ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತೇಶ್ವರ ದೇವಾಲಯ ಶಿಲ್ಪ ಕಲಾ ವೈಭವ

Last Updated 1 ಜೂನ್ 2011, 19:35 IST
ಅಕ್ಷರ ಗಾತ್ರ

ತರೀಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ ರುವ ಹೊಯ್ಸಳರ ಕಾಲದ ಅಮೃತೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು, ತನ್ನ ವೈಶಿಷ್ಟ್ಯತೆಯ ಕೆತ್ತನೆಗಳಿಂದ ಪ್ರವಾಸಿಗರನ್ನು  ತನ್ನತ್ತ ಸೆಳೆಯುತ್ತಿದೆ.

ಹೊಯ್ಸಳರು ಕಟ್ಟಿಸಿದ್ದ ಈ ಭವ್ಯ ಶಿಲ್ಪಕಲೆಯ ದೇವಾಲಯದ ಹೊರ ಆವರಣದಲ್ಲಿ ಭಾಗವತ, ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ವರ್ಣಿಸುವ ಕೆತ್ತನೆಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.

ದೇಗುಲದ ನಿರ್ಮಾಣದ ಹಿನ್ನೆಲೆ: ಹೊಯ್ಸಳರ ಎರಡನೇ ವೀರ ಬಲ್ಲಾಳರಾಜನ ಆಸ್ಥಾನದಲ್ಲಿದ್ದ ಸೇನಾ ದಂಡನಾಯಕನಾಗಿದ್ದ ಅಮಿತೇಯ ನಾಯಕ ಅಪರಿಮಿತ ಶೂರನಾಗಿದ್ದು, ಎರಡನೇ ಬಲ್ಲಾಳ ರಾಜನ ಆಪ್ತನಾಗಿದ್ದ. ಈತನನ್ನು ರಾಜರು ಅಮೃತ ದಂಡನಾಯಕನೆಂದು ನಾಮಕರಣ ಮಾಡಿದ್ದರು.

ಹೊಯ್ಸಳರಿಗೂ ಮತ್ತು ಗುರುಜರ ನಡುವೆ ಕ್ರಿ.ಪೂ.1192ರಲ್ಲಿ ನಡೆದ ಘೋರ ಕದನದಲ್ಲಿ ಗುರುಜರ ಸೈನಿಕರು ಅಮೃತದಂಡ ನಾಯಕನನ್ನು ಮೋಸದಿಂದ ಹತ್ಯೆ ಮಾಡಿದ ಕಾರಣ ಆತನ ನೆನಪಿಗಾಗಿ ಎರಡನೇ ವೀರಬಲ್ಲಾಳ ಅರಸ ಈ ದೇವಾಲಯವನ್ನು ಕ್ರಿ.ಪೂ. 1196ರಲ್ಲಿ ನಿರ್ಮಿಸಿದನೆಂದು ಶಾಸನದಲ್ಲಿ ಹೇಳಲಾಗಿದೆ.

52 ಕಂಬ, 42 ಭುವನೇಶ್ವರಿ, ಮತ್ತು 250 ವಿಶಿಷ್ಟ ಕೆತ್ತನೆಯ ಗೋಪುರಗಳನ್ನೊಳಗೊಂಡ ನಕ್ಷತ್ರಾಕಾರದಲ್ಲಿ ನೆಲ ಮಟ್ಟದಲ್ಲಿ ದೇವಾಲಯ ನಿರ್ಮಿಸಲಾಗಿದ್ದು, ನೇಪಾಳದ `ದಂಡಕಿ~ ನದಿಯಿಂದ ತರಲಾದ `ಸಾಲಿಗ್ರಾಮ~ ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

ಸಾಲಿಗ್ರಾಮಕ್ಕೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿ ತುಂಬಲಾಗಿದೆ ಎಂದು ಶಾಸನದಲ್ಲಿ ವಿವರಿಸಲಾಗಿದ್ದು, ಈ ಕಾರಣವಾಗಿಯೇ ಶಾರದೆ, ಲಕ್ಷ್ಮಿ ಮತ್ತು ಪಾರ್ವತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಪರೂಪದಲ್ಲಿ ಅಪರೂಪವಾಗಿರುವ ಅದ್ಬುತ ಶಿಲ್ಪಕಲಾ ಸೌಂದರ್ಯ ಹೊಂದಿರುವ ಶಾರದ ದೇವಿಯ ವಿಗ್ರಹವನ್ನು ಹೊರತುಪಡಿಸಿ ಮಿಕ್ಕ ವಿಗ್ರಹಗಳು ಭಗ್ನಗೊಂಡಿವೆ.

ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಸಾಲಿಗ್ರಾಮ ಲಿಂಗದಮೂರ್ತಿಯನ್ನು ಮಕರ ಸಂಕ್ರಾಂತಿಯಂದು ಪ್ರತಿಷ್ಠಾಪಿಸಿದ್ದ ಕಾರಣ ಪ್ರತಿ ಮಕರ ಸಂಕ್ರಾಂತಿಯಲ್ಲಿ (ಜ.14ರಂದು) ಬೆಳಗ್ಗಿನ ಸೂರ್ಯನ ಕಿರಣ ಸಾಲಿಗ್ರಾಮದ ಮೇಲೆ ಬೀಳುತ್ತದೆ. ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಜನರು ಅಮೃತಾಪುರದಲ್ಲಿ ಜಮಾಯಿಸಿ ದರ್ಶನ ಪಡೆದು ಪುನೀತರಾಗುತ್ತಾರೆ.

`ಬೇಡಿ~ದ ವರಕೊಡುವ ತಾಯಿ ಶಾರದಾದೇವಿಯ ಮತ್ತು ವಿಘ್ನನಿವಾರಕ ಗಣಪನ ವಿಗ್ರಹಗಳ ಮೂರ್ತಿಯ  ಮೇಲಿರುವ ಅಪರೂಪದ ಕೆತ್ತನೆ  ಆಶ್ಚರ್ಯ ಹುಟ್ಟಿಸುತ್ತದೆ. ವಿಶಾಲವಾದ ದೇವಾಲಯದ ಹೊರಾಂಗಣ ನೋಟ ಮನಸ್ಸಿಗೆ ಮುದ ನೀಡುತ್ತದೆ.

ತಮ್ಮ ಮನೋಭಿಲಾಷೆಯನ್ನು ಬೇಡಿಕೊಂಡಲ್ಲಿ ಈಡೇರುತ್ತದೆ ಎಂಬ ಸತ್ಯವನ್ನು ಅರಿತು ಆಸ್ತಿಕರ ದಂಡು ಸದಾ ಇಲ್ಲಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಹರಕೆ ಮಾಡಿಕೊಳ್ಳಲು ಪ್ರತಿದಿನವೂ ಸಾವಿರಾರು ಸಂಖ್ಯೆಲ್ಲಿ ಆಗಮಿಸುವುದನ್ನು ಕಾಣಬಹುದಾಗಿದೆ.

ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಅಮೃತಾಪುರ ದೇವಾಲಯಕ್ಕೆ ಬರುವ ಭಕ್ತರಿಗಾಗಿ ವಸತಿ ವ್ಯವಸ್ಥೆ ಇಲ್ಲದಿರುವುದು ಇಲ್ಲಿಗೆ ಬರುವ ಪ್ರವಾಸಿಗರ ಮುಖ್ಯ ತೊಂದರೆ. ಆದರೂ ಮೂಲಸೌಲಭ್ಯಕ್ಕಾಗಿ ಸಾಕಷ್ಟು ಕ್ರಮವನ್ನು ಇಲಾಖೆ ಕೈಗೊಂಡಿದೆ. ಪ್ರವಾಸಿಗರಿಗೆ ವಸತಿ ಮತ್ತು ಊಟದ ಸೌಲಭ್ಯವನ್ನು ಒದಗಿಸಬೇಕಿದೆ ಎಂಬುದು ಇಲ್ಲಿಗೆ ಬರುವವರ ಹಕ್ಕೊತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT