ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಚಟುವಟಿಕೆ ತಡೆಗೆ ಆಗ್ರಹ

Last Updated 3 ಜೂನ್ 2013, 8:49 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಾರಂಗಿ ಹಿನ್ನೀರು ಪ್ರದೇಶ ಒಂದು ಸುಂದರ ಪ್ರವಾಸಿ ತಾಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟು, ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಕಲ್ಲೂರು ಗ್ರಾಮಸ್ಥರ ಆರೋಪ.

ಕುಶಾಲನಗರದಿಂದ ಬಸವನಹಳ್ಳಿ ಮಾರ್ಗವಾಗಿ 15 ಕಿಲೋ ಮೀಟರ್ ಪ್ರಯಾಣಿಸಿದರೆ ಸುಂದರ ಪ್ರವಾಸಿ ತಾಣ ಸಿಗುತ್ತದೆ. ತನ್ನ ಸುತ್ತ ಇರುವ ಬೆಟ್ಟ ಹಾಗೂ ಸುಂದರ ಕಾನನ ಒಂದೆಡೆಯಾದರೆ, ಮತ್ತೊಂದೆಡೆ ನೀರಿನಲ್ಲಿ ಒಣಗಿ ಬೋಳಾಗಿ ನಿಂತ ಮರಗಳು ಕ್ಯಾನ್‌ವಾಸ್ ಮೇಲೆ ಬಿಡಿಸಿದ ಚಿತ್ರಗಳಂತೆ ಗೋಚರಿಸುತ್ತವೆ. ಇವೆಲ್ಲವೂ ಹಾರಂಗಿ ಹಿನ್ನೀರು ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ಇಲ್ಲಿ ನಡೆಯುತ್ತಿದ್ದು, ಕುಟುಂಬ ಸಮೇತರಾಗಿ ಅಲ್ಲಿಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹಿನ್ನೀರಿಗೆ ಹೊಂದಿಕೊಂಡಂತೆ ಇರುವ ಹೆರೂರು, ಕಲ್ಲೂರು ಮತ್ತು ನಾಕೂರು ಶಿರಂಗಾಲದ ಗ್ರಾಮಸ್ಥರು ತಲೆ ಎತ್ತಿ ತಿರುಗಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಸುತ್ತಮುತ್ತಲ ಗ್ರಾಮಸ್ಥರ ಆರೋಪ.

ಅನೈತಿಕ ಚಟುವಟಿಕೆಯಲ್ಲಿ ಕುಶಾಲನಗರದ ಕೆಲವು ಕಾಲೇಜು ವಿದಾರ್ಥಿ- ವಿದ್ಯಾರ್ಥಿನಿಯರು ಭಾಗಿಯಾಗುತ್ತಿದ್ದಾರೆ ಎಂದು ಹೆರೂರು ಗ್ರಾಮಸ್ಥರು ಆರೋಪಿಸುತ್ತಾರೆ. ಕುಶಾಲನಗರದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಹೊರ ಜಿಲ್ಲೆಗಳಿಂದ ಬಂದು ಖಾಸಗಿ ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್‌ಹೌಸ್‌ಗಳಲ್ಲಿ ತಂಗುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂತಹ ಅನೈತಿಕ ಚಟುವಟಿಕೆಗಳಲ್ಲಿ ಯಾವುದೇ ಭಯವಿಲ್ಲದೆ ಭಾಗಿಯಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವುದು ಸೂಕ್ತ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡರು.

ಯಾವ ಸ್ಥಳದಲ್ಲಿ ನೋಡಿದರೂ ಬೀರು, ವಿಸ್ಕಿಗಳ ಬಾಟಲಿಗಳು ಬಿದ್ದಿವೆ. ಯುವಕರು ಫೆವಿಬಾಂಡ್, ಗಾಂಜಾ ಮುಂತಾದವುಗಳನ್ನು ಬಳಸುತ್ತಿರುವುದು ಕಂಡು ಬಂದಿದೆ. ಈ ಅನೈತಿಕ ಚಟುವಟಿಕೆಗೆ ಪೊಲೀಸರು ಕಡಿವಾಣ ಹಾಕುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

`ಇಲ್ಲಿಗೆ ಬರುವ ಸಾಕಷ್ಟು ಯುವಜನರು ಮತ್ತಿಗಾಗಿ ಫವಿಬಾಂಡ್ ಗಾಂಜಾ ಮುಂತಾದವುಗಳು ಬಳಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಹಿನ್ನೀರಿಗೆ ಹೊಂದಿಕೊಂಡಂತೆ ಮೂರ‌್ನಾಲ್ಕು ಗ್ರಾಮಗಳಿವೆ. ಹೀಗಾಗಿ ದುರಂತ, ಅಪಾಯಗಳು ಸಂಭವಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮವಹಿಸಬೇಕಾಗಿದೆ ಎನ್ನುತ್ತಾರೆ ಚಿತ್ರನಟ ರವಿ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT