ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್ ಖಾನ್ ಅಂಕಣ...

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಕುಡಿತ ಚಟವಷ್ಟೇ ಅಲ್ಲ, ರೋಗವೂ ಹೌದು
ಬೆಂಕಿ ನಮ್ಮನ್ನು ಬೆಚ್ಚಗಿಡುತ್ತದೆ. ಜೊತೆಗೆ ದಹಿಸುತ್ತದೆ. ನಾವದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸುತ್ತೇವೆ. ಆದರೆ ಯಾವತ್ತೂ ಅದರ ಸಮೀಪಕ್ಕೆ ಹೋಗುವುದಿಲ್ಲ. ನಮ್ಮ ಉಳಿವಿನ ಪ್ರಜ್ಞೆ, ಹಾಗೂ ಆತ್ಮಸಂರಕ್ಷಣೆಯ ಅರಿವು ನಮ್ಮನ್ನು ಹಾಗೆ ಮಾಡದಂತೆ ತಡೆಯುತ್ತದೆ.

ಆದರೆ, ಇದೇ ಪ್ರಜ್ಞೆ ಹಾಗೂ ಅರಿವು ಕುಡಿತದೊಂದಿಗೆ ಯಾಕೆ ಪ್ರತಿಕ್ರಿಯಿಸುವುದಿಲ್ಲ? ಸ್ಪಂದಿಸುವುದಿಲ್ಲ! ಬೆಂಕಿಯ ಅದೆಷ್ಟೋ ಉಪಯುಕ್ತ ಅಂಶಗಳಿದ್ದರೂ ಅದರ ದಹಿಸುವ ಅಂಶ ನಮ್ಮನ್ನು ಬೆಂಕಿಯಿಂದ ದೂರವಿಡುತ್ತದೆ. ಬೆಂಕಿ ಸರ್ವನಾಶವನ್ನು ಮಾಡದಿದ್ದರೂ ಬೆಂಕಿಗೆ ಕೆಲವಷ್ಟು ಸಂಪತ್ತಂತೂ ಆಹುತಿಯಾಗುವುದಿಲ್ಲವೇ?

ದೇಶದಾದ್ಯಂತ, ಪ್ರತಿಯೊಂದು ರಾಜ್ಯದಲ್ಲೂ ಕುಡಿತದಿಂದ ಸರ್ವನಾಶವಾದ ಅಸಂಖ್ಯಾತ ಕುಟುಂಬಗಳಿವೆ. ಕುಡಿತ ಒಂದು ವ್ಯಾಧಿ ಇದ್ದಂತೆ. ಇದು ಕುಟುಂಬದ ಒಬ್ಬರಿಗೆ ಅಂಟಿಕೊಂಡರೂ ಇಡೀ ಕುಟುಂಬವೇ ಈ ರೋಗ ಲಕ್ಷಣಗಳಿಂದ ಬಳಲಬೇಕಾಗುತ್ತದೆ. ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿಧಾನವಾಗಿ ಇಡೀ ಕುಟುಂಬವನ್ನೇ ನಾಶಗೊಳಿಸುತ್ತದೆ.

ಕೌಟುಂಬಿಕ ಕ್ರೌರ್ಯದಲ್ಲೂ ಕುಡಿತ ಸಹಭಾಗಿಯಾಗುತ್ತದೆ. ಮಕ್ಕಳ ಶಿಕ್ಷಣದ ಮೇಲೆಯೂ ಪ್ರಭಾವ ಬೀರುತ್ತದೆ. ಒಂದು ಕುಟುಂಬ ತನ್ನ ಆರೋಗ್ಯ ರಕ್ಷಣೆಗೆ ವಿನಿಯೋಗಿಸಬೇಕಾದ ಹಣದ ಮೊತ್ತದಲ್ಲಿಯೂ ಕಡಿತ ಉಂಟು ಮಾಡುತ್ತದೆ. ನಿರುದ್ಯೋಗತನ ಸೃಷ್ಟಿಸುತ್ತದೆ. ಇವೆಲ್ಲ ಕೇವಲ ಕುಡಿತದ ಸಮಗ್ರ ದುಷ್ಪರಿಣಾಮಗಳು.

ನಾನಿಲ್ಲಿ ಕುಡಿತವನ್ನು `ರೋಗ~ ಎಂದು ವ್ಯಾಖ್ಯಾನಿಸಿದಾಗ ಇದೊಂದು ಕೇವಲ ಹಗುರವಾದ ಶಬ್ದವಾಗಿರಲಿಲ್ಲ. ಇವೊತ್ತು ಇದು ಕೇವಲ `ಕೆಟ್ಟ ಚಟ~ವಾಗಿ ಉಳಿದಿಲ್ಲ. ಬಹುತೇಕ ಜನರು ಇದನ್ನು ಚಟವೆಂದೇ ಭಾವಿಸುತ್ತಾರೆ. ಈವರೆಗೂ ಚಟವೆಂದೇ ಪರಿಗಣಿಸಲಾಗಿದೆ. ಆದರೆ ಇದನ್ನು ಈಗ `ವ್ಯಾಧಿ~ ಎಂದೇ ಪರಿಗಣಿಸಲಾಗುತ್ತಿದೆ.

ನಮ್ಮಲ್ಲಿರುವ ಕೆಲವರು ಕುಡಿತದಲ್ಲಿ ಸಮರ್ಥರು. ಒಮ್ಮೆ ಅವರು ಕುಡಿತ  ಆರಂಭಿಸಿದರೆ ಅವರನ್ನು ತಡೆಯುವುದು ಅಸಾಧ್ಯ. ಕುಡಿತದ ಸೆಳೆತವೇ ಹಾಗೆ. ಅದರ ಸುಳಿಯಲ್ಲಿ ಸಿಲುಕಿ ಬಿಡುತ್ತಾರೆ.

ಅದರಿಂದ ಹೊರಬರಬೇಕು ಎಂದು ಯತ್ನಿಸಿದಷ್ಟೂ ಅದೇ ವಿಷಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಇದೊಂಥರ ವೃತ್ತಾಕಾರದ ಸುಳಿ. ನದಿಯ ಸೆಳೆತದಂತೆ. ಒಮ್ಮೆ ಸೆಳೆದುಕೊಂಡರೆ ಎಳೆದು ಆಚೆ ತರುವುದೇ ಕಷ್ಟ. ದುರದೃಷ್ಟದ ಸಂಗತಿ ಎಂದರೆ ನೀವು ಈ ವಿಷಚಕ್ರದಲ್ಲಿ ಸಿಲುಕಲಿದ್ದೀರಿ ಎಂಬ ಸುಳಿವನ್ನು ನೀಡುವ ಯಾವುದೇ ವೈದ್ಯಕೀಯ ಪರೀಕ್ಷೆಗಳು ಲಭ್ಯ ಇಲ್ಲ.

ಇಲ್ಲಿ ಕುಡಿತದ ಚಟಕ್ಕೆ ಸಂಬಂಧಿಸಿದಂತೆ ನಾಲ್ಕು ಮಾನದಂಡಗಳನ್ನು ಗುರುತಿಸಬಹುದಾಗಿದೆ. ಅವನ್ನು ಸಿ. ಎ. ಜಿ. ಇ. ಎಂದು ಕರೆಯಲಾಗುತ್ತದೆ. ಕಟ್, (ಕತ್ತರಿಸು) ಆ್ಯಂಗರ್ (ಕ್ರೋಧ), ಗಿಲ್ಟ್ (ಅಪರಾಧಿ ಪ್ರಜ್ಞೆ) ಮತ್ತು ಐ ಓಪ್ನರ್ (ಕಣ್ತೆರೆಸುವುದು)

ಈಗ ನಿಮ್ಮಷ್ಟಕ್ಕೆ ನೀವೆ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಒಂದು ಪ್ರಶ್ನೆಗೆ `ಹೌದು~ ಎಂಬ ಉತ್ತರವಿದ್ದಲ್ಲಿ ನೀವು ಕುಡಿತಕ್ಕೆ ಅಂಟಿಕೊಳ್ಳುತ್ತಿರುವಿರಿ ಎಂದರ್ಥ. ಆದರೆ, ಒಂದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ `ಹೌದು~ ಎಂದಾದರೆ `ಕುಡಿತ~ ಸಮಸ್ಯೆಯಾಗಿ ಪರಿಣಮಿಸಿದೆ ಎಂದೇ ಅರ್ಥ.

1. ಕಟ್: ನಿಮ್ಮ ಸ್ನೇಹಿತರು, ನಿಕಟ ವರ್ತಿಗಳು ಆಗಾಗ ನಿಮ್ಮ ಕುಡಿತದ ಪ್ರಮಾಣ ಕಡಿಮೆಗೊಳಿಸು, (ಕಟ್) ಎಂಬ ಎಚ್ಚರಿಕೆ ನೀಡುತ್ತಿದ್ದಾರೆಯೇ?

2. ಕ್ರೋಧ: ನಿಮ್ಮ ನಿಕಟವರ್ತಿಗಳು, ಸ್ನೇಹಿತರು ನಿಮ್ಮ ಕುಡಿತದ ಪ್ರಮಾಣ ಕಡಿತಗೊಳಿಸು ಎಂದು ಎಚ್ಚರಿಸಿದಾಗಲೆಲ್ಲ ನೀವು ಕೋಪಿಸಿಕೊಳ್ಳುತ್ತೀರಾ ಅಥವಾ ಹತಾಶರಾಗುತ್ತೀರಾ?

3. ಅಪರಾಧಿ ಪ್ರಜ್ಞೆ: ನೀವು ಪ್ರತಿದಿನವೂ ನಿಮ್ಮಷ್ಟಕ್ಕೇ ನೀವೇ, ಈ ದಿನ ಕುಡಿತದ ನಿರ್ದಿಷ್ಟ ಪ್ರಮಾಣ  ಮೀರುವುದಿಲ್ಲ ಎಂದು ಪ್ರಮಾಣ ಮಾಡಿಕೊಳ್ಳುತ್ತೀರಿ. ಆದರೆ, ಒಮ್ಮೆ ಕುಡಿಯಲು ಆರಂಭಿಸಿದಾಗ ನಿಮ್ಮನ್ನು ನಿಯಂತ್ರಿಸಿಕೊಳ್ಳಲು ಆಗುವುದೇ ಇಲ್ಲ. ಮರುದಿನ ನಿಮ್ಮಲ್ಲಿ ಕುಡಿತದ ಪ್ರಮಾಣ ಹಾಗೂ ನಿಮ್ಮ ಮನೋಭಾವದ ಬಗ್ಗೆ ಅಪರಾಧಿ ಪ್ರಜ್ಞೆ ಮೂಡುತ್ತದೆ. ನಿಮ್ಮಲ್ಲಿಯ ಕುಡಿತದ ಪ್ರಮಾಣ ನಿಭಾಯಿಸದೇ ಇದ್ದುದಕ್ಕೆ ಅಪರಾಧಿ ಪ್ರಜ್ಞೆ ಮೂಡುತ್ತದೆ.

4. ಕಣ್ತರೆಸುವ ಸಾಧನ: ನಿಮಗೀಗ ಕುಡಿತದಿಂದಲೇ ನಿಮ್ಮ ದಿನವನ್ನು ಆರಂಭಿಸಬೇಕಾದ ಅನಿವಾರ್ಯ ಬಂದೊದಗಿದೆಯೇ? ನೀವು ಬೆಳಗ್ಗೆ ಎದ್ದೇಳುತ್ತೀರಿ. ನಿಮ್ಮ ಕೆಲಸ ಕಾರ್ಯಗಳನ್ನು ಮಾಡಲು ಅಸಾಧ್ಯ ಎನಿಸತೊಡಗುತ್ತದೆ. ಕುಡಿತವಿರದಿದ್ದರೆ, ಕೆಲಸಗಳನ್ನು ಮಾಡಲಾಗುವುದೇ ಇಲ್ಲ ಎಂಬ ಅಂತಿಮ ತೀರ್ಮಾನಕ್ಕೆ ಬಂದು ತಲುಪಿದ್ದೀರಾ?

ದುರದೃಷ್ಟದ ಸಂಗತಿ ಎಂದರೆ ನಮ್ಮನ್ನು ಕುಡಿತದಿಂದ ದೂರವಿಡುವ ಯಾವುದೇ ವೈದ್ಯಕೀಯ ಪದ್ಧತಿ ಈ ವಿಶ್ವದಲ್ಲಿಲ್ಲ. ಯಾವುದೇ ಔಷಧಿಗಳಿಲ್ಲ. ಆದರೆ, ಇಲ್ಲೊಂದು ಸಂಸ್ಥೆ ಇದೆ. ಅದು ಕುಡಿತದಿಂದ ದೂರವಿರಬೇಕು ಎಂದು ನಿರ್ಧರಿಸಿದವರಿಗೆ ಸಹಾಯ ಮಾಡುತ್ತದೆ. ಅದು `ಅಲ್ಕೋಹಾಲಿಕ್ಸ್ ಅನೊನಿಮಸ್~ (ಎ.ಎ) ಇದೊಂದು ವಿಶ್ವದಾದ್ಯಂತ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.

ಈಗಾಗಲೇ ವಿಶ್ವದಾದ್ಯಂತ 300 ದಶಲಕ್ಷ ಜನರು ಕುಡಿತವನ್ನು ಬಿಡುವಲ್ಲಿ ಸಹಾಯ ಮಾಡಿದೆ. ಈ ಕೆಳಗೆ ಅವರ ಸಂಪರ್ಕ ಸಂಖ್ಯೆ ಹಾಗೂ ವಿವರ ಇದೆ. ಎ.ಎ. ಸಂಸ್ಥೆಯನ್ನು ದೂರವಾಣಿಯ ಮೂಲಕ ಸಂಪರ್ಕಿಸಲು 90227 71011 ಕರೆಮಾಡಿ. ಅಥವಾ ನಿಮ್ಮ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯ ವಿವರವನ್ನು ಬರೆದು 56363ಗೆ `ಎಸ್‌ಎಂಎಸ್~ ಸಹ ಮಾಡಬಹುದು.

ಮದ್ಯಪಾನ ಸೇವನೆ ಮಾಡುವವರೆಲ್ಲರೂ `ಕುಡಿತ~ ಎಂಬ ವ್ಯಾಧಿಗೆ ಬಲಿಯಾಗುವುದಿಲ್ಲ. ದೇಶದಲ್ಲಿರುವ ಒಟ್ಟು ಮದ್ಯಪಾನ ಸೇವನೆ ಮಾಡುವ 20 ಜನರಲ್ಲಿ ಒಬ್ಬ ಕುಡಿತದ ರೋಗಿಯಾಗಿರುತ್ತಾನೆ. ಶೇ 5ರಷ್ಟು ಈ ಚಟಕ್ಕೆ ಒಳಗಾಗುತ್ತಾರೆ. ಆದರೆ ಇದೇನು ಸಮಾಧಾನಕರ ಅಂಶವಲ್ಲ. ಪ್ರತಿ ಇಬ್ಬರಲ್ಲಿ ಒಬ್ಬ `ಅಪಾಯಕಾರಿ ಕುಡಿತ~ಕ್ಕೆ ಬಲಿಯಾಗಿರುತ್ತಾನೆ. ಅಂದರೆ ಶೇ 50ರಷ್ಟು ಜನರು ಮಿತಿ ಮೀರಿ ಕುಡಿಯುತ್ತಾರೆ. ಕುಡಿತದ ರೋಗ ಮತ್ತು ಚಟದ ನಡುವಿನ ತೆಳು ಗೆರೆಯ ಮೇಲೆಯೇ ನಿಂತಿರುತ್ತಾರೆ.

ಹೀಗಾಗಿ ನೀವು ಪ್ರತಿದಿನ ಕುಡಿಲಿಕ್ಕಿಲ್ಲ. ಮತ್ತು ನೀವು ಕುಡಿತದ ರೋಗಿಯೂ ಆಗಿರಲಿಕ್ಕಿಲ್ಲ. ಪ್ರತಿಸಲ ನೀವು ಮದ್ಯ ಪಾನ ಮಾಡಿದಾಗಲೂ ನೀವು ಅದೆಷ್ಟು ಕುಡಿಯುವಿರಿ ಎಂದರೆ ನಿಮಗೆ ಪ್ರಜ್ಞೆಯೇ ಇರುವುದಿಲ್ಲ. ನೀವೂ ಅಪಾಯಕ್ಕೆ ಒಳಗಾಗುವಿರಿ. ಅಥವಾ ಇನ್ನೊಬ್ಬರನ್ನು ಅಪಾಯಕ್ಕೆ ಒಡ್ಡುವಿರಿ. ಅಥವಾ ಕೇವಲ ಒಂದೆರಡೇ ಪೆಗ್ ಸೇವಿಸಿದರೂ ಅಪಾಯಕಾರಿಯಾಗಿ ವರ್ತಿಸಬಹುದು. ಉದಾಹರಣೆಗೆ ಮದ್ಯಪಾನದ ನಂತರ ಕಾರು ಚಲಾಯಿಸುವುದು..

`ನಾನು ಕುಡಿದ ಮತ್ತಿನಲ್ಲಿದ್ದಾಗಲೂ ಸುರಕ್ಷಿತವಾಗಿ ವಾಹನ ಚಲಾಯಿಸಬಲ್ಲೆ. ನಾನು ನನ್ನ ನಿಯಂತ್ರಣದಲ್ಲಿರಬಲ್ಲೆ...~ ಅಥವಾ `ಸಮಾಧಾನ... ನಾನು ಕೇವಲ ಒಂದೆರಡೇ ಡ್ರಿಂಕ್ಸ್ ತೆಗೆದುಕೊಂಡಿರುವೆ... ನಿಯಂತ್ರಣದಲ್ಲಿದ್ದೇನೆ..~  ಇಂಥ ಮಾತುಗಳನ್ನು ನಾನು ಬಹಳಷ್ಟು ಸಲ ಮದ್ಯಪಾನ ಸೇವಿಸಿದವರಿಂದ ಕೇಳಿದ್ದೇನೆ.

ಪ್ರತಿಯೊಬ್ಬ ಕುಡುಕನೂ  ಮದ್ಯಪಾನ ಮಾಡಿದಾಗ ತಾನೊಬ್ಬ ಮಹಾಮಾನವನೆಂದೇ ಭಾವಿಸಿರುತ್ತಾನೆ. ಎಲ್ಲ ಅರ್ಥಗಳಲ್ಲೂ ತಾನು ಮಹಾನ್ ಎಂದೇ ತಿಳಿದುಕೊಂಡಿರುತ್ತಾನೆ. ಅಸಂಬದ್ಧ..! ಸ್ವಲ್ಪವೇ ಕುಡಿದಿದ್ದರೂ ಮದ್ಯಪಾನ ಮಾಡಿದವನ ಕೈಯಲ್ಲಿರುವ ಕಾರು  ಸಾವಿನ ಯಂತ್ರವಿದ್ದಂತೆ. ಒಂದು ವೇಳೆ ನೀವು ಈ ಸಾವಿನ ಯಂತ್ರದ ಚಾಲಕನ ಸೀಟಿನ ಮೇಲೆ ಕೂರಲು ನಿರ್ಧರಿಸಿದ್ದರೆ, ನಿಮ್ಮನ್ನು `ಸಮರ್ಥ ಕೊಲೆಗಾರ~ ಎಂದೇ ಪರಿಗಣಿಸಬೇಕಾಗುತ್ತದೆ.

ದೇಶದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸೇರ್ಪಡೆಯಾಗುವ ಪ್ರಕರಣಗಳಲ್ಲಿ ಶೇ 40-60ರಷ್ಟು ಪ್ರಕರಣಗಳು ಕುಡಿತಕ್ಕೆ ಸಂಬಂಧಿಸಿದಂತೆಯೇ ಇರುತ್ತವೆ. ಶೇ 35ರಷ್ಟು ಜನರು ಮದ್ಯಪಾನ ಸೇವಿಸಿದವರೇ ಆಗಿರುತ್ತಾರೆ. ಶೇ 65ರಷ್ಟು ಜನರು ಕುಡಿದಿರುವುದಿಲ್ಲ. ಆದರೆ ಕುಡಿದವರಿಂದ ಗಾಯಗೊಂಡವರು ಅಥವಾ ಹಲ್ಲೆಗೊಳಗಾದವರೇ ಆಗಿರುತ್ತಾರೆ.

ಹಾಗಾಗಿ... ಒಂದುವೇಳೆ ನಾವೆಲ್ಲ ಮದ್ಯಪಾನರಹಿತವಾಗಿ ಬದುಕುವಂತಿದ್ದರೆ ಅದಕ್ಕಿಂತ ಒಳಿತು ಇನ್ನಾವುದೂ ಇಲ್ಲ. ಆದರೆ ಆಗುವುದೇ ಇಲ್ಲ ಎಂದಾದಲ್ಲಿ ಕನಿಷ್ಠ ಪಕ್ಷ ಕುಡಿತದ ನಂತರ ಜವಾಬ್ದಾರಿಯುತ ನಡವಳಿಕೆಯಾದರೂ ನಮ್ಮದಾಗಿರಲಿ.

ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ಸಾಮಗ್ರಿಯನ್ನು ಸಂಗ್ರಹಿಸುವಾಗ, ಸಂದರ್ಶನಗಳನ್ನು ಕೈಗೊಂಡಾಗ.. ಅತಿಯಾಗಿ ಕ್ಷೋಭೆಗೊಳಗಾಗಿದ್ದೆ. ಸುಮೀರ್ ಆನಂದ್ ಹಾಗೂ ಅವರ ಹೆಂಡತಿ ಗೀತಿಕಾ ಅವರ ದುರಂತ ಕತೆ ಕೇಳಿದಾಗಲಂತೂ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೆ. ಅವರ 14 ವರ್ಷದ ಮಗ ಕರಣ್ ಕತೆ ಅದು. ಹೃದಯ ನುಚ್ಚುನೂರಾಗಿಸಿದ ಕತೆ ಇದು. ಅದೊಂದು ಭಯಾನಕ ಕನಸಿನಂತೆ ಇತ್ತು.

ಪಾಲಕರೆಲ್ಲ ತಮ್ಮ ಮಗುವಿನ ಬಗ್ಗೆ ನೂರು ಕನಸುಗಳನ್ನು ಕಾಣುತ್ತಾರೆ. ನಾನು ಈ ಕತೆಯನ್ನು ಕೇಳಿದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ನನ್ನ ಮಕ್ಕಳಾದ ಇರಾ ಮತ್ತು ಜುನೈದ್‌ನಿಗೆ ಕರೆ ಮಾಡಿ ಕರೆಸಿದೆ. ಅವರಿಬ್ಬರೂ ಕ್ರಮವಾಗಿ 13 ಹಾಗೂ 18 ವರ್ಷ ವಯಸ್ಸಿನವರಾದ್ದಾರೆ. ನಾನು ಅವರಿಗೆ ಆನಂದ್ ಅವರ ಸಂದರ್ಶನವನ್ನು ತೋರಿಸಿದೆ. ನಂತರ ಅವರಿಂದ ಪ್ರಮಾಣ ಮಾಡಿಸಿಕೊಳ್ಳುವಂತೆ ಮಾಡಿದೆ.

ಅದೇನೆಂದರೆ ನಾವೆಲ್ಲರೂ ಈ ಪ್ರಮಾಣ ಮಾಡಲೇಬೇಕು. ನಮ್ಮಷ್ಟಕ್ಕೆ ನಾವೇ ಪ್ರಮಾಣ ಮಾಡಿಕೊಳ್ಳಬೇಕು.
ಅದೇನೆಂದರೆ..: ಯಾವತ್ತಿಗೂ ಮದ್ಯಪಾನ ಮಾಡಿದ ನಂತರ ಕಾರು ಚಾಲನೆಗೆ ಅಥವಾ ವಾಹನ ಚಾಲನೆಗೆ ಮುಂದಾಗಬೇಡಿ... ಮತ್ತು ಚಾಲಕ ವಾಹನ ಚಾಲನೆಗೆ ಮೊದಲು ಒಂದೇ ಒಂದು ಹನಿ ಮದ್ಯಪಾನ ಸೇವಿಸಿದ್ದರೂ ಆ ವಾಹನದಲ್ಲಿರಬೇಡಿ..!
ಇದನ್ನು ಬದುಕಿನ ನಿಯಮವಾಗಿಸಿಕೊಳ್ಳಿ.

ಜೈ ಹಿಂದ್! ಸತ್ಯಮೇವ ಜಯತೆ..!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT