ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹಂಸ ಶಾಂತಿ ಗೀತೆ!

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

`ಶಾಂತಿ ನುಡಿ ಕನ್ನಡ- ಕ್ಲಿಯರ್ ನ್ಯೂಕ್ಲಿಯರ್'. ಇದು ದಶಕದ ಹಿಂದೆ ಚಿತ್ರಸಾಹಿತಿ, ನಿರ್ದೇಶಕ ಹಂಸಲೇಖರ ಮನದಲ್ಲಿ ಹುಟ್ಟಿದ ಕನಸು. ಎರಡು ವಿಭಿನ್ನ ಸಂಗತಿಗಳನ್ನು ಹೆಣೆದು ಹೊರದೇಶದಲ್ಲಿ ಸಾರುವ ಅವರ ಈ ಕನಸು ಈಡೇರುತ್ತಿದೆ. ಕನ್ನಡ ಭಾಷೆಯೊಳಗಿನ ಶಾಂತಿಯ ಪ್ರತಿಪಾದನೆ ಮತ್ತು ಅಣ್ವಸ್ತ್ರ ತಯಾರಿಕೆಯ ಪೈಪೋಟಿಯ ಅಪಾಯದ ವಿರುದ್ಧದ ಸಂದೇಶವನ್ನು ಅವರು ಬೆಸೆಯುತ್ತಿರುವುದು ಸಪ್ತಸಾಗರದಾಚೆಯ ಅಮೆರಿಕದಲ್ಲಿ.

ಅಮೆರಿಕದಲ್ಲಿರುವ `ನ್ಯೂಯಾರ್ಕ್ ಕನ್ನಡ ಕೂಟ' 40ನೇ ವಾರ್ಷಿಕೋತ್ಸವದ ಪ್ರಯುಕ್ತ ಜುಲೈ 13ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಥಿಯೇಟರ್‌ನಲ್ಲಿ ಆಯೋಜಿಸಿರುವ `ಶಾಂತಿ ನುಡಿ ಕನ್ನಡ' ಕಾರ್ಯಕ್ರಮದಲ್ಲಿ ಹಂಸಲೇಖ ಮತ್ತು ಅವರ ತಂಡ ಭಾಗವಹಿಸಲಿದೆ. ಬಳಿಕ ಸ್ಯಾನ್‌ಫ್ರಾನ್ಸಿಸ್ಕೊ, ಲಾಸ್ ಏಂಜಲಿಸ್, ನ್ಯೂಜೆರ್ಸಿ, ಫ್ಲೊರಿಡಾ ಮತ್ತು ಷಿಕಾಗೊಗಳಲ್ಲಿಯೂ ಕಾರ್ಯಕ್ರಮ ನೀಡಲಿದೆ.

ಹಾಡುಗಳ ಈ ತಂಡ ಕನ್ನಡದ ಹಿರಿಮೆಯನ್ನು ಸಾರಲಿದೆ. `ಕಲೆಗಳ ಮೂಲಕವೇ ಅಣ್ವಸ್ತ್ರ ಸಮರಗಳನ್ನು ವಿರೋಧಿಸಲು ಸಾಧ್ಯ' ಎನ್ನುವುದು ಹಂಸಲೇಖ ನಂಬಿರುವ ಮಾರ್ಗ. ಅದಕ್ಕೆ ಶಾಂತಿ ನುಡಿ ಕನ್ನಡ ಕಾರ್ಯಕ್ರಮ ಮುನ್ನುಡಿ ಬರೆಯಲಿದೆ ಎಂಬ ವಿಶ್ವಾಸ ಅವರದು. ಲತಾ ಹಂಸಲೇಖ, ಚೇತನ್ ಸಾಸ್ಕಾ, ಅನುರಾಧ ಭಟ್, ತಬಲಾ ವೇಣು, ಮಂಜುನಾಥ್ ಇತರರು ಹಂಸಲೇಖರ ಜೊತೆ ಅಮೆರಿಕಕ್ಕೆ ಪಯಣ ಬೆಳೆಸಲಿದ್ದಾರೆ.

ನ್ಯೂಯಾರ್ಕ್ ಕನ್ನಡ ಕೂಟದಲ್ಲಿ ಸಕ್ರಿಯರಾಗಿರುವ ಕೃಷ್ಣಮೂರ್ತಿ ಸುಮಾರು 800 ಕನ್ನಡಿಗರನ್ನು ಈ ಕಾರ್ಯಕ್ರಮದಲ್ಲಿ ಸೇರಿಸುವ ಗುರಿ ಹೊಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಂಸಲೇಖ ತಂಡದ ಕಾರ್ಯಕ್ರಮದ ಜೊತೆಗೆ ಇನ್ನೂ ಹಲವು ಕಾರ್ಯಕ್ರಮಗಳು ನಡೆಯಲಿದೆ. ಏಡ್ಸ್ ಕುರಿತ ಕಾರ್ಯಕ್ರಮ, ಕನ್ನಡದ ಸಾಹಿತಿಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿರುವ ಮಾಹಿತಿ ನೀಡಿದರು.

ಮಕ್ಕಳಿಗೆ ಕನ್ನಡ ಅಕ್ಷರ ಕಲಿಕೆಗೆ ಅನುಕೂಲವಾಗುವಂತೆ ಕನ್ನಡ ಶಾಲೆ ತೆರೆಯುವ ಉದ್ದೇಶ ಕನ್ನಡ ಕೂಟದ್ದು. ನ್ಯೂಯಾರ್ಕ್ ಕನ್ನಡ ಕೂಟದ ಪ್ರತಿನಿಧಿ ಮಿಥುನ್, ಚೇತನ್ ಸಾಸ್ಕಾ, ಅನುರಾಧ ಭಟ್, ವೇಣುಗೋಪಾಲ್ ರಾಜು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT