ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಾಕಸ್ ಬರೀ ಕೌಶಲವಲ್ಲ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಣ್ಣಿಗೆ ಕನ್ನಡಕ, ಕಪ್ಪು ಪ್ಯಾಂಟಿನ ಮೇಲೆ ನೆಹರೂ ಶರ್ಟು, ಬಗಲಿಗೆ ಮೊಳಕಾಲು ಮುಟ್ಟುವ ಖಾದಿ ಬ್ಯಾಗು, ಕೈಯಲ್ಲಿ ಮಿರ-ಮಿರ ಮಿಂಚುವ ಬೆತ್ತ. ಇನ್ನು ಮೇಡಂ ಕೂಡ ಹೀಗೇ ಇರಬೇಕೆಂಬ ನಿರೀಕ್ಷೆ. ಸೀರೆಯ ಹೊರತು ಇತರ ಉಡುಪು ನಿಷಿದ್ಧ. ಅದರಲ್ಲೂ ಮೊಳಕೈ ಮುಚ್ಚುವಷ್ಟು ಉದ್ದದ ರವಿಕೆ. ಕೂದಲಿಗೂ ಜಡೆಯ ಬಲೆ ಕಡ್ಡಾಯ.

ಶಿಕ್ಷಕರು ಎಂದೊಡನೆ ಕಣ್ಣೆದುರಿಗೆ ಬಂದು ನಿಲ್ಲುವ ಸಾಂಪ್ರದಾಯಿಕ ಚಿತ್ರಣಗಳಿವು. ಈಗಲೂ ಎಷ್ಟೋ ಶಾಲೆಗಳಲ್ಲಿ ಇಂತಹ ನಿರ್ಬಂಧಗಳಿವೆ. ಆದರೆ `ಅಬಾಕಸ್~ ಮಕ್ಕಳ ಮುಂದೆ ಶಿಕ್ಷಕರನ್ನು ಸಂಪೂರ್ಣ ಭಿನ್ನವಾಗಿ ನಿಲ್ಲಿಸುವ ಗುರಿ ಹೊಂದಿದೆ ಎನ್ನುತ್ತಾರೆ `ವಿಜ್ ಕಿಡ್ಸ್~ (Whizkidz) ತರಬೇತಿ ಕೇಂದ್ರದ ವಿನಯ್ ಹೆಗಡೆ.

ಕಳೆದ 11 ವರ್ಷಗಳಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ `ವಿಜ್ ಕಿಡ್ಸ್~ ಎನ್ನುವ ಅಬಾಕಸ್ ತರಬೇತಿ ಕೇಂದ್ರವನ್ನು ನಡೆಸುತ್ತಿರುವ ಅವರು ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದು, ನೂರಾರು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಹೌದು, ಶಿಕ್ಷಕರು ಇಂತಹ ಇಮೇಜಿನಿಂದ ಮಾನಸಿಕವಾಗಿಯೂ ಹೊರಬಂದು ಮಕ್ಕಳಿಗೆ ಹೊಸ ರೀತಿಯ ದರ್ಶನ ಕೊಡಬೇಕು. ಒಂದು ಕೈಯಲ್ಲಿ ಬಳಪ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದ ಶಿಕ್ಷಕರು ಬಳಪವನ್ನು ಬಳಸುವುದಕ್ಕಿಂತ ಹೆಚ್ಚಾಗಿ ಬೆತ್ತವನ್ನೇ ಉಪಯೋಗಿಸುವುದನ್ನು ಮಕ್ಕಳು ನೋಡೇ ಇರುತ್ತಾರೆ. ಆದರೆ ಅಬಾಕಸ್‌ನಲ್ಲಿ ಶಿಕ್ಷಕರು ಸಾಂಪ್ರದಾಯಿಕ ಮನೋಭಾವದಿಂದ ಹೊರಬಂದು ಕಲಿಸಬೇಕು ಎನ್ನುವುದು ನಮ್ಮ ನಿರೀಕ್ಷೆ ಎನ್ನುತ್ತಾರೆ ಅವರು.

ಇಲ್ಲಿ ಶಿಕ್ಷಕರು ಹೀಗಿರಬೇಕು
ಅವರು ತಮ್ಮಿಷ್ಟದ ಬಟ್ಟೆ ಧರಿಸಬಹುದು. ಸೆಲ್ವಾರ್- ಕಮೀಜ್, ಜೀನ್ಸ್ ಕುರ್ತಾ ಕೂಡ ಆಗಬಹುದು. ಅದರ ಇತಿ-ಮಿತಿಗಳು ಅವರಿಗೇ ತಿಳಿದಿರುವುದರಿಂದ ನಾವು ಏನೂ ಹೇಳುವುದಿಲ್ಲ. ಇಲ್ಲಿ ಶಿಕ್ಷಕರು ಹೀಗೇ ಇರಬೇಕೆಂಬ ನಿಯಮವೇನೂ ಇರುವುದಿಲ್ಲ ಆದರೆ ಅವರು ಹೀಗೂ ಇರಬಹುದು ಎನ್ನುತ್ತಾರೆ ವಿನಯ್.

ದಿನಕ್ಕೆ ಎರಡೇ ಗಂಟೆ ಕೆಲಸ ಮಾಡುವುದರಿಂದ ಕೆಲಸದ ಒತ್ತಡ ಕಡಿಮೆ ಇರುತ್ತದೆ. ಆದರೆ ಆ ಎರಡು ಗಂಟೆಯೂ ಹಸನ್ಮುಖದಿಂದ, ಶಾಂತಿ ಸಮಾಧಾನದಿಂದ ಇರಬೇಕು. ಜೊತೆಗೆ, ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಆಯಾ ಮಕ್ಕಳ ಐಕ್ಯೂಗೆ ಒಗ್ಗುವಂತೆ ಪಾಠ ಮಾಡಬೇಕು.

ಮುಖ್ಯವಾಗಿ ಮಕ್ಕಳೊಂದಿಗೆ ಭಾವನಾತ್ಮಕ ಮತ್ತು ಪಾಲಕರೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಂಡು ಹೋಗಬೇಕು. ಇದು ಟ್ಯೂಷನ್ ಅಲ್ಲ ಎಂಬುದು ಮುಖ್ಯ ಸಂಗತಿ. 8ರಿಂದ 11 ಹಂತಗಳ ಅಬಾಕಸ್ ಕಲಿಕೆಗಾಗಿ ಮಕ್ಕಳು 2 ರಿಂದ 4 ವರ್ಷ ನಮ್ಮಂದಿಗಿರುತ್ತಾರೆ ಎನ್ನುತ್ತಾರೆ ಅವರು.

ವಿದ್ಯಾರ್ಥಿಗಳಿಗೆ ಏನು ಲಾಭ?
ಖುಷಿಯ ಕಲಿಕೆ: `ಅಬಾಕಸ್~ ಕೇವಲ ಗಣಿತ ಅಭ್ಯಾಸವಲ್ಲ. ಇದು ಖುಷಿಯ ಕಲಿಕೆ. ಮಕ್ಕಳು ಕಲಿಕೆಯನ್ನು ಶಿಕ್ಷೆಯಾಗಿ ಅಲ್ಲ, ಮೋಜಿನಿಂದ ನಿರ್ವಹಿಸುವಂತೆ ಮಾಡುವುದು ಇದರ ಗುರಿ.

ಸಂಖ್ಯಾ ಭಯ ದೂರ: ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಖ್ಯಾ ಭಯವಿದ್ದೇ ಇರುತ್ತದೆ. ಗಣೀತ ಎಂದೊಡನೆ ಒಂದು ರೀತಿಯ ಆತಂಕ. ಶಬ್ದಗಳಿಗಿರುವಂತೆ ಪರಸ್ಪರ ಸಂಬಂಧ ಅಂಕಿಗಳಿಗೆ ಇಲ್ಲದೇ ಇರುವುದು ಇದಕ್ಕೆ ಕಾರಣ. ಪ್ರತಿಯೊಂದು ಅಂಕಿಯೂ ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತವೆ. ಆದರೆ ಈ ವ್ಯವಸ್ಥೆಯಲ್ಲಿ ಅಂಕಿಗಳ ನಡುವೆ ಸಂಬಂಧ ಕಲ್ಪಿಸಲಾಗುತ್ತದೆ ಮತ್ತು ಅಬಾಕಸ್ ಸೂತ್ರದಿಂದ ಕ್ಷಣಮಾತ್ರದಲ್ಲಿ ವ್ಯವಕಲನ-ಸಂಕಲನ ಮಾತ್ರವಲ್ಲದೇ ಜಟಿಲವಾದ ಗಣಿತ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಹುದು.

ಇತರ ಅನುಕೂಲಗಳು:
-ಮಾನಸಿಕ ಗಣನೆಯ ಶಕ್ತಿಯನ್ನು ಬೆಳೆಸುತ್ತದೆ.
-ಆಲೋಚನಾ ಕ್ರಮವನ್ನು ಬದಲಿಸುತ್ತದೆ
-ಏಕಾಗ್ರತೆಯನ್ನು ವೃದ್ಧಿಸುತ್ತದೆ
-ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
-ವಿಷಯವನ್ನು ಅರ್ಥೈಸಿಕೊಳ್ಳುವ ಗ್ರಹಿಸುವ ಮತ್ತು ಗ್ರಹಿಸಿದ್ದನ್ನು ನೆನಪಿಸಿಕೊಳ್ಳುವ ಸಾಮರ್ಥ್ಯದಲ್ಲಿ ಪರಿಣಾಮಕಾರಿ ಸುಧಾರಣೆ ಕಂಡು ಬರುತ್ತದೆ.

-ವೇಗದ ಕಲಿಕೆ, ವೇಗದ ಗ್ರಹಿಕೆ ಮತ್ತು ವೇಗದ ನೆನೆಕೆಗೆ ಸಹಾಯಕ
ಅಬಾಕಸ್ ಕೇವಲ ಒಂದು ಕೌಶಲವಲ್ಲ. ಅಂಕಗಣಿತಕ್ಕೆ ಸಂಬಂಧಿಸಿದ ಲೆಕ್ಕಾಚಾರದ ಒಂದು ಸುಲಭ ಸಾಧನವಲ್ಲ. ಆದರೆ ಅದರೊಂದಿಗೆ ಮಕ್ಕಳ ಎಲ್ಲಾ ಅಗತ್ಯ ನೈಪುಣ್ಯಗಳನ್ನೂ ವೃದ್ಧಿಸುವ ಮಹತ್ವದ ತರಬೇತಿ.

ಇದು ಕಳೆದ ಕೆಲವು ವರ್ಷಗಳಿಂದ ಹೆಚ್ಚು ವ್ಯಾಪಕವಾಗಿ ಬಳಕೆಗೆ ಬಂದಿದ್ದು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜನಪ್ರಿಯತೆಗೆ ಪಾತ್ರವಾಗಿದೆಯೇನೊ ನಿಜ. ಆದರೆ ಹಾಗೆಂದು ಇದು ಹೊಸ ಬೆಳವಣಿಗೆ ಏನೂ ಅಲ್ಲ.
 
ಅಂಕಗಣಿತದ ಎಣಿಕೆಗೆ ಪ್ರಾಚೀನ ಕಾಲದಿಂದಲೂ ಬಳಕೆ ಮಾಡುತ್ತಿದ್ದ ಸಾಧನದ ಮುಂದುವರೆದ ರೂಪವಷ್ಟೆ. ಈಗ ಇದನ್ನು ಪ್ರಾಥಮಿಕ ಶಿಕ್ಷಣದ ಮೂಲಭೂತ ಭಾಗವಾಗಿ ಜಗತ್ತಿನ ಎಲ್ಲಾ ಭಾಗಗಳಲ್ಲೂ ಅನುಸರಿಸಲಾಗುತ್ತಿದೆ. ಅಂತೆಯೇ ಇಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎನ್ನುವವರಿಗೆ ಅವಕಾಶಗಳ ಸಾಲೇ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT