇಕು. ಆದರೆ ಸದ್ಯ 900ರಿಂದ ಒಂದು ಸಾವಿರ ಮೆಗಾವಾಟ್ ವಿದ್ಯುತ್ ಲಭ್ಯವಾಗುತ್ತಿದೆ. ಎರಡು ಮತ್ತು ಏಳನೇ ಘಟಕಗಳು ಸ್ಥಗಿತಗೊಂಡಿವೆ. ಉಳಿದ ಘಟಕಗಳಲ್ಲೂ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಇದರಿಂದಾಗಿ ಉತ್ಪಾದನೆಯಲ್ಲಿ ಕುಸಿತವಾಗಿದೆ.

ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಇರುವುದರಿಂದ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಬೇಕಾಗಿದೆ. ಶಾಖೋತ್ಪನ್ನ ಘಟಕಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದೆ ಇರುವುದರಿಂದ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಸೆಲ್ವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

`ಈಗ 800ರಿಂದ ಒಂದು ಸಾವಿರ ಮೆಗಾವಾಟ್ ವಿದ್ಯುತ್ ಕೊರತೆ ಇದೆ. ಶಾಖೋತ್ಪನ್ನ ಘಟಕಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾದರೆ ಪೂರೈಕೆಯಲ್ಲಿ ಸ್ವಲ್ಪ ಸುಧಾರಣೆಯಾಗಬಹುದು. ಸದ್ಯಕ್ಕೆ ನಿಗದಿತ ಸಮಯದಲ್ಲಿ ಅಧಿಕೃತ ಲೋಡ್‌ಶೆಡ್ಡಿಂಗ್ ಮಾಡುವ ಉದ್ದೇಶವಿಲ್ಲ' ಎಂದು ಅವರು ಹೇಳಿದರು.
`ಈ ತಿಂಗಳಲ್ಲಿ ನಿತ್ಯ 180 ದಶಲಕ್ಷ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ. ಶನಿವಾರ 156.83 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗಿದೆ. ನಿತ್ಯ 30 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡುತ್ತಿದ್ದರೂ, ಬೇಡಿಕೆಯಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ' ಎಂದರು.

ನಗರ ಪ್ರದೇಶಗಳಲ್ಲಿ ಸರಾಸರಿ ಒಂದು ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂರು ಫೇಸ್ ವಿದ್ಯುತ್ ಅನ್ನು ಆರು ಗಂಟೆ ಬದಲು 4ರಿಂದ 5 ಗಂಟೆ ಕಾಲ ಮಾತ್ರ ನೀಡಲಾಗುತ್ತಿದೆ. ರಾತ್ರಿ ವೇಳೆ ಕೆಲವೆಡೆ ನಿರಂತರವಾಗಿ ಸಿಂಗಲ್‌ಫೇಸ್ ವಿದ್ಯುತ್ ಪೂರೈಸುವುದಾಗಿ ಹೇಳುತ್ತಿದ್ದರೂ, ಇದರ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುತ್ತಾರೆ ರೈತರು.

ಕೇಂದ್ರದ ಕೋಟಾ: ಕೇಂದ್ರದಿಂದ ರಾಜ್ಯಕ್ಕೆ ನಿತ್ಯ 1,836 ಮೆಗಾವಾಟ್ ವಿದ್ಯುತ್ ಲಭ್ಯವಾಗಬೇಕು. ಆದರೆ ಸರಾಸರಿ 1,300 ಮೆಗಾವಾಟ್ ಮಾತ್ರ ಲಭ್ಯವಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಜಲವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಸ್ಥಿತಿಯಲ್ಲಿ ಇಲ್ಲ. ಶನಿವಾರ 27.92 ದಶಲಕ್ಷ ಯೂನಿಟ್ ಜಲವಿದ್ಯುತ್ ಬಳಕೆಯಾಗಿದೆ.

ಲಿಂಗನಮಕ್ಕಿ, ಸೂಪಾ ಮತ್ತು ಮಾಣಿಯಲ್ಲಿ ಈಗಿರುವ ನೀರನ್ನು ಬಳಸಿಕೊಂಡು ಒಟ್ಟು 5,711 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6,560 ದಶಲಕ್ಷ ಯೂನಿಟ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿತ್ತು. ಲಿಂಗನಮಕ್ಕಿಯಲ್ಲಿ ಶೇಕಡ 70.84 (83.43), ಸೂಪಾದಲ್ಲಿ ಶೇಕಡ 57.36 (67.44) ಮತ್ತು ಮಾಣಿಯಲ್ಲಿ ಶೇ 69ರಷ್ಟು (64.50) ನೀರಿದೆ. ಆವರಣದಲ್ಲಿ ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಇದ್ದ ನೀರಿನ ಪ್ರಮಾಣದ ಅಂಕಿ ಅಂಶಗಳನ್ನು ನೀಡಲಾಗಿದೆ.

ಗಾಳಿಯ ಬೀಸುವಿಕೆ ತೀವ್ರತೆ ಕಳೆದುಕೊಂಡಿರುವ ಕಾರಣ ಪವನ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಗಾಳಿ ಬಿರುಸಾಗಿ ಬೀಸುತ್ತಿದ್ದಾಗ ಗರಿಷ್ಠ 1,200 ಮೆಗಾವಾಟ್ ಪವನ ವಿದ್ಯುತ್ ಉತ್ಪಾದನೆಯಾಗಿತ್ತು. ಆದರೆ, ಈಗ ಸರಾಸರಿ 100 ಮೆಗಾವಾಟ್ ಉತ್ಪಾದನೆ ಆಗುತ್ತಿದೆ. ಕೆಲವೊಮ್ಮೆ 50 ಮೆಗಾವಾಟ್ ಸಹ ದೊರೆಯುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ಬಳ್ಳಾರಿ ಘಟಕ: ಹೊಸದಾಗಿ ಆರಂಭವಾಗಿರುವ ಬಳ್ಳಾರಿಯ ಎರಡನೇ ಘಟಕ ಇನ್ನೂ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಿಲ್ಲ. ಪ್ರಾಯೋಗಿಕವಾಗಿ ಹಿಂದೆ ಉತ್ಪಾದನೆ ಶುರುವಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಮತ್ತೆ ಸ್ಥಗಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ರೈತರ ಬೇಸರ: ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಆರು ಗಂಟೆ ಕಾಲ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಇಂಧನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ 4-5 ಗಂಟೆ ಮಾತ್ರ ಮೂರು ಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ರೈತರು ಬೇಸರ ವ್ಯಕ್ತಪಡಿಸಿದರು.

`ಈ ವರ್ಷ ಸರಿಯಾಗಿ ಮಳೆ ಆಗದ ಕಾರಣ ಮಳೆ ಆಶ್ರಯದ ಬೆಳೆಗಳು ನಾಶವಾಗಿವೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಈಗ ಆಲೂಗಡ್ಡೆ ಬೆಳೆ ನಾಟಿ ಮಾಡಿದ್ದೇವೆ. ಆದರೆ, ವಿದ್ಯುತ್ ಕೊರತೆಯಿಂದ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಾವರಿ ಆಶ್ರಯದ ಬೆಳೆಗಳೂ ಹಾಳಾಗುವ ಆತಂಕ ಎದುರಾಗಿದೆ' ಎಂದು ಕೋಲಾರ ತಾಲ್ಲೂಕಿನ ರೈತ ಮುನಿಸ್ವಾಮಿಗೌಡ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT