ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ ಪ್ರಕರಣ ಸುಖಾಂತ್ಯ

Last Updated 24 ಸೆಪ್ಟೆಂಬರ್ 2013, 20:05 IST
ಅಕ್ಷರ ಗಾತ್ರ

ರಾಮನಗರ: ಆಸ್ತಿ ವಿಷಯಕ್ಕೆ ಅಣ್ಣನ ಮಗನಿಂದಲೇ ಅಪಹರಣಕ್ಕೆ ಒಳಗಾಗಿದ್ದ ಅಂಧ್ರಹಳ್ಳಿಯ ಮುನಿಯಪ್ಪ (60) ಅವರನ್ನು ಅಪಹರಣಕಾರರಿಂದ ಬಿಡಿಸಿಕೊಂಡು ಬರುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಅಪಹರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿನಯ್‌, ಪ್ರವೀಣ್‌, ಯಶವಂತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿಯಪ್ಪ ಅವರ ಸಹೋದರ ತಿಮ್ಮಯ್ಯ ಅವರ ಪುತ್ರ ರಂಗೇಗೌಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಮತ್ತು ಆತನ ಇತರ ಮೂವರು ಸಹಚರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಅಂಧ್ರಹಳ್ಳಿಯಲ್ಲಿನ 18 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮುನಿಯಪ್ಪ ಮತ್ತು ರಂಗೇಗೌಡ ನಡುವೆ ಎಂಟು– ಹತ್ತು ವರ್ಷದಿಂದ ವಿವಾದ ಇತ್ತು. ಅದಕ್ಕೆ ಸಂಬಂಧಿಸಿದಂತೆ ರಂಗೇಗೌಡ ಕೆಲ ಬಾರಿ ಮುನಿಯಪ್ಪ ಅವರನ್ನು ಬೆದರಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರದ ಮುನಿಯಪ್ಪ ಅವರಿಗೆ ಪಾಠ ಕಲಿಸಲು ರಂಗೇಗೌಡ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುನಿಯಪ್ಪ ಅವರು ಸೋಮವಾರ ಬೆಳಿಗ್ಗೆ ವಾಯು ವಿಹಾರದಲ್ಲಿ ಇದ್ದಾಗ ಅವರ ಅಪಹರಣ ಮಾಡಲಾಯಿತು. ವಿಷಯ ಗೊತ್ತಾದ ಕೂಡಲೇ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗ್ರವಾಲ್‌ ಅವರು ಪ್ರಕರಣ ಪತ್ತೆಗೆ ವಿಶೇಷ ತಂಡ ರಚಿಸಿದರು. ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಅಪಹರಣಕಾರರ ತಂಡ ಮೊದಲು ಶಿವಮೊಗ್ಗ ಮಾರ್ಗ ದಲ್ಲಿ ಸಾಗಿ ನಂತರ ಎರಡು ತಂಡವಾಗಿ ವಿಭಜನೆಯಾಯಿತು. ಅದರಲ್ಲಿ ಒಂದು ತಂಡ ಹುಬ್ಬಳ್ಳಿ ಕಡೆಗೆ ಸಾಗಿತು. ಹುಬ್ಬಳ್ಳಿಯಲ್ಲಿ ಅಪರಾಧ ವಿಭಾಗದ ನಾಕಾಬಂದಿಯ ಬಳಿ ಬಂದ ‘ಇಂಡಿಕಾ’ ಕಾರಿನಲ್ಲಿ ವೃದ್ಧರೊಬ್ಬರು ಚೀರುತ್ತಿದ್ದರು. ಆ ಕಾರನ್ನು ತಪಾಸಣೆ ನಡೆಸಿದಾಗ ಅಪಹರಣವಾಗಿದ್ದ ಮುನಿಯಪ್ಪ ಪತ್ತೆಯಾದರು. ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ರಾಮನಗರ ಪೊಲೀಸರಿಗೆ ಹಸ್ತಾಂತರಿಸಿದದರು ಎಂದು ಪ್ರಕರಣದ ತನಿಖಾಧಿಕಾರಿಯೂ ಆದ ಕುಂಬಳಗೊಡು ಪೊಲೀಸ್‌ ಠಾಣೆಯ ಎಸ್‌.ಐ ಮಂಜುನಾಥ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಈ ಆರೋಪಿಗಳನ್ನು ನ್ಯಾಯಾಲಯದ ಪೊಲೀಸ್‌ ವಶಕ್ಕೆ ಒಪ್ಪಿಸಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT