ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನವೀಯ ಧೋರಣೆ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬಡರೋಗಿಗಳ ಚಿಕಿತ್ಸೆಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಕೊಟ್ಟ ಕೋಟಿಗಟ್ಟಲೆ ಹಣ ಬಳಕೆಯೇ ಆಗದೆ ಆಸ್ಪತ್ರೆಗಳಲ್ಲಿಯೇ ಉಳಿದಿರುವ ವಿದ್ಯಮಾನ ಆಸ್ಪತ್ರೆಗಳ ಆಡಳಿತ ವ್ಯವಸ್ಥೆಯಲ್ಲಿನ ಬೇಜವಾಬ್ದಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಬಡವರ ಜೀವದ ಬಗ್ಗೆ ವೈದ್ಯಕೀಯ ಜಗತ್ತಿನ ನಿಸ್ಸೀಮ ನಿರ್ಲಕ್ಷ್ಯಕ್ಕೂ ಈ ಪ್ರಕರಣಗಳು ನಿದರ್ಶನ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದ ಹಣ ಚಿಕಿತ್ಸೆಗೆ ವೆಚ್ಚವಾಗುವುದರಿಂದ ಸ್ವಂತಕ್ಕೆ ಬರುವ ಲಾಭವೇನು ಎಂಬ ಸ್ವಾರ್ಥಚಿಂತನೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಇದ್ದಿರಬೇಕೆಂಬ ಗುಮಾನಿಗೆ ಆಸ್ಪದವಾಗಿದೆ.
 
ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ, ಅತ್ಯಾಧುನಿಕ ಸೌಲಭ್ಯ ಇರುವ ಖಾಸಗಿ ಆಸ್ಪತ್ರೆಗಳು ಕೂಡ ಬಡ ರೋಗಿಗಳ ಚಿಕಿತ್ಸೆಯ ವಿಚಾರದಲ್ಲಿ ಇಷ್ಟರಮಟ್ಟಿನ ನಿರ್ಲಕ್ಷ್ಯ ಪ್ರದರ್ಶಿಸಿರುವುದು ವೈದ್ಯರ ಸೇವಾ ಮನೋಭಾವವನ್ನೇ ಶಂಕಿಸುವಂತೆ ಮಾಡಿದೆ.
 
ಬಡರೋಗಿಗಳ ಚಿಕಿತ್ಸೆಗಾಗಿ ನೀಡಿದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಬಂಧಿಸಿ ಕಳೆದ ಹತ್ತು ವರ್ಷಗಳಿಂದಲೂ ಆಸ್ಪತ್ರೆಗಳು ಪ್ರದರ್ಶಿಸುತ್ತ ಬಂದ ನಿರ್ಲಕ್ಷ್ಯ ಧೋರಣೆ ಈಗ ಬಯಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯೇ ತನಿಖೆಗೆ ಕ್ರಮ ಕೈಗೊಂಡಿರುವುದು ಯೋಗ್ಯವಾದ ನಿರ್ಧಾರ.
 
ರಾಜ್ಯದ ಮುಖ್ಯಮಂತ್ರಿ ಕಚೇರಿಯ ಆದೇಶಗಳ ಬಗ್ಗೆಯೇ ವ್ಯಕ್ತವಾದ ಉದಾಸೀನತೆ ರಾಜ್ಯದ ವೈದ್ಯಕೀಯ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟ ಅಮಾನವೀಯ ಧೋರಣೆಯ ಪ್ರತೀಕವೂ ಆಗಿದೆ.

ಹಾಗೆ ನೋಡಿದರೆ, ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಸರ್ಕಾರ ವೆಚ್ಚ ಮಾಡುತ್ತಿರುವ ಹಣದ ಪ್ರಮಾಣವನ್ನು ಗಮನಿಸಿದರೆ ಎಲ್ಲರಿಗೂ ಆರೋಗ್ಯ ಸೌಲಭ್ಯಗಳು ಸುಲಭವಾಗಿ ಸಿಗಬೇಕು. ಆರೋಗ್ಯ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ಮಾತ್ರವಲ್ಲದೆ ವಿಶ್ವಬ್ಯಾಂಕ್‌ನಿಂದಲೂ ಹಣ ಪಡೆದು ರಾಜ್ಯದಲ್ಲಿನ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
 
ವೈದ್ಯರು, ತಜ್ಞ ವೈದ್ಯರು ಮಾತ್ರವಲ್ಲದೆ ಪೂರಕ ತಾಂತ್ರಿಕ ಸಿಬ್ಬಂದಿಗಳಿಗೂ ಕೊರತೆ ಇಲ್ಲ. ವಿವಿಧ ವೈದ್ಯ ಪದ್ಧತಿಗಳಲ್ಲಿ ಜನತೆ ನಂಬಿಕೆ ಇಟ್ಟಿರುವುದರಿಂದ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ಧ ಮೊದಲಾದ ಹಲವು ವೈದ್ಯ ಪದ್ಧತಿಗಳ ಚಿಕಿತ್ಸೆ ಸೌಲಭ್ಯಗಳೂ ಇವೆ.
 
ಆದರೆ ಸರ್ಕಾರದ ಇತರ ಇಲಾಖೆಗಳಲ್ಲಿ ವ್ಯಾಪಿಸಿಕೊಂಡಿರುವ ಭ್ರಷ್ಟಾಚಾರದ ಪಿಡುಗು ಆರೋಗ್ಯ ಇಲಾಖೆಯಲ್ಲೂ ವ್ಯಾಪಕವಾಗಿ ಬೇರುಬಿಟ್ಟಿರುವ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಹಣ ನೀಡದೆ ಒಳ್ಳೆಯ ಚಿಕಿತ್ಸೆಯನ್ನು ಪಡೆಯುವುದು ಸುಲಭವಲ್ಲ. ಸರ್ಕಾರಿ ಆಸ್ಪತ್ರೆ ಇರಲಿ, ಖಾಸಗಿ ನರ್ಸಿಂಗ್ ಹೋಮ್‌ಗಳಿರಲಿ, ಸ್ವಂತಕ್ಕೆ ಹಣ ಮಾಡಿಕೊಳ್ಳುವ ಧೋರಣೆಯೇ ವ್ಯಾಪಿಸಿದೆ.

ಬಡರೋಗಿಗಳ ಚಿಕಿತ್ಸೆಗೆ ಹಣವನ್ನು ವ್ಯವಸ್ಥೆ ಮಾಡಿದ್ದರೂ ಅದನ್ನು ಬಳಸಿಕೊಂಡು ರೋಗಿಗಳಿಗೆ ಉಪಚರಿಸದೆ ಇರುವುದಕ್ಕೆ, ಅದರಿಂದ ಸ್ವಂತಕ್ಕೆ ಯಾವ ಲಾಭವೂ ಇಲ್ಲವೆಂಬ ನೀಚಭಾವನೆಯೇ ಕಾರಣವೆಂಬುದು ಸ್ಪಷ್ಟ.
 
ಈ ಪ್ರವೃತ್ತಿ ಅಮಾನವೀಯ. ಇದಕ್ಕೆ ಕಾರಣರಾದ ಖಾಸಗಿ ಸಂಸ್ಥೆ, ವ್ಯಕ್ತಿಗಳು ಸೇವಾಧ್ಯೇಯದ ವೈದ್ಯವೃತ್ತಿಗೆ ಅಪಚಾರ ಎಸಗಿದಂತೆ. ಇದು ಮಾನವೀಯತೆಗೂ  ಎಸಗಿದ ದ್ರೋಹ. ಈ ಕುರಿತಾಗಿ ತನಿಖೆಗೆ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಕಚೇರಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದೇ ಇಂಥ ದ್ರೋಹಕ್ಕೆ ಪ್ರಾಯಶ್ಚಿತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT