ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಬ್ಬಾ, ಸುದೀಪ್ ಬೌಂಡರಿ; ದಿಗಂತ್ ಕ್ಯಾಚ್!

Last Updated 31 ಅಕ್ಟೋಬರ್ 2011, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಲ್ಲಿ ಕ್ಯಾಮೆರಾ ಕ್ಲ್ಯಾಪ್ ಅಗಲಿಲ್ಲ, ಮೇಕಪ್ ಕಿರಿಕಿರಿ ಇರಲಿಲ್ಲ, ಫ್ಲ್ಯಾಷ್‌ನ ಝಗಮಗ ಕಾಣಲಿಲ್ಲ, ಡೈಲಾಗ್‌ಗಳ ಅಬ್ಬರಕ್ಕೆ ಆಸ್ಪದ ಇರಲಿಲ್ಲ, `ಕಟ್~ ಪದದ ಬಳಕೆಗೂ ಅವಕಾಶ ಸಿಗಲಿಲ್ಲ. `ಆ್ಯಕ್ಷನ್~ ಮಾತ್ರ ಬೆಳಿಗ್ಗೆ ಶುರುವಾಗಿದ್ದು ಸಂಜೆವರೆಗೆ ನಿಲ್ಲಲೇ ಇಲ್ಲ.

ನಗರದ ನವೀಕೃತ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ `ಡಾ.ರಾಜ್ ಕಪ್~ ಕ್ರಿಕೆಟ್ ಟೂರ್ನಿಯ ಅಂಗವಾಗಿ ನಿರ್ಮಾಣಗೊಂಡಿದ್ದ `ತಾರೆಗಳ ತೋಟ~ದ ನೋಟವಿದು. ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘ ಏರ್ಪಡಿಸಿರುವ  ಈ ಟೂರ್ನಿಯ ಮೊದಲ ದಿನ ಅಂದದ ಆಟದ ಮೂಲಕ ಅಭಿಮಾನಿಗಳಲ್ಲಿ ಮಿಂಚು ಹರಿಸಿದವರು `ಕಿಚ್ಚ~ ಸುದೀಪ್ ಹಾಗೂ ದಿಗಂತ್ ಮಾತ್ರ.

ಮೊದಲ ದಿನದ ಆಟದಲ್ಲಿ ಎಡಿಟಿಂಗ್ ಬುಲ್ಸ್ ವಿರುದ್ಧ ಗೆಲುವು ಪಡೆದ ಡ್ಯಾನ್ಸರ್ ಇಲೆವನ್ ಹಾಗೂ ಮೀಡಿಯಾ ಮಾಸ್ಟರ್ಸ್‌ ತಂಡವನ್ನು ಪರಾಭವಗೊಳಿಸಿದ ಲೆನ್ಸ್ ಕಿಂಗ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಡ್ಯಾನ್ಸರ್ಸ್‌ ಇಲೆವನ್ ತಂಡದ ನಾಯಕತ್ವ ವಹಿಸಿದ್ದ ಸುದೀಪ್ ಎಡಿಟಿಂಗ್ ಬುಲ್ಸ್ ತಂಡದ ಎದುರಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ನಿರ್ವಹಿಸುವ ಮೂಲಕ ಥೇಟ್ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಂತೆಯೇ ಕಂಗೊಳಿಸಿದರು. ಕೀಪಿಂಗ್ ಮಾಡುವಾಗ `ಬೈ~ ರೂಪದಲ್ಲಿ 2-3 ಬೌಂಡರಿ ಬಿಟ್ಟರಾದರೂ ಮಿಕ್ಕಂತೆ ತಮ್ಮ ಹೊಣೆಯನ್ನು ಚೆನ್ನಾಗಿಯೇ ನಿಭಾಯಿಸಿದರು.

ಬಾನೆತ್ತರಕ್ಕೆ ನೆಗೆದಿದ್ದ ಚೆಂಡನ್ನು ಸುದೀಪ್ ಹತ್ತಾರು ಮಾರು ಹಿಂದಕ್ಕೆ ಓಡಿ, ಗ್ಲೌಸ್‌ಗಳಲ್ಲಿ ಸುರಕ್ಷಿತವಾಗಿ ಹಿಡಿತಕ್ಕೆ ಪಡೆದದ್ದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ಸುದೀಪ್ ಎರಡು ಆಕರ್ಷಕ ಬೌಂಡರಿಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ತಲುಪುವಂತೆ ಮಾಡಿದರು. ಆಗ ಜೊತೆ ಆಟಗಾರರೆಲ್ಲ ಸುದೀಪ್ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸಿದರು. ಇಡೀ ಕ್ರೀಡಾಂಗಣ ಸುತ್ತು ಹಾಕಿದ ಆಟಗಾರರು ಪ್ರೇಕ್ಷಕರತ್ತ ಗಾಳಿಯಲ್ಲಿ ಮುತ್ತುಗಳನ್ನು ತೇಲಿಬಿಟ್ಟರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಡಿಟಿಂಗ್ ಬುಲ್ಸ್ ತಂಡ ಆರು ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದರೆ, ಡ್ಯಾನ್ಸರ್ಸ್‌ ಇಲೆವನ್ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಪ್ರದೀಪ್ (31), ಸೌರವ್ (28) ಹಾಗೂ ಭಾಸ್ಕರ್ (20) ತಂಡದ ಗೆಲುವನ್ನು ಸುಲಭಗೊಳಿಸಿದರು. ಬ್ಯಾಟಿಂಗ್‌ನಲ್ಲಿ ಮಿಂಚಿದ ಪ್ರದೀಪ್ `ಪಂದ್ಯ ಪುರುಷ~ರಾಗಿ ಆಯ್ಕೆಯಾದರು.

ದಿನದ ಎರಡನೇ ಪಂದ್ಯದಲ್ಲಿ ಮೀಡಿಯಾ ಮಾಸ್ಟರ್ಸ್‌ ಪರವಾಗಿ ಆಡಿದ ನಟ ದಿಗಂತ್ ಸ್ಲಿಪ್‌ನಲ್ಲಿ ಬಲಕ್ಕೆ ಹಾರಿ ಗಾಳಿಯಲ್ಲೇ ತೇಲುತ್ತಾ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ದಿನದ ಹೈಲೈಟ್ ಆಗಿತ್ತು.

 ಈ ಪಂದ್ಯದಲ್ಲಿ ಲೆನ್ಸ್ ಕಿಂಗ್ಸ್ ತಂಡ 15 ರನ್‌ಗಳಿಂದ ಜಯಭೇರಿ ಬಾರಿಸಿತು. 37 ರನ್‌ಗಳನ್ನು ಬಾರಿಸಿದ `ಲೆನ್ಸ್‌ಮ್ಯಾನ್~ ಸುಧೀರ್ ಎರಡು ವಿಕೆಟ್ ಪಡೆಯುವ ಮೂಲಕ `ಪಂದ್ಯ ಪುರುಷ~ ಪ್ರಶಸ್ತಿ ಪಡೆದರು.
ದೊಡ್ಡಣ್ಣ ಥರ್ಡ್ ಅಂಪೈರ್ ಆಗಿದ್ದರೆ, ಬ್ಯಾಂಕ್ ಜನಾರ್ದನ, ಹೊನ್ನಾಳಿ ಕೃಷ್ಣ ಸೇರಿದಂತೆ ಹಾಸ್ಯ ನಟರು ಕೆಲ ಹೊತ್ತು ಕಾಮೆಂಟೇಟರ್‌ಗಳಾಗಿದ್ದರು.

ತಾರೆಯರ ದಂಡು
ಶಿವರಾಜಕುಮಾರ್, ದರ್ಶನ, ರಮೇಶ್ ಅರವಿಂದ್, ಶ್ರೀನಿಗರ ಕಿಟ್ಟಿ, ಪ್ರೇಮ್, ಸಾಧು ಕೋಕಿಲ, ದುನಿಯಾ ವಿಜಯ್, `ಲೂಸ್ ಮಾದ~ ಯೋಗೀಶ್, ನವೀನಕೃಷ್ಣ, ರಂಗಾಯಣ ರಘು, ಸೃಜನ್, ತೇಜಸ್ವಿನಿ, ಹರ್ಷಿಕಾ ಪೂಣಚ್ಚ, ನೀತು, ರೂಪಿಕಾ ಮೊದಲಾದ ತಾರೆಯರ ದಂಡು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಆಟಗಾರರನ್ನು ಹುರಿದುಂಬಿಸಿತು.

ರಮೇಶ್ ಅರವಿಂದ್ ಎಸೆದ ಚೆಂಡನ್ನು ಸಚಿವ ಜಗದೀಶ ಶೆಟ್ಟರ ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು. ಮೊದಲ ಪಂದ್ಯದ ಟಾಸ್ ಮಾಡಿದ್ದೂ ಸಚಿವ ಶೆಟ್ಟರ ಅವರೇ. ಕೆಎಸ್‌ಸಿಎಯಿಂದ ಮಾನ್ಯತೆ ಪಡೆದ ಅಂಪೈರ್‌ಗಳಾದ ಕೆ. ಮಂಜುನಾಥ್ ಹಾಗೂ ಡೆವಿಡ್ ಪಾಲ್ ಭಾನುವಾರದ ಪಂದ್ಯಗಳ ನಿರ್ಣಾಯಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT