ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಅಂಗಳದಲ್ಲಿ ಸೈಕಲ್, ಛತ್ರಿ ಸೌಲಭ್ಯ

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಅರಮನೆ ಆಡಳಿತ ಮಂಡಳಿಯು, `ಸೈಕಲ್ ಸವಾರಿ~ ವ್ಯವಸ್ಥೆ ಕಲ್ಪಿಸಿದೆ.

ಇನ್ನು ಮುಂದೆ ಪ್ರವಾಸಿಗರು ಅರಮನೆ ಅಂಗಳದಲ್ಲಿ ಸ್ವಚ್ಛಂದವಾಗಿ `ಸೈಕಲ್~ ತುಳಿಯಬಹುದಾಗಿದೆ. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ 72 ಎಕರೆ ವಿಶಾಲ ಪ್ರದೇಶದಲ್ಲಿದೆ. ಅರಮನೆ ಆವರಣದಲ್ಲಿ 12 ಪ್ರಮುಖ ದೇವಸ್ಥಾನಗಳಿವೆ. ಪ್ರವಾಸಿಗರ ಸಮಯ ಉಳಿಸಲು ಹಾಗೂ ಸುಲಭವಾಗಿ ಓಡಾಡಲು ಅನುಕೂಲ ಕಲ್ಪಿಸುವ ಉದ್ದೇಶದಿಂದ 50 ಸಾವಿರ ರೂಪಾಯಿ ವೆಚ್ಚದಲ್ಲಿ 10 ಸೈಕಲ್ ಹಾಗೂ ಬಣ್ಣದ ಛತ್ರಿಗಳನ್ನು ಅರಮನೆ ಆಡಳಿತ ಮಂಡಳಿ ಖರೀದಿಸಿದೆ. ಇವುಗಳನ್ನು ಪ್ರವಾಸಿಗರಿಗೆ ಉಚಿತವಾಗಿ ನೀಡುತ್ತಿದೆ.

ಅಂಬಾವಿಲಾಸ ಅರಮನೆಗೆ `ತಾಜ್‌ಮಹಲ್~ಗಿಂತಲೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದ್ದು, 2011ರಲ್ಲಿ 30 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೀಗೆ ಭೇಟಿ ನೀಡುವ ಪ್ರವಾಸಿಗರು ಇದುವರೆಗೆ ಅರಮನೆ ಆವರಣವನ್ನು ನಡೆದುಕೊಂಡೇ ವೀಕ್ಷಿಸಬೇಕಾಗಿತ್ತು. ಬಿಸಿಲು, ಮಳೆ ಇದ್ದಾಗ ದೇವಸ್ಥಾನಗಳನ್ನು ನೋಡಲು ಆಗುತ್ತಿರಲಿಲ್ಲ. ಇದರಿಂದ ದೂರದ ಊರಿಂದ ಬರುವ ಪ್ರವಾಸಿಗರು ಅರಮನೆಯ ಒಳಗಿನ ಸೌಂದರ್ಯ ಮಾತ್ರ ಕಣ್ತುಂಬಿಕೊಂಡು ಮರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೈಕಲ್ ಹಾಗೂ ಕೊಡೆಗಳನ್ನು ಪ್ರವಾಸಿಗರಿಗೆ ನೀಡಲು ಮುಂದಾಗಿದೆ.

ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆ ವರೆಗೆ ಸೈಕಲ್ ಹಾಗೂ ಛತ್ರಿಯನ್ನು ಉಚಿತವಾಗಿ ನೀಡಲಾಗುತ್ತದೆ. ಸೈಕಲ್ ಪಡೆಯಲು ಚಾಲನಾ ಪರವಾನಗಿ (ಡಿ.ಎಲ್) ಅಥವಾ ಪಾಸ್‌ಪೋರ್ಟ್ ಕಡ್ಡಾಯವಾಗಿ ಹಾಜರು ಪಡಿಸಬೇಕು. ಈ ದಾಖಲೆ ಇಲ್ಲದಿದ್ದಲ್ಲಿ ರೂ 500  ಠೇವಣಿ ಇಡಬೇಕು. ಈ ಹಣ ಹಾಗೂ ವಸ್ತುಗಳನ್ನು ಸೈಕಲ್ ಹಿಂದಿರುಗಿಸಿದ ಬಳಿಕ ಮರಳಿಸಲಾಗುತ್ತದೆ.

ಪ್ರವಾಸಿಗರು ಸೈಕಲ್ ಏರಿ ಅರಮನೆ ಆವರಣದ ಕೋಡಿ ಭೈರವ, ಕೋಡಿ ಸೋಮೇಶ್ವರ, ತ್ರಿನೇಶ್ವರ, ಲಕ್ಷ್ಮಿನಾರಾಯಣ, ಕೋಟೆ ಆಂಜನೇಯಸ್ವಾಮಿ ಹಾಗೂ ಕಿಲ್ಲೆ ವೆಂಕಟರಮಣಸ್ವಾಮಿ ದೇವಸ್ಥಾನಗಳನ್ನು ವೀಕ್ಷಿಸಬಹುದು. ಅರಮನೆಯ ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸಿ ಪ್ರವೇಶ ದ್ವಾರಗಳ ಸೌಂದರ್ಯ ಸವಿಯಬಹುದು.
ಈ ಕುರಿತು ~ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯಂ, `ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 10 ಸೈಕಲ್, 10 ಛತ್ರಿ ಖರೀದಿಸಲಾಗಿದೆ. ಪ್ರವಾಸಿಗರಿಗೆ ಸೈಕಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸೈಕಲ್ ಖರೀದಿಸಲಾಗುವುದು. ಒಬ್ಬರು ಒಂದೂವರೆಯಿಂದ ಎರಡು ಗಂಟೆ ಸೈಕಲ್ ಬಳಸಬಹುದು~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT