ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ನಿರೀಕ್ಷೆಯಲ್ಲಿ `ಚಿಕ್ಕೇರಹಳ್ಳಿ' ಗ್ರಾಮ

ಗ್ರಾಮಾಂತರಂಗ
Last Updated 18 ಜುಲೈ 2013, 8:38 IST
ಅಕ್ಷರ ಗಾತ್ರ

ಮೊಳಕಾಲ್ಮುರು ತಾಲ್ಲೂಕಿನ ಹಳೆಯ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮಗಳಲ್ಲಿ ಚಿಕ್ಕೇರಹಳ್ಳಿ ಗ್ರಾಮ ಪ್ರಥಮ ಸಾಲಿನಲ್ಲಿದೆ.

ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿ ಬರುವ ಅಮಕುಂದಿ ಸಮೀಪದ ಕ್ರಾಸ್‌ನಿಂದ ಎರಡು ಕಿ.ಮೀ. ಒಳಗಡೆ ಸಾಗಿದರೆ ಚಿಕ್ಕೇರಹಳ್ಳಿ ಸಿಗುತ್ತದೆ. ಭೋವಿ, ಬ್ರಾಹ್ಮಣ, ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ಕಮ್ಮಾರ, ಕುಂಬಾರ, ಶೆಟ್ಟರು ಸೇರಿದಂತೆ ಹಲವು ಸಮುದಾಯಗಳಿಗೆ ಸೇರಿದ ಜನರು ಇಲ್ಲಿ ಅನ್ಯೋನ್ಯವಾಗಿ ವಾಸವಿದ್ದಾರೆ. 500 ಮನೆಗಳನ್ನು ಹೊಂದಿರುವ ಈ ಗ್ರಾಮ ಅಂದಾಜು 2,500 ಜನಸಂಖ್ಯೆ ಹೊಂದಿದೆ.

ಗ್ರಾಮಪಂಚಾಯ್ತಿ ಕೇಂದ್ರ ಸ್ಥಳವಾಗಿರುವ ಚಿಕ್ಕೇರಹಳ್ಳಿಯು ಹಿರೇಕೆರೆಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಹಾಗೂ ಹಾನಗಲ್ ಜಿಲ್ಲಾಪಂಚಾಯಿತಿ ಕ್ಷೇತ್ರಕ್ಕೆ ಒಳಪಡುತ್ತದೆ. ವ್ಯವಸಾಯ, ಕೂಲಿ ಕೆಲಸ, ಗಾರೆ, ಕಲ್ಲು ಒಡೆಯುವ ವೃತ್ತಿ ಇಲ್ಲಿನ ಪ್ರಮುಖ ಕಸುಬಾಗಿವೆ.

ಹೊಟ್ಟೆಪಾಡಿಗಾಗಿ ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆ ಇಲ್ಲಿಯ ಅನೇಕರು ಗುಳೆ ಹೋಗಿದ್ದಾರೆ. ಹಬ್ಬಗಳಿಗೆ ಮಾತ್ರ ಅವರು ಇತ್ತ ಮುಖ ಮಾಡುತ್ತಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಜಗದೀಶ್ ಹೇಳುತ್ತಾರೆ.

ಗ್ರಾಮಕ್ಕೆ ಅಂಟಿಕೊಂಡು ಚಿಕ್ಕ ಕೆರೆ ಇರುವ ಕಾರಣ `ಚಿಕ್ಕಕೆರೆಹಳ್ಳಿ' ಎಂಬ ಹೆಸರು ಬಂದಿದ್ದು, ನಂತರ ಇದು ಚಿಕ್ಕೇರಹಳ್ಳಿಯಾಗಿದೆ. ಗ್ರಾಮದಲ್ಲಿ ಪುರಾತನ ಕಾಲದ ರಾಮ ದೇವಸ್ಥಾನ, ಗ್ರಾಮದೇವತೆ ಮಾರಮ್ಮದೇವಿ ದೇವಸ್ಥಾನ, ಕೋಟೆ ಗುಡ್ಡದ ಮಾರಮ್ಮ ದೇವಸ್ಥಾನ, ಬಸವಣ್ಣ, ವೆಂಕಟೇಶ್ವರ, ಈಶ್ವರಸ್ವಾಮಿ, ದುರುಗಮ್ಮ ದೇವಸ್ಥಾನ, ಕೊಲ್ಲಾರಮ್ಮ ದೇವಸ್ಥಾನಗಳಿವೆ. ಈ ಪೈಕಿ ಪ್ರತಿ ಶ್ರೀರಾಮ ನವಮಿಯಂದು ಶ್ರೀರಾಮ ರಥೋತ್ಸವ ವೈಭವವಾಗಿ ಆಚರಿಸಲಾಗುತ್ತದೆ. ಕೋಟೆ ಗುಡ್ಡದ ಮಾರಮ್ಮ ಸಿಡಿ ಮಹೋತ್ಸವ ಸಹ ಪ್ರಸಿದ್ಧಿಯಾಗಿದೆ ಎಂದು ಅವರು ಹೇಳುತ್ತಾರೆ.

15ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆ ಅವಧಿಯಲ್ಲಿ ವ್ಯಾಸರಾಯರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ನಿರ್ವಹಣೆಗಾಗಿ ಶಾಲಿವಾಹನ ಶಕ 1714ರಲ್ಲಿ ಜೋಡಿದಾರರಿಗೆ ಗುಡೇಕೋಟೆಯ ಇಂಬುಡಿ ಗಡಿಯಾಂಕ ಭೀಮ ಬೊಮ್ಮಂತ ರಾಜಯ್ಯ ಆಳ್ವಿಕೆ ಅವಧಿಯಲ್ಲಿ ಚಿಕ್ಕೇರಹಳ್ಳಿ ಮತ್ತು ಹಿರೇಕೆರೆಹಳ್ಳಿ ಗ್ರಾಮಗಳನ್ನು ಉಂಬಳವಾಗಿ ಮಾದ್ವ ಕೃಷ್ಣದಾಸ್ ಅವರಿಗೆ ನೀಡಲಾಯಿತು.

ಮೈಸೂರು ಅರಸರು ಕಾಣಿಕೆಯಾಗಿ ನೀಡಿದ ರಾಮ, ಸೀತೆ, ಆಂಜನೇಯ ವಿಗ್ರಹಗಳನ್ನು ಇಲ್ಲಿಗೆ ತಂದು ಪ್ರತಿಷ್ಠಾಪನೆ ಮಾಡಿದ ನಂತರ ಈ ದೇವಸ್ಥಾನ ಶ್ರೀರಾಮ ದೇವಸ್ಥಾನವಾಗಿ ಹೆಸರು ಪಡೆಯಿತು. ಆಗಿನ ಕಾಲದಲ್ಲಿಯೇ ಇದು ಕಂದಾಯ ಗ್ರಾಮವಾಗಿತ್ತು ಎಂದು ಸಾಹಿತಿ ಮರಿಕುಂಟೆ ತಿಪ್ಪೇಸ್ವಾಮಿ ಮಾಹಿತಿ ನೀಡುತ್ತಾರೆ.

ಗ್ರಾಮಕ್ಕೆ ಅಂಟಿಕೊಂಡಿರುವ 500ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಮುಖ್ಯವಾಗಿ ರಂಗಯ್ಯನದುರ್ಗ ಜಲಾಶಯ ವ್ಯಾಪ್ತಿಯ ಜಿನಗಿಹಳ್ಳದ ನೀರು ನಂಬಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಹಳ್ಳದಲ್ಲಿ ಸಮರ್ಪಕ ನೀರು ಹರಿಯದ ಕಾರಣ ಬೆಳೆ ಕೈಗೆಟಕುತ್ತಿಲ್ಲ. ಹಿರೆಕೆರೆಹಳ್ಳಿ, ಅಮಕುಂದಿ ಕೆರೆಗಳ ಹೂಳು ಎತ್ತುವುದು, ಕಾಲುವೆ ದುರಸ್ತಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮುಖ್ಯವಾಗಿ ಆಗಬೇಕಿದೆ.

ಗ್ರಾಮಪಂಚಾಯಿತಿ ಕಚೇರಿ, ಖಾಸಗಿ ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಪಶು ಆಸ್ಪತ್ರೆ, ಪಾಥಮಿಕ ಆರೋಗ್ಯಕೇಂದ್ರ, ಸಾರಿಗೆ ವ್ಯವಸ್ಥೆ ಆಗಬೇಕಿದೆ. ಚರಂಡಿ ವ್ಯವಸ್ಥೆ ಸರಿಯಾಗಿ ಆಗಬೇಕು, ಇರುವ ಚರಂಡಿಗಳ ನಿರ್ವಹಣೆ ಆಗಬೇಕು, ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಗ್ರಾಮದಲ್ಲಿ ವೃತ್ತಿ ಮಾಡುತ್ತಿರುವ ಎಲ್ಲಾ ಜನಾಂಗಗಳಿಗೂ ಬ್ರಾಹ್ಮಣ ಸಮುದಾಯದವರು ಜಮೀನು ದಾನ ಮಾಡಿದ್ದಾರೆ. ಶವಸಂಸ್ಕಾರಕ್ಕಾಗಿ 24 ಎಕರೆ ಜಮೀನು ಸಹ ನೀಡಿದ್ದಾರೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಾರೆ. ಇದೇ ಗ್ರಾಮದ ಪೊಲೀಸ್ ಅಧಿಕಾರಿ ವಿ.ತಿಮ್ಮಪ್ಪ ರಾಷ್ಟ್ರಪತಿ ಪದಕ ಗಳಿಸಿದ್ದಾರೆ. ವೈದ್ಯ ಗುರುರಾಜ್ ದಾಸ್, ಲೆಕ್ಕತಜ್ಞ ರಾಮಚಂದ್ರ ದಾಸ್, ಎಂಜಿನಿಯರ್ ನಾರಾಯಣ ಶೆಟ್ಟಿ, ಉದ್ಯಮಿ ನರಹರಿ ಶೆಟ್ಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ವಿವಿಧೆಡೆ ರಸ್ತೆಗಳು ಒತ್ತುವರಿಯಾಗಿವೆ. ಅಂತಹ ಕಡೆ ಚರಂಡಿ ನಿರ್ಮಾಣ ಮಾಡದ ಪರಿಣಾಮ ತ್ಯಾಜ್ಯ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈ ಬಗ್ಗೆ ಗ್ರಾ.ಪಂ. ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT