ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಗಣಿಗಾರಿಕೆ: ತನಿಖೆ ಅಗತ್ಯ ಇಲ್ಲ

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಖನಿಜ ಸಂಪತ್ತಿದ್ದ ಅರಣ್ಯವನ್ನು ಮಾತ್ರ ಗಣಿಗಾರಿಕೆಗೆ ಮುಕ್ತಗೊಳಿಸಿದ ನನ್ನ ಸಚಿವ ಸಂಪುಟದ ತೀರ್ಮಾನ ಕುರಿತು ಹಿಂದಿನ ಲೋಕಾಯುಕ್ತ (ನ್ಯಾ.ಸಂತೋಷ್ ಹೆಗ್ಡೆ) ಸಮಗ್ರ ತನಿಖೆ ನಡೆಸಿ ವರದಿ ನೀಡಿದ್ದಾರೆ. ಈ ಬಗ್ಗೆ ಪುನಃ ತನಿಖೆ ನಡೆಸುವಂತೆ ಕೇಳುವುದರಲ್ಲಿ ಅರ್ಥವಿಲ್ಲ~ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಗುರುವಾರ ಸ್ಪಷ್ಟಪಡಿಸಿದರು.

`ನಾನು ಮುಖ್ಯಮಂತ್ರಿ (1999ರಿಂದ 2004) ಆಗಿದ್ದಾಗ ಖನಿಜ ಸಂಪತ್ತು ಲಭ್ಯವಿದ್ದ ಅರಣ್ಯವನ್ನು ಮಾತ್ರ ಗಣಿಗಾರಿಕೆಗೆ ಮುಕ್ತಗೊಳಿಸಲಾಗಿದೆ. ಈ ತೀರ್ಮಾನ ಕುರಿತು ಯಾವುದೇ ತನಿಖೆ ಎದುರಿಸಲು ಸಿದ್ಧ. ಆದರೆ, ಒಮ್ಮೆ ತನಿಖೆಯಾದ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಸುವಂತೆ ಕೇಳುವುದು ಸರಿಯಲ್ಲ~ ಎಂದು ಕೃಷ್ಣ ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಪಾದಿಸಿದರು.

`ನಲವತ್ತು ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿರುವ ಗೌರವ ಮತ್ತು ವರ್ಚಸ್ಸಿಗೆ ಧಕ್ಕೆ ಮಾಡುವ ಉದ್ದೇಶದಿಂದ ಕೆಲವರು ನನ್ನ ಮೇಲೆ ಆರೋಪ ಮಾಡಿ ತನಿಖೆಗೆ ಒತ್ತಾಯ ಮಾಡುತ್ತಿದ್ದಾರೆ. ದುರುದ್ದೇಶದಿಂದ ಕೂಡಿದ ಆರೋಪಗಳ ಬಗ್ಗೆ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ವಿವರಣೆ ನೀಡಲಿದ್ದೇನೆ~ ಎಂದು ವಿದೇಶಾಂಗ ಸಚಿವರು ಹೇಳಿದರು.

`ಐದು ವರ್ಷದ ಅಧಿಕಾರಾವಧಿಯಲ್ಲಿ ಅರಣ್ಯ, ಗಣಿ ಹಾಗೂ ಭೂವಿಜ್ಞಾನ ಖಾತೆಗಳು ನನ್ನ ಅಧೀನದಲ್ಲಿ ಇರಲಿಲ್ಲ. ಇಬ್ಬರು ಸಚಿವರ ಬಳಿ ಈ ಇಲಾಖೆಗಳಿದ್ದವು. ಅವರು ತಮ್ಮ ಪಾಲಿನ ಕರ್ತವ್ಯಗಳನ್ನು ಗೌರವದಿಂದ ನಿರ್ವಹಿಸಿದ್ದಾರೆ. ಕಂಪೆನಿ ಕಾಯ್ದೆಯಡಿ ಸ್ಥಾಪನೆಯಾದ `ಮೈಸೂರು ಮಿನ   ರಲ್ಸ್ ನಿ~ (ಎಂಎಂಎಲ್) ಸ್ವತಂತ್ರ ಅಸ್ತಿತ್ವವಿದ್ದು, ನಿರ್ದೇೀಶಕ ಮಂಡಳಿ ಅಣತಿಯಂತೆ ಕೆಲಸ ಮಾಡುತ್ತದೆ. ಈ ಕಂಪೆನಿ ತೀರ್ಮಾನದಲ್ಲೂ ನನ್ನ ಪಾತ್ರವೇನೂ ಇಲ್ಲ~ ಎಂದರು.

`ಎಂಎಂಎಲ್~ ವ್ಯವಹಾರ ಕುರಿತು ಸಂಪೂರ್ಣ ತನಿಖೆ ನಡೆಸಿದ ಲೋಕಾಯುಕ್ತರು ಎಲ್ಲ ಆರೋಪಗಳಿಂದ ನನ್ನನ್ನು ಮುಕ್ತಗೊಳಿಸಿದ್ದಾರೆ. ಇದೇ ಕಂಪೆನಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ನನ್ನ ಮೇಲೆ  ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಖಾಸಗಿ ದೂರು ವಜಾ ಆಗಿದೆ~ ಎಂದು ಕೃಷ್ಣ ತಿಳಿಸಿದರು.

1993ರಲ್ಲಿ ರೂಪಿಸಲಾದ ರಾಷ್ಟ್ರೀಯ ಖನಿಜ ನೀತಿಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಮನವಿ ಮೇರೆಗೆ ರಾಜ್ಯ ಸಚಿವ ಸಂಪುಟ ಖನಿಜ ಸಂಪತ್ತಿದ್ದ ಅರಣ್ಯ ಭೂಮಿಯನ್ನು ಮಾತ್ರ ಮೀಸಲು ವ್ಯಾಪ್ತಿಯಿಂದ ಮುಕ್ತಗೊಳಿಸುವ ತೀರ್ಮಾನ ಕೈಗೊಂಡಿತು. ಖನಿಜವನ್ನು ರಾಜ್ಯದ ಬಳಕೆಗೆ ಮಾತ್ರವೇ ಸೀಮಿತಗೊಳಿಸಲಾಯಿತು. ಇದನ್ನು ಹೊರತುಪಡಿಸಿ ಮತ್ಯಾವ ಮೀಸಲು ಅರಣ್ಯವನ್ನು ಮುಕ್ತಗೊಳಿಸಿಲ್ಲ ಎಂದು ವಿವರಿಸಿದರು.

 ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತಿದ್ದರೆ, ಕೇಂದ್ರ ಸರ್ಕಾರದ ಅನುಮತಿ ಪಡೆದು ಗಣಿಗಾರಿಕೆ ನಡೆಸಬೇಕಾಗುತ್ತದೆ. `2003ರ ಮಾರ್ಚ್ 15ರಂದು ಪ್ರಕಟವಾದ ಅಧಿಸೂಚನೆ ಅನ್ವಯ ಆಸಕ್ತ ಕಂಪೆನಿಗಳು, ವ್ಯಕ್ತಿಗಳಿಂದ ಗಣಿಗಾರಿಕೆ ಅನುಮತಿ ಕೇಳಿ ಅರ್ಜಿಗಳು ಬಂದಿದ್ದರೂ ಅವುಗಳನ್ನು ನನ್ನ ಅಧಿಕಾರಾವಧಿಯಲ್ಲಿ ಪರಿಗಣಿಸಿಲ್ಲ. ಯಾರಿಗೂ ಪರವಾನಗಿ ನೀಡಿಲ್ಲ~ ಎಂದು ಕೃಷ್ಣ ನುಡಿದರು.

`ರಾಜ್ಯ ಸಚಿವ ಸಂಪುಟ 2002ರಲ್ಲಿ ಮೀಸಲು ಅರಣ್ಯವನ್ನು ಗಣಿಗಾರಿಕೆಗೆ ಮುಕ್ತಗೊಳಿಸುವ ತೀರ್ಮಾನ ಕೈಗೊಂಡಿದೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆರೋಪ ಮಾಡುತ್ತಿವೆ. ಇದು ಸಂಪೂರ್ಣ ಸತ್ಯವಲ್ಲ. ಈ ಆರೋಪಗಳು ದಾಖಲೆಗಳಿಗೆ ವ್ಯತಿರಿಕ್ತವಾಗಿವೆ. ಈ ಪ್ರಕರಣ ಸುಪ್ರೀಂ   ಕೋರ್ಟ್ ಮುಂದಿದ್ದು, ಏನೇ ಮಾತಾಡಿದರೂ ನ್ಯಾಯಾಲಯದ ಅಧಿಕಾರಕ್ಕೆಚ್ಯುತಿ ಬರಲಿದೆ~ ಎಂದು ವಿದೇಶಾಂಗ ಸಚಿವರು ಅಭಿಪ್ರಾಯಪಟ್ಟರು.

`ನಿಮ್ಮ ಮೇಲೆ ಆರೋಪ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಿರಾ?~ ಎಂಬ ಪ್ರಶ್ನೆಗೆ, `ಸೂಕ್ತವೆನಿಸಿದ ಕ್ರಮ ಕೈಗೊಳ್ಳುವ ಹಕ್ಕು ನನಗಿದೆ~ ಎಂದು ಅವರು ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT