ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯೋ ಪಾಪ!

ಮಿನಿ ಕಥೆ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೊದಲು ಹನಿ ಹನಿಯಾಗಿ ಬಿದ್ದ ಮಳೆ ಜೋರಾಗತೊಡಗಿತು. ಛತ್ರಿ ತರದೇ ವಾಕಿಂಗ್‌ಗೆ ಬಂದಿದ್ದ ನಾನು ವಿಧಿಯಿಲ್ಲದೆ ಹತ್ತಿರದ ಅಂಗಡಿಯ ಸೂರಿನ ಕೆಳಗೆ ನಿಂತೆ. ಅಷ್ಟರಲ್ಲಿ ತಲೆಯ ಮೇಲೆ ಸೆರಗು ಹೊದ್ದ ಹೆಂಗಸೊಬ್ಬಳು ಓಡೋಡಿ ಬಂದು ಪಕ್ಕ ನಿಂತಳು. `ಉಸ್ಸಪ್ಪಾ' ಎನ್ನುತ್ತಾ ಸೆರಗು ತಲೆ ಮೇಲಿಂದ ತೆಗೆದವಳೇ `ಏನಕ್ಕಾ, ಹೆಂಗಿದ್ದೀಯ?' ಎಂದಳು.

ಇದ್ಯಾರಪ್ಪಾ ಎಂದು ಆಶ್ಚರ್ಯದಿಂದ ತಿರುಗಿ ನೋಡಿದರೆ ಸೀತಾ! ಮೂರು ವರ್ಷದ ಹಿಂದೆ ಮನೆಗೆಲಸಕ್ಕೆ ಬರುತ್ತಿದ್ದ ಮಧ್ಯ ಪ್ರಾಯದ ಹೆಂಗಸು. ಮೂಲತಃ ಕೋಲಾರದವಳು. ಊರಲ್ಲಿ ಹೊಲ-ಗದ್ದೆ ಎಲ್ಲ ಇದ್ದರೂ ಬೆಂಗಳೂರಿಗೆ ಬಂದಿದ್ದಳು. ಕಾರಣ, ಅವಳ ಗಂಡ ಕುಡುಕ. ಸೋಮಾರಿ ಗಂಡ ಇನ್ನೊಬ್ಬಳನ್ನು ಕಟ್ಟಿಕೊಂಡು ಮನೆಗೆ ಕರೆತಂದಿದ್ದ. ಗಂಡನ ದುಶ್ಚಟ, ಸವತಿಯ ಕಾಟಕ್ಕೆ ಬೇಸತ್ತು ಸೀತಾ ಹಳ್ಳಿ ಬಿಟ್ಟು ಇಬ್ಬರು ಗಂಡು ಮಕ್ಕಳೊಂದಿಗೆ ಬೆಂಗ­ಳೂರು ಸೇರಿದ್ದಳು. ಅವರಿವರ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಎರಡು ವರ್ಷ ನಿಯತ್ತಾಗಿ ನಮ್ಮ ಮನೆ ಕೆಲಸ ಮಾಡಿದ್ದಳು. ಸಂಬಳದ ಜೊತೆಗೆ ಮಕ್ಕಳ ವಿದ್ಯಾ­ಭ್ಯಾಸಕ್ಕೆ ಕೈಲಾದ ಸಹಾಯ ಮಾಡಿದ್ದೆ. ಒಮ್ಮೆ ಊರಿಗೆ ಹೋಗಿ ಬರುತ್ತೇನೆ ಎಂದು ಹೋದವಳು ಬರಲೇ ಇಲ್ಲ.

ಸ್ವಲ್ಪ ದಿನಗಳ ನಂತರ ನಮ್ಮ ಮನೆಗೆ ಹೊಸ ಕೆಲಸದವಳು ಬಂದಿದ್ದಳು. ಮೊದಮೊದಲು ಆಗಾಗ ನೆನಪಾಗುತ್ತಿದ್ದ ಸೀತಾ, ಕ್ರಮೇಣ ಮನಸ್ಸಿನಿಂದ ಮರೆಯಾಗಿದ್ದಳು. ಹೀಗಿರುವಾಗ ಬೆಳ್ಳಂಬೆಳಿಗ್ಗೆ ಮಳೆ ಬೀಳುತ್ತಿರುವ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಳು. 

ಇದೆಲ್ಲ ನೆನಪಾಗಿ `ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯಾ? ಎಲ್ಲಿದ್ದೀಯಾ?' ಎಂದು ಪ್ರಶ್ನಿಸಿದೆ. ಬಾಯಿಯಲ್ಲಿದ್ದ ಎಲೆ ಅಡಿಕೆ ಪಕ್ಕಕ್ಕೆ ಉಗುಳಿ ತನ್ನ ಕತೆ ಆರಂಭಿಸಿಯೇಬಿಟ್ಟಳು. `ಅಕ್ಕೋ, ನನ್ ಕತೆ ಏನ್ ಹೇಳ್ಲಿ? ಗಂಡ, ಎರಡ್ ಗಂಡು ಮಕ್ಕಳು ಸೇರಿ ಮಾನ ಮರ್ವಾದೆ ಹರಾಜಾಕಿ ಬಿಟ್ರು. ಕಟ್‌ಕೊಂಡವನು ಕೈ ಬಿಟ್ಟ, ಕಷ್ಟಪಟ್ಟು ಸಾಕಿದ ಮಕ್ಕಳು ಕೆಟ್ಟ ದಾರಿ ಹಿಡುದ್ರು. ದೊಡ್ಡವನು ರೇಸ್‌ಗೆ ಬಿದ್ದು ಚೀಟಿ ಹಾಕಿದ್ದ ದುಡ್ಡು ಕಳೆದ. ಚಿಕ್ಕವನು ಯಾರನ್ನೋ ಲವ್ ಮಾಡಿ ಓಡೋಗಿ ಮದ್ವೆ ಆದ. ಆ ಹುಡ್ಗೀಗೆ ಇನ್ನೂ 16 ವರ್ಷ. ಪೋಲೀಸ್ರೆಲ್ಲ ಸೇರಿಬಿಟ್ರು.   ಒಟ್ನಲ್ಲಿ ಎಲ್ಲ ಸೇರಿ ಕಂಡವರ ಬಾಯಲ್ಲಿ `ಪಾಪ' ಅನ್ನಿಸೋ ಸ್ಥಿತಿ ತಂದಿಟ್ರು ನಂಗೆ. ಈ ಎಲ್ಲ ಗಲಾಟೆಯಿಂದ ಬೇಜಾ­ರಾಗಿ ಈಗ ಮತ್ತೆ ಇಲ್‌ಗೇ ಬಂದಿದೀನಿ. ಗಂಡನ ಜತೆ ಸಂಸಾರದ ಆಸೆ ಇತ್ತು, ಅದು ಮಣ್ಣಾಯ್ತು. ಗಂಡು ಮಕ್ಕಳು ದುಡಿದು ಸಾಕ್ತಾರೆ ಅಂದ್‌ಕೊಂಡಿದ್ದೆ. ಸಾಕೋದಿ­ರಲಿ, ಬೈತಾರೆ-, ಒದೀತಾರೆ. ನನಗೆ ಈ ಗಂಡು ಜಾತಿಯ ಸಾವಾಸವೇ ಸಾಕಾಗೋಗಯ್ತೆ ಅಕ್ಕಾ' ಎಂದು ಕಣ್ಣೊರೆಸಿಕೊಂಡಳು.

ನನಗೆ ಕನಿಕರ ಎನಿಸಿದರೂ ಏನೂ ಹೇಳಲು ತೋಚದೆ ಸುಮ್ಮನಾದೆ. ಮತ್ತೆ ಅವಳೇ `ನನ್ ಗೋಳು ಬಿಡಕ್ಕಾ. ನಿನ್ ಮಕ್ಕಳು ಚೆನ್ನಾಗಿದಾರಾ? ತಂಗೀರ ಮದ್ವೆ ಆಯ್ತೊ?' ಎಂದಳು. ನಾನು `ಮಕ್ಕಳು ಚೆನ್ನಾಗಿದ್ದಾರೆ. ತಂಗಿಯರಿಗೆ ಮದ್ವೆ ಆಗಿ ಮಕ್ಕಳೂ ಆಗಿದ್ದಾರೆ. ದೊಡ್ಡ ತಂಗಿಗೆ ಮಗ - ಮಗಳು, ಚಿಕ್ಕವಳಿಗೆ ಮಗ' ಅಂದೆ.

ಅಷ್ಟಂದದ್ದೇ ತಡ ಅನುಕಂಪದ ದನಿಯಲ್ಲಿ ಸೀತಾ `ಅಯ್ಯೋ ಪಾಪ! ನಿಂಗೊಬ್ಬಳಿಗೇ ಎರಡೂ ಹೆಣ್ಣು ಮಕ್ಕಳು ಆಗ್‌ಬಿಟ್ವಲ್ಲಾ. ಒಂದಾದ್ರೂ ಗಂಡ್ ಮಗ ಆಗ್ಬೇಕಾಗಿತ್ತು. ಏನ್ ಮಾಡಾದು ನಿಂಗೆ ಅದೃಷ್ಟ ಇಲ್ಲ ಬಿಡು' ಎಂದಳು. ಸುರಿಯುತ್ತಿದ್ದ ಮಳೆ ನೋಡುತ್ತಾ ನಾನು ಸುಮ್ಮನೇ ನಕ್ಕೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT