ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಗಳನ್ನು ನಿಯಂತ್ರಿಸಿ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮನೆ ಎನ್ನುವುದು ಸುರಕ್ಷಿತ ಭಾವವನ್ನು ಉಂಟು ಮಾಡುವಂತಹ ನೆಲೆ. ಆದರೆ ಇಂತಹ ಮನೆಯೂ ಮಹಿಳೆಯರು ಹಾಗೂ ವೃದ್ಧರ ಹತ್ಯೆಯ ತಾಣಗಳಾಗುತ್ತಿರುವುದು ಬೆಂಗಳೂರು ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಎನಿಸಿದ ಜಯನಗರದಲ್ಲಿ 78 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ ಅವರ ಇಬ್ಬರು ಅಕ್ಕಂದಿರನ್ನೂ ಕೊಲ್ಲಲೆತ್ನಿಸಿರುವ ಘಟನೆ ಹಾಡಹಗಲೇ ನಡೆದಿರುವುದು ಬೆಂಗಳೂರಿನಲ್ಲಿ ತಲ್ಲಣವನ್ನುಂಟು ಮಾಡಿದೆ. ಅದೂ ಈ ಕೊಲೆ ಹಾಗೂ ಕೊಲೆ ಯತ್ನಗಳು ನಡೆದಿರುವುದು ಅವರ ಮನೆಯಲ್ಲಿ ಕೊಳಾಯಿ ರಿಪೇರಿ ಮಾಡುತ್ತಿದ್ದ ಪರಿಚಿತ ವ್ಯಕ್ತಿಯಿಂದ ಎಂಬುದು ಮತ್ತೂ ಘೋರವಾದದ್ದು. ಮನುಷ್ಯರ ನಡುವಿನ ವಿಶ್ವಾಸವನ್ನೇ ಕಿತ್ತೊಗೆಯುವ ಇಂತಹ ಕೃತ್ಯಗಳು ಆಘಾತಕಾರಿ.

ಈ ಹಿಂದೆ 2009ರಲ್ಲಿ ಜಯನಗರದಲ್ಲಿ ನಡೆದ ವೃದ್ಧ ದಂಪತಿಯ ಕೊಲೆಯೂ ಬೆಂಗಳೂರಿನ ಹಿರಿಯ ನಾಗರಿಕರಲ್ಲಿ ಭಾರಿ ಅಭದ್ರತೆಯನ್ನೇ ಸೃಷ್ಟಿಸಿದ್ದುದನ್ನು ನೆನಪಿಸಿಕೊಳ್ಳಬಹುದು. ನಂತರ ಆಗ ಮತ್ತಿನ್ನೊಂದೇ ವಾರದಲ್ಲಿ ಜಯನಗರದ ಮತ್ತೊಂದು ಮನೆಯಲ್ಲಿ ತಾಯಿ, ಮಗಳು, ಸೊಸೆಯ ತ್ರಿವಳಿ ಕೊಲೆಯಾಗಿತ್ತು. ನಿಯಂತ್ರಣ ಮೀರಿ ಬೆಳೆಯುತ್ತಿರುವ ಬೆಂಗಳೂರನ್ನು ಅಪರಾಧಮುಕ್ತ ನಗರವಾಗಿಸುವುದು ಕಷ್ಟ ಇರಬಹುದು.

ಆದರೆ ಅಪರಾಧಗಳನ್ನು ಎಸಗಿದವರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬಂತಹ ಪರಿಸರವನ್ನು ಸೃಷ್ಟಿಸುವುದು ಸಾಧ್ಯವಿದೆ. ಇಂತಹ ದುಷ್ಕೃತ್ಯಗಳಿಗೆ ಕಾನೂನಿನ ಕುಣಿಕೆ ಬಿದ್ದೇ ಬೀಳುತ್ತದೆ ಎಂಬಂಥ ಭೀತಿ ಅಪರಾಧಿಗಳಲ್ಲಿ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಬಿಗಿ ಕ್ರಮ ಕೈಗೊಳ್ಳಬೇಕು.

ಹಿರಿಯ ನಾಗರಿಕರು ಅಥವಾ ಒಬ್ಬಂಟಿ ಮಹಿಳೆಯರು ತಮ್ಮಷ್ಟಕ್ಕೆ ತಾವು ಬದುಕುವುದೂ ಅಸುರಕ್ಷಿತ ಎನ್ನಿಸುವ ವಾತಾವರಣ ಉಂಟಾಗಿರುವುದು ನಾಗರಿಕ ಸಮಾಜದಲ್ಲಿನ ಮೌಲ್ಯಗಳ ಪತನಕ್ಕೆ ಸಾಕ್ಷಿ. ಬದಲಾಗುತ್ತಿರುವ ಜೀವನ ಶೈಲಿಗಳಿಂದಾಗಿ ಬೇರೆ ಊರುಗಳು ಅಥವಾ ವಿದೇಶಗಳಲ್ಲಿ ನೆಲೆಸಿರುವ ಮಕ್ಕಳನ್ನು ಹೊಂದಿದ ಹಿರಿಯಜೀವಗಳು ತಮ್ಮಷ್ಟಕ್ಕೆ ಬದುಕುವುದು ನಗರಗಳಲ್ಲಿ ಈಗ ಮಾಮೂಲು.

ಆದರೆ ಹಣ ಅಥವಾ ಆಭರಣಗಳ ದರೋಡೆಗಾಗಿ ಅಸಹಾಯಕರಾದ ವೃದ್ಧರು ಹಾಗೂ ಮಹಿಳೆಯರ ಕೊಲೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ನಾಗರಿಕ ಸಮಾಜಕ್ಕೇ ಕಳಂಕ. ಈ ಬಗ್ಗೆ ಸಾಮುದಾಯಿಕ ಎಚ್ಚರ ಸಮಾಜದಲ್ಲಿ ಮೂಡಬೇಕಿದೆ. ಕೊಳಾಯಿ ಅಥವಾ ವಿದ್ಯುತ್ ರಿಪೇರಿ, ಮನೆಗೆ ಪೇಂಟಿಂಗ್‌ನಂತಹ ಸೇವೆಗಳನ್ನು ನೊಂದಾಯಿತ ಸೇವಾ ಸಂಸ್ಥೆಗಳ ಮೂಲಕ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವ ಮೂಲಕ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಬಹುದು.

ಸಮಾಜದಲ್ಲಿ ಅಪರಾಧ ಪ್ರವೃತ್ತಿಗಳ ಬೆಳವಣಿಗೆಯ ನಿಯಂತ್ರಣಕ್ಕೆ ಮಾಧ್ಯಮಗಳಲ್ಲಿ ಅಪರಾಧಗಳ ವೈಭವೀಕರಣವಾಗದಂತೆ ಹೊಣೆಗಾರಿಕೆ ಪ್ರದರ್ಶಿಸುವುದು ಮುಖ್ಯ. ಹಾಗೆಯೇ ಬೆಳೆಯುತ್ತಿರುವ ನಗರ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯ ಸಂಖ್ಯೆಯಲ್ಲೂ ಹೆಚ್ಚಳವಾಗಬೇಕು.

ಗಣ್ಯರ ರಕ್ಷಣೆಗೆ ನೀಡುವ ಆದ್ಯತೆಯಂತೆಯೇ ಜನಸಾಮಾನ್ಯರ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು  ನೀಡುವುದೂ ತಮ್ಮ ಕರ್ತವ್ಯ ಎಂಬುದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು. ನಾಗರಿಕರಲ್ಲಿ ಅಭದ್ರತೆಯ ಭಾವನೆಯನ್ನು ಹೆಚ್ಚಿಸುವಂತಹ ಇಂತಹ ಅಪರಾಧಗಳ ಕುರಿತು ತ್ವರಿತ ತನಿಖೆ. ವಿಚಾರಣೆಗಳು ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುವುದೂ ಬಹು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT