ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ದಿನಗಳು

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

‘ಮಲ್ಲಿಗೆ ಹೂವೇ’ ಚಿತ್ರದ ಚಿತ್ರೀಕರಣ. ಕನಸು ಕಂಗಳ ಹುಡುಗಿ ಸನಿಹದಲ್ಲೇ ನಡೆಯುತ್ತಿದ್ದ ಶೂಟಿಂಗ್ ನಡೆಯುವಲ್ಲಿಗೆ ಹೋದರೆ ನಟಿಸುವ ಅವಕಾಶವೇ ಉಡಿಗೆ ಬೀಳಬೇಕೆ? ಹೀಗೆ, ಮೊದಲ ಚಿತ್ರದ ಅವಕಾಶ ಗಳಿಸಿದ ಪ್ರತಿಭೆಯ ಹೆಸರು ಅಪೂರ್ವ. ಇಂದು ಕಿರುತೆರೆ ಮತ್ತು ಬೆಳ್ಳಿತೆರೆಯ ಪರಿಚಿತ ಮುಖ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದವರು. ‘ಮಲ್ಲಿಗೆ ಹೂವೇ’ ಚಿತ್ರದಿಂದ ಆರಂಭವಾದ ಬಣ್ಣದ ನಂಟು ‘ಸುಂದರಿ ಗಂಡ ಸದಾನಂದ’ ಚಿತ್ರದಲ್ಲಿ ನಾಯಕಿಯಾಗಿ, ಆನಂತರ ಪೋಷಕ ನಟಿಯಾಗುವವರೆಗೂ ಮುಂದುವರಿಯಿತು.

ನಾಯಕಿಯಾಗಿ ನಟಿಸಿದ್ದರೂ ಪೋಷಕ ನಟಿಯಾಗಲು ಒಪ್ಪಿಕೊಂಡ ಅಪೂರ್ವ ನಾಯಕಿಗಿಂತ ನಟಿಯಾಗಬೇಕೆಂಬ ಹಂಬಲವುಳ್ಳವರು.
‘ಪಟೇಲ’, ‘ಮಿಲನ’, ‘ಜಾಕಿ’, ‘ರಾಮ್’, ‘ಸುಂಟರಗಾಳಿ’, ‘ದಾಸ’, ‘ಶಾಸ್ತ್ರಿ’ ಸಿನಿಮಾಗಳಲ್ಲಿ ನಟಿಸಿರುವ ಅವರು ಜೊತೆಜೊತೆಗೆ ‘ಸಮಾಗಮ’, ‘ನಿಕ್ಷೇಪ’, ‘ಕಣ್ಣಾಮುಚ್ಚಾಲೆ’, ‘ಪಾಪಾ ಪಾಂಡು’, ‘ಮೌನರಾಗ’ ಧಾರಾವಾಹಿಗಳಲ್ಲೂ ನಟಿಸಿದರು.

ಇದೀಗ ‘ಲಕುಮಿ’ ಧಾರಾವಾಹಿಯ ಜೊತೆಗೆ ಸಿನಿಮಾಗಳಲ್ಲೂ ಬಿಜಿಯಾಗಿದ್ದಾರೆ. ಹಾಸ್ಯ, ಸೆಂಟಿಮೆಂಟ್, ಬಜಾರಿ, ಮುಗ್ಧೆ, ಹಳ್ಳಿಹೆಂಗಸು, ಭಿಕ್ಷುಕಿ- ಹೀಗೆ ನಾನಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿರುವ ಅವರು, ‘ನೋಡುವವರಿಗೆ ತಮ್ಮದು ನಟನೆ ಎನಿಸಬಾರದು. ಪಾತ್ರದಲ್ಲಿ ಏನಾದರೂ ಸಂದೇಶ ಇರಬೇಕು’ ಎನ್ನುತ್ತಾರೆ. ತಮ್ಮ ಹೆಸರು ತಿಳಿಯದೇ ಇದ್ದರೂ ಜನ ಆ ಪಾತ್ರದಲ್ಲಿ ನಟಿಸಿರುವವರು ಚೆನ್ನಾಗಿ ಮಾಡಿದ್ದಾರೆ ಎಂದರೆ ಎಂಥದೋ ಖುಷಿ ಎನ್ನುವ ಅಪೂರ್ವ ನಟನೆಯೊಂದಿಗೆ ಕಲಾತಂಡ ಕಟ್ಟಿ ಹಾಸ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.

ವಸ್ತ್ರವಿನ್ಯಾಸ, ಆಭರಣ ವಿನ್ಯಾಸದಲ್ಲೂ ಆಸಕ್ತಿ ಹೊಂದಿರುವ ಅವರು ‘ಧರೆಗಿಳಿದ ಮಾದಪ್ಪ’ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿರುವುದಷ್ಟೇ ಅಲ್ಲ ಸಹಾಯಕ ನಿರ್ದೇಶಕಿ ಮತ್ತು ಸಹ ನಿರ್ಮಾಪಕಿಯೂ ಕೂಡ.

‘ಹೊಸ ನಿರ್ಮಾಪಕರಿಗೆ ಉದ್ಯಮದಲ್ಲಿ ಪ್ರೋತ್ಸಾಹ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುವ ಅಪೂರ್ವ, ಈ ಮೊದಲು ‘ಇವ್ನ ಒರಟ ಅಲ್ಲ’, ‘ಕಮಂಗಿಗಳು’ ಚಿತ್ರಗಳಿಗೆ ಹಣ ಹೂಡಿದ್ದರು.

‘ನಮಗೆ ಹೇಳಿದ ಪಾತ್ರವೇ ಒಂದು, ಸೆಟ್‌ನಲ್ಲಿ ಮಾಡಿಸುವುದೇ ಒಂದು. ಒಮ್ಮೊಮ್ಮೆ ಹೇಳದೇ ಕೇಳದೇ ಡೇಟ್ಸ್‌ಗಳನ್ನು ಬದಲಾಯಿಸಲಾಗಿರುತ್ತದೆ. ಅಲ್ಲದೇ ಮೊದಲು ಮಾತನಾಡಿದಷ್ಟು ಸಂಭಾವನೆ ಕೊಡಲು ತಕರಾರು ತೆಗೆಯುತ್ತಾರೆ’ ಎಂದು ನೊಂದುಕೊಳ್ಳುವ ಅವರು ಉದ್ಯಮದಲ್ಲಿ ನೋವು ತಿಂದ ಹಿರಿಯ ಮಹಿಳಾ ಕಲಾವಿದರ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT