ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾಯಕರಿಗೆ ಪೊಲೀಸರ ಬೆದರಿಕೆ ಕರೆ

Last Updated 20 ಆಗಸ್ಟ್ 2012, 4:50 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ಪಟ್ಟಣ ಠಾಣೆಯ ಮೂವರು ಪೋಲೀಸ್ ಪೇದೆಗಳು ಅಮಾಯಕ ಯುವಕರಿಗೆ ಪದೇ ಪದೇ ದೂರವಾಣಿ ಕರೆ ಮಾಡಿ ಕೊಲೆ ಯತ್ನ ಮತ್ತು ದರೋಡೆ ಇತರೆ ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್ ಆರೋಪಿಸಿದರು.

ಪೊಲೀಸ್ ಕಿರುಕುಳಕ್ಕೆ ಒಳಗಾಗಿರುವ ಪೋಷಕರ ಜೊತೆ ಸಭೆ ನಡೆಸಿದ ನಂತರ ಅವರು ಭಾನುವಾರ ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ವಿವರ ನೀಡಿದರು.

ಪಟ್ಟಣದ ಪೋಲೀಸ್ ಪೇದೆಗಳಾದ ಸುರೇಶ್, ನರಸಿಂಹಮೂರ್ತಿ ಮತ್ತು ರಾಜೇಶ್ ವಿನಾಕಾರಣ ಅನೇಕ ಯುವಕರಿಗೆ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಪೊಲೀಸರಿಂದ ಇಂತಹ ಕರೆಗಳನ್ನು ಸ್ವೀಕರಿಸಿದ ಸುಮಾರು 20 ಯುವಕರು 8 ದಿನಗಳಿಂದ ಮನೆಗಳಿಗೆ ಹಿಂತಿರುಗಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪೋಷಕರೊಂದಿಗೆ ಚರ್ಚಿಸಿ ಸಮಗ್ರ ತನಿಖೆ ನಡೆಸಿ ಆರೋಪಿ ಪೊಲೀಸರನ್ನು ಸೇವೆಯಿಂದ ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಜಿ.ಎನ್.ವೇಣುಗೋಪಾಲ್ ಮಾತನಾಡಿ, `ಒಂದು ವೇಳೆ ಭೀತಿಗೆ ಒಳಗಾಗಿರುವ ಯುವಕರು ಏನಾದರೂ ಆತ್ಮಹತ್ಯೆ ಮಾಡಿಕೊಂಡಲ್ಲಿ ಇದಕ್ಕೆ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

`ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಪೋಲೀಸರಿಂದಲೇ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಅತ್ಯಂತ ಆಘಾತಕಾರಿ ಸಂಗತಿ. ಇಲಾಖೆಯಲ್ಲಿ ನಿಷ್ಠ ಅಧಿಕಾರಿಗಳಿದ್ದರೂ ಇಂತಹ ಭ್ರಷ್ಟ ಪೇದೆಗಳಿಂದ ಪೊಲೀಸರ ಮೇಲಿನ ಗೌರವ ಮಣ್ಣು ಪಾಲಾಗುತ್ತಿದೆ. ಇದನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ನಟಕೇರಪ್ಪ ಮಾತನಾಡಿ, `ನನ್ನ ಮಗ ಚಂದ್ರಶೇಖರ್ ವಿರುದ್ಧ ಪೊಲೀಸರು ವಿನಾಕಾರಣ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಪೇದೆ ಸುರೇಶ್ ಮೂರು ಬಾರಿ ನನ್ನ ಮನೆ ಬಳಿಗೆ ಬಂದು ಐದು ಲಕ್ಷ ರೂಪಾಯಿ ಕೊಡುವಂತೆ ಪೀಡಿಸಿದರು. ಏತಕ್ಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದೆ. ಅಲ್ಲದೇ ಹಣ ಕೊಡಲು ನಿರಾಕರಿಸಿದೆ. ಇದಕ್ಕೆ ಸುರೇಶ್ ಹಣ ಕೊಡದಿದ್ದಲ್ಲಿ ನಿನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿ ಈಗ ಅದೇ ರೀತಿ ಮಾಡಿದ್ದಾರೆ~ ಎಂದು ನೋವು ತೋಡಿಕೊಂಡರು.

ನಟಕೇರಪ್ಪ ಸಂಬಂಧಿಕ ಗುರುಲಿಂಗಪ್ಪ ಮಾತನಾಡಿ, `ಯಾರದೋ ಮನೆಯ ಮುಂದೆ ನಿಂತ ಮಾತ್ರಕ್ಕೆ ದರೋಡೆಗೆ ಯತ್ನಿಸಿದ್ದರು ಎಂಬ ಅನುಮಾನ ಏಕೆ? ಯಾರಾದರೂ ದೂರು ಕೊಟ್ಟಿದ್ದರೆ ಆರೋಪಿಗಳನ್ನು ಅವರ ಪೋಷಕರನ್ನು ಠಾಣೆಗೆ ಕರೆಯಿಸಿ ಚರ್ಚಿಸಬೇಕು. ಯಾವುದೇ ವಿಚಾರಣೆ ನಡೆಸದೆ ದೂರವಾಣಿ ಕರೆ ಮಾಡಿ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ವಿವಿಧ ಪ್ರಕರಣದಲ್ಲಿ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುವುದು ಎಷ್ಟು ಮಾತ್ರಕ್ಕೆ ಸರಿ~ ಎಂದು ಪ್ರಶ್ನಿಸಿದರು.

ಟೌನ್ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಎನ್.ರಘು ಮಾತನಾಡಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ದೇವನಹಳ್ಳಿ ಸಮೀಪದ ಜಮೀನಿಗೆ ಚಿನ್ನದ ಬೆಲೆ ಇದೆ. ಇದೇ ಕಾರಣಕ್ಕಾಗಿ ಪೋಲಿಸರು ಇಲ್ಲಿನ ಸ್ಥಿತಿವಂತ ಹಾಗೂ ಅಮಾಯಕ ಯುವಕರನ್ನು ಬೆದರಿಸಿ ಹಣ ವಸೂಲಿಯ ಅಡ್ಡದಾರಿಗೆ ಇಳಿದಿದ್ದಾರೆ~ ಎಂದು ದೂರಿದರು.

ಸಾಮಾನ್ಯ ಪೇದೆ ಸುರೇಶ್, ದೇವನಹಳ್ಳಿಗೆ ಬಂದ ನಂತರ ಸ್ವಂತ ಸ್ಕಾರ್ಪಿಯೊ ಮೂರು ಅಂತಸ್ತಿನ ಕಟ್ಟಡ, ಐದಾರು ಎಕರೆ ಜಮೀನು ಹೇಗೆ ಕೊಂಡುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಇಂತಹವರಿಂದ ಉತ್ತಮ ಕರ್ತವ್ಯ ನಿರತ ಪೊಲೀಸರಿಗೆ ಅಗೌರವ ತಟ್ಟುತ್ತಿದೆ. ಮೊದಲೇ ಪೋಲೀಸ್ ಇಲಾಖೆಯವರೆಂದರೆ ಸಾರ್ವಜನಿಕರಿಗೆ ನಿರ್ಲಕ್ಷ್ಯವಿದೆ.
 
ಇಂಥವರಿಂದ ಇಂತಹ ಆರೋಪ ಇನ್ನಷ್ಟು ಹೆಚ್ಚುತ್ತಿದೆಇದರ ಬಗ್ಗೆ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ ಡಿ.ಎನ್.ವೆಂಕಟೇಶ್, ಮೂರ್ತಿ, ಪೋಷಕರು,ಅವರ ಸಂಬಂಧಿಕರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT