ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನವ ಫೆರೊ?

Last Updated 5 ಫೆಬ್ರುವರಿ 2011, 15:35 IST
ಅಕ್ಷರ ಗಾತ್ರ


ಮೂವತ್ತು ವರ್ಷಗಳ ಹಿಂದೆ ಕೈರೋದ ಸೇನಾ ಪೆರೇಡ್‌ನಲ್ಲಿ ಈಜಿಪ್ಟ್‌ನ ಅಂದಿನ ಅಧ್ಯಕ್ಷ ಅನ್ವರ್ ಸಾದತ್ ಅವರ ಹತ್ಯೆ ನಡೆದಾಗ ಅವರ ಪಕ್ಕದಲ್ಲೇ ಇದ್ದು ಗುಂಡೇಟು ತಪ್ಪಿಸಿಕೊಂಡ ಪ್ರಮುಖ ವ್ಯಕ್ತಿ ಮುಹಮ್ಮದ್ ಹೋಸ್ನಿ ಸೈಯ್ಯದ್ ಮುಬಾರಕ್. ಉಪಾಧ್ಯಕ್ಷ ಪದವಿಯಲ್ಲಿದ್ದರೂ ಅಷ್ಟೇನೂ ಸುದ್ದಿ ಮಾಡದ ಈ ವ್ಯಕ್ತಿ 30 ವರ್ಷ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು ಎಂದು ಯಾರೂ ಊಹಿಸಿರಲಿಲ್ಲ. ಈಜಿಪ್ಟ್‌ನ ಚರಿತ್ರೆಯೇ ಹಾಗೆ. ಇಲ್ಲಿ ನಡೆಯುವುದೆಲ್ಲವೂ ಯಾರೂ ಊಹಿಸಲಾರದಂಥ ಘಟನೆಗಳು. ದೇವರೂ ತನಗೆ ಎದುರಲ್ಲ ಎನ್ನುತ್ತಿದ್ದ ಫೆರೊಗಳು ಇತಿಹಾಸದಲ್ಲಿರುವುದು ಪಿರಾಮಿಡ್‌ಗಳೊಳಗಿರುವ  ಮಮ್ಮಿಗಳಿಂದ ಮಾತ್ರ. ಮೊನ್ನೆ ಕೈರೋದ ಬೀದಿಗಿಳಿದ ಪ್ರತಿಭಟನೆಕಾರರೂ ಹೋಸ್ನಿ ಮುಬಾರಕ್‌ಗೆ ಕೊಟ್ಟ ಬಿರುದೂ ಅದುವೇ ‘ಫೆರೊ’.

ಅನ್ವರ್ ಸಾದತ್‌ರಂತಹ  ಪ್ರಜಾಪ್ರಭುತ್ವವಾದಿಯ ಜೊತೆಗಿದ್ದ ಹೋಸ್ನಿ  ಮುಬಾರಕ್ ಪ್ರಜಾಸತ್ತೆಯನ್ನು ಉಳಿಸುವ, ಮೂಲಭೂತವಾದದ ವಿರುದ್ಧ ಹೋರಾಡುವ ನೆಪದಲ್ಲೇ ಮೂವತ್ತು ವರ್ಷಗಳ ಕಾಲ ದೇಶವನ್ನು ಸರ್ವಾಧಿಕಾರಿಯಂತೆ ನಿರ್ವಹಿಸಿದ್ದು ಚರಿತ್ರೆಯ ಕ್ರೂರ ವಿಪರ್ಯಾಸಗಳಲ್ಲೊಂದು.

1979ರಲ್ಲಿ ಅನ್ವರ್ ಸಾದತ್ ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದಾಗ ಅರಬ್ ಲೀಗ್‌ನಿಂದ ಈಜಿಪ್ಟನ್ನು ಅಮಾನತುಗೊಳಿಸಲಾಯಿತು. ಕೈರೋದಲ್ಲಿದ್ದ ಅದರ ಕೇಂದ್ರ ಕಚೇರಿಯೇ ಸ್ಥಳಾಂತರಗೊಂಡಿತು. ಅರಬ್ ದೇಶಗಳಿಗೆ ನಾಯಕನ ಸ್ಥಾನದಲ್ಲಿದ್ದ ಈಜಿಪ್ಟ್ ಒಂದು ರೀತಿಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತ ಸ್ಥಿತಿ ಇದು. ಅನ್ವರ್ ಸಾದತ್ ಇಂಥದ್ದೊಂದು ನಿರ್ಣಯವನ್ನು ಕೈಗೊಳ್ಳಲೇಬೇಕಾದ ಸ್ಥಿತಿಗೆ ಯಾಕೆ ಬಂದರು ಎಂಬುದರ ಕುರಿತು ಅನೇಕ ವಿಶ್ಲೇಷಣೆಗಳಿವೆ. ಅದೇನೇ ಇದ್ದರೂ ಆ ನಿರ್ಧಾರ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸಿದ್ದಂತೂ ನಿಜ.

ಅನ್ವರ್ ಸಾದತ್ ಹತ್ಯೆಯಾದ ಎಂಟನೇ ದಿನಕ್ಕೆ ಅಧ್ಯಕ್ಷ ಪದವಿಗೇರಿದ್ದು ಹೋಸ್ನಿ ಮುಬಾರಕ್. 1928ರಲ್ಲಿ ಕೈರೋ ಸಮೀಪದ ಮೆನ್ಫೋಯಾ ಪ್ರಾಂತ್ಯದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ್ದ ಮುಬಾರಕ್ ಬಾಲ್ಯದಲ್ಲೇ ಸೇನಾ ಸೇವೆಯತ್ತ ಆಕರ್ಷಿತರಾದವರು. ಏರ್‌ಫೋರ್ಸ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆದು 1966ರಿಂದ ಮೂರು ವರ್ಷಗಳ ಕಾಲ ವಾಯು ಸೇನೆಯಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ಅಂದಿನ ಅಧ್ಯಕ್ಷ ಅನ್ವರ್ ಸಾದತ್, ಹೋಸ್ನಿ ಮುಬಾರಕ್‌ರನ್ನು ವಾಯುಸೇನೆಯ ಕಮಾಂಡರ್ ಆಗಿ ನೇಮಿಸಿದರು. 1975ರ ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಈಜಿಪ್ಟ್‌ನ ವಾಯುಸೇನೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಕ್ಕಾಗಿ ಮುಬಾರಕ್‌ಗೆ ಅಧ್ಯಕ್ಷೀಯ ಶ್ಲಾಘನೆಯೂ ದೊರೆಯಿತು.

ಅನ್ವರ್ ಸಾದತ್‌ಗೆ ಹೋಸ್ನಿ ಮುಬಾರಕ್ ಮೇಲಿದ್ದ ನಂಬಿಕೆ 1975ರಲ್ಲಿ ಅವರನ್ನು ಉಪಾಧ್ಯಕ್ಷ ಪದವಿಗೇರಿಸುವ ಮೂಲಕ ಪ್ರತಿಫಲಿಸಿತು. ಹೋಸ್ನಿ ಮುಬಾರಕ್ ಮುಖ್ಯವಾಹಿನಿಯ ರಾಜಕಾರಣ ರುಚಿ ಕಂಡಿದ್ದೂ ಈ ದಿನಗಳಲ್ಲಿಯೇ. ಹೋಸ್ನಿ ಮುಬಾರಕ್ ಬದುಕೇ ಸೇನೆಯ ಶಿಸ್ತಿನಂಥದ್ದು. ತನ್ನ ಎಂಬತ್ತನೇ ವಯಸ್ಸಿನಲ್ಲೂ ನಸುಕಿನ ವ್ಯಾಯಾಮದ ಜೊತೆ ದಿನ ಆರಂಭಿಸುವ ಹೋಸ್ನಿ  ತಂಬಾಕು ಮತ್ತು ಮದ್ಯಗಳೆರಡರಿಂದಲೂ ಬಹಳ ದೂರವಿರುವ ವ್ಯಕ್ತಿ. ತನ್ನ ಆರೋಗ್ಯವನ್ನೇ ಒಂದು ಬ್ರಾಂಡ್‌ನಂತೆ ಜನರ ಮುಂದೆ ಪ್ರದರ್ಶಿಸಿಕೊಂಡ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’ಯೂ ಮುಬಾರಕ್‌ಗೆ ಇದೆ.

ಸಾದತ್ ಹತ್ಯೆಯ ಹಿಂದೆಯೇ ಅಧಿಕಾರ ವಹಿಸಿಕೊಂಡ ಹೋಸ್ನಿ ಮುಬಾರಕ್ ಎದುರು ಇದ್ದ ಸವಾಲುಗಳು ಹಲವು. ಸಾದತ್‌ರ ಒಂದು ನಿರ್ಧಾರ ದೂರ ಮಾಡಿದ್ದ ಎಲ್ಲಾ ಮಿತ್ರರನ್ನು ಮತ್ತೆ ಪಡೆದುಕೊಳ್ಳುವುದು ಇದರಲ್ಲಿ ಬಹಳ ಮುಖ್ಯವಾದುದು. ಇದರ ಜೊತೆಗೆ ದೇಶದಲ್ಲಿ ಹೆಚ್ಚುತ್ತಿದ್ದ ಮೂಲಭೂತವಾದವನ್ನು ನಿಯಂತ್ರಿಸುವ ಸವಾಲೂ ಇತ್ತು.

ಇದೆರಡನ್ನೂ ಒಂದು ಹಂತದ ತನಕ ಎಲ್ಲರೂ ಮೆಚ್ಚುವಂತೆಯೇ ಮಾಡಿದ ಹೋಸ್ನಿ ಮುಬಾರಕ್ ನಿಧಾನವಾಗಿ ತನ್ನೊಳಗಿದ್ದ ಸರ್ವಾಧಿಕಾರಿ ಮನೋಭಾವವನ್ನು ಬಯಲು ಮಾಡಲು ಆರಂಭಿಸಿದರು. ಮೊದಲಿಗೆ ಮೂಲಭೂತವಾದವನ್ನು ಹಿಮ್ಮೆಟ್ಟಿಸಲು ಕಠಿಣ ನಿರ್ಧಾರಗಳು ಅಗತ್ಯ ಎಂದರು. ದೇಶದಲ್ಲಿ ದಶಕಗಳ ಕಾಲ ತುರ್ತು ಪರಿಸ್ಥಿತಿಯನ್ನೇ ಮುಂದುವರಿಸಿ ಎಲ್ಲಾ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಿತ್ತುಕೊಂಡರು. ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದಾದಾಗ ಚುನಾವಣಾ ‘ಮೋಸ’ಗಳಲ್ಲಿ ತೊಡಗಿಕೊಂಡರು. ಮೂರು ಬಾರಿ ಜನಮತ ಗಣನೆ ಎಂಬ ನಾಟಕದ ಮೂಲಕ ಅಧ್ಯಕ್ಷ ಪದವಿ ಉಳಿಸಿಕೊಂಡರೆ ಒಮ್ಮೆ ಬಹು ಅಭ್ಯರ್ಥಿಗಳ ಚುನಾವಣೆ ನಡೆಸಿಯೂ ವಿರೋಧಿಗಳು ಗೆಲ್ಲದಂತೆ ನೋಡಿಕೊಂಡರು.

ಒಂದು ಹಂತದವರೆಗೂ ಈ ಎಲ್ಲವನ್ನೂ ಬೆಂಬಲಿಸುತ್ತಾ ಬಂದಿದ್ದ ಅಮೆರಿಕ ಇತ್ತೀಚೆಗೆ ‘ಪ್ರಜಾಪ್ರಭುತ್ವವಾದಿ ಸುಧಾರಣೆ’ಗಳಿಗೆ ಒತ್ತಾಯಿಸತೊಡಗಿತ್ತು. ಇದರ ಜೊತೆಗೆ ಮೂವತ್ತು ವರ್ಷಗಳ ದುರಾಡಳಿತದಿಂದ ಜನರೂ ಬೇಸತ್ತಿದ್ದರು. ಹೋಸ್ನಿ ಮುಬಾರಕ್ ಎದುರು ಈಗ ಯಾವ ತಂತ್ರಗಳೂ ಉಳಿದಿಲ್ಲ. ಹಸಿವು ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ದೇಶವೊಂದರ ನಾಗರಿಕರು ಅಧ್ಯಕ್ಷನ ಶಿಸ್ತಿನ ಬದುಕನ್ನು ಆರಾಧಿಸುವುದಿಲ್ಲ ಎಂಬ ಸತ್ಯ ಹೋಸ್ನಿ ಮುಬಾರಕ್‌ಗೆ ಇನ್ನೂ ಅರ್ಥವಾಗುತ್ತಿಲ್ಲ.

ಅಧ್ಯಕ್ಷ ಪದವಿಯಿಂದ ಇಳಿಯುವುದಕ್ಕೆ ಇನ್ನೂ ವಿರೋಧ ತೋರುತ್ತಿರುವ ಹೋಸ್ನಿ ಮುಬಾರಕ್ ಈ ತನಕ ಅಕ್ರಮವಾಗಿ ಸಂಪಾದಿಸಿಟ್ಟಿರುವ ಸಂಪತ್ತನ್ನು ದೇಶದ ಹೊರಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಮುಬಾರಕ್ ಆಸ್ತಿ 70 ಶತಕೋಟಿ ಡಾಲರ್ ಮೀರುತ್ತದೆ ಎಂಬುದು ಒಂದು ಅಂದಾಜು. ಮೂವತ್ತು ವರ್ಷಗಳ ನಿರಂಕುಶಾಧಿಕಾರವನ್ನು ಈಗ ಬಿಟ್ಟುಕೊಟ್ಟರೆ ಅದರ ಪರಿಣಾಮ ಏನೆಂಬುದು ಗುಪ್ತಚರರ ಮೂಲಕವೇ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಮಣಿಸಿದ ಹೋಸ್ನಿ ಮುಬಾರಕ್‌ಗೆ ಗೊತ್ತಿಲ್ಲದೇ ಇರುವುದೇನೂ ಅಲ್ಲ.

ವಿದೇಶಾಂಗ ವ್ಯವಹಾರಗಳ ಮಟ್ಟಿಗೆ ಹೋಸ್ನಿ ಮುಬಾರಕ್ ಜಾಣ. ಅಮೆರಿಕದ ಅಗತ್ಯಗಳಿಗೆ ತಕ್ಕಂತೆ ಅರಬ್ ಜಗತ್ತಿನ ಅಭಿಪ್ರಾಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಪಾಶ್ಚಾತ್ಯ ಮಾಧ್ಯಮಗಳಿಗೆ ಈಜಿಪ್ಟ್‌ನಲ್ಲಿರುವುದು ತೋರಿಕೆಯ ಪ್ರಜಾಪ್ರಭುತ್ವ ಎಂದು ಯಾವತ್ತೂ ಅನ್ನಿಸುತ್ತಿರಲಿಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೇವಲ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಂಥ ಸಾಮಾಜಿಕ ಮಾಧ್ಯಮಗಳ ಸಾಧನೆ ಎಂದು ಬಿಂಬಿಸುವಾಗಲೂ ಈತನಕ ಎಲ್ಲವೂ ಸರಿಯಾಗಿತ್ತು ಎಂಬ ಧೋರಣೆಯೇ ಕಾಣಿಸುತ್ತದೆ. ಹೊರ ಜಗತ್ತಿನಲ್ಲಿ ‘ಒಳ್ಳೆಯವನು’ ಎಂಬ ಒಮ್ಮತವನ್ನು ಮೂಡಿಸುವುದಕ್ಕಾಗಿ ಹೋಸ್ನಿ ಅನುಸರಿಸಿದ ತಂತ್ರಗಳು ಹಲವು.

ಮೊನ್ನೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿಯೂ ಇಂಥದ್ದೇ ಒಂದು ತಂತ್ರ ಬಳಕೆಯಾಯಿತು. ಲಕ್ಷಾಂತರ ಜನರು ಕೈರೋದಲ್ಲಿ ಗುಂಪುಗೂಡುತ್ತಿದ್ದಾಗಲೇ ಹೋಸ್ನಿ ಮುಬಾರಕ್ ಬೆಂಬಲಿಗರ ಬಳಗವೊಂದು ಅವರತ್ತ ಕಲ್ಲು ತೂರಿತು, ಗ್ರೆನೇಡ್‌ಗಳನ್ನು ಎಸೆಯಿತು. ಪ್ರಜಾಸತ್ತಾತ್ಮಕವಾದ ಹೋರಾಟಗಳನ್ನೆಲ್ಲಾ ಹೋಸ್ನಿ ಮುಬಾರಕ್ ವಿಫಲಗೊಳಿಸಿದ್ದೇ ಹೀಗೆ. ಈ ಬಾರಿ ಅದು ಯಶಸ್ಸು ಕಾಣಲಿಲ್ಲ. ತುರ್ತುಪರಿಸ್ಥಿತಿಯನ್ನು ನಿರಂತರವಾಗಿ ಮುಂದುವರಿಸಲು ಹೋಸ್ನಿ ಮುಬಾರಕ್ ನೀಡಿದ ಕಾರಣವೂ ಇಂಥದ್ದೇ. ಈಜಿಪ್ಟ್‌ನ ಆದಾಯದ ಗಮನಾರ್ಹ ಪ್ರಮಾಣ ಹರಿದು ಬರುವುದು ಪ್ರವಾಸೋದ್ಯಮದಿಂದ. ಬಂಡುಕೋರರು ಹತಾಶೆಯಿಂದ ಪ್ರವಾಸಿಗಳ ಮೇಲೆ ನಡೆಸಿದ ದಾಳಿಯನ್ನೇ ನೆಪವಾಗಿಟ್ಟುಕೊಂಡು ದೇಶದ ಆರ್ಥಿಕ ಸುಸ್ಥಿತಿಗೆ ತುರ್ತುಪರಿಸ್ಥಿತಿ ಅಗತ್ಯ ಎಂಬ ವಾದವನ್ನು ಸರ್ಕಾರಿ ಮತ್ತು ಸರ್ಕಾರವನ್ನು ಒಪ್ಪುವ ಮಾಧ್ಯಮಗಳ ಮೂಲಕ ನಿರಂತರವಾಗಿ ಪ್ರಚಾರ ಮಾಡಲಾಯಿತು. ದುರದೃಷ್ಟವೆಂದರೆ ತಥಾಕಥಿತ ‘ಜಾಗತಿಕ ಮಾಧ್ಯಮ’ಗಳೂ ಹಲವು ವರ್ಷಗಳ ಕಾಲ ಇದನ್ನೇ ಜಗತ್ತಿಗೆ ಉಣಬಡಿಸಿದವು.

ಈ ಬಾರಿಯ ಪ್ರತಿಭಟನೆಗೆ ಮೂಲಭೂತವಾದದ ಹಣೆ ಪಟ್ಟಿ ಹಚ್ಚಲು ಮುಬಾರಕ್‌ಗೆ ಸಾಧ್ಯವಾಗುತ್ತಿಲ್ಲ. ತಮ್ಮ ಇತ್ತೀಚಿನ ಟಿ.ವಿ. ಭಾಷಣದಲ್ಲಿ ಇದನ್ನೇ ಹೇಳಲು ಪ್ರಯತ್ನಿಸಿದರೂ ಅಮೆರಿಕ ಕೂಡಾ ಈಗ ಇದನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಈಗ ಉಳಿದಿರುವುದು ಅಧಿಕಾರವನ್ನು ತ್ಯಜಿಸುವುದು ಮಾತ್ರ. ಆದರೆ ಅದನ್ನೊಪ್ಪಿಕೊಳ್ಳಲು ಹೋಸ್ನಿ ಮುಬಾರಕ್ ಮಾತ್ರ ತಯಾರಿಲ್ಲ. ಎಲ್ಲ ನಿರಂಕುಶಾಧಿಕಾರಿಗಳಂತೆ ತಾನು ಮಾಡುತ್ತಿರುವುದು ದೇಶದ ಒಳಿತಿಗಾಗಿ ಎಂದೇ ಹೇಳುತ್ತಿದ್ದಾರೆ. ಹೀಗೆ ಹೇಳಿದ ಎಲ್ಲ ಸರ್ವಾಧಿಕಾರಿಗಳನ್ನೂ ಇತಿಹಾಸ ಕಸದ ಬುಟ್ಟಿಗೆ ಎಸೆದಿದೆ. ಹೋಸ್ನಿ ಮುಬಾರಕ್‌ಗೆ ಆ ಕಸದ ಬುಟ್ಟಿಯಲ್ಲಿ ಒಂದು ಸ್ಥಾನ ಈಗಾಗಲೇ ಮೀಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT