ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಕುಶಲ ಎಂದು ಪರಿಗಣಿಸದಿರಿ

Last Updated 16 ಫೆಬ್ರುವರಿ 2011, 10:15 IST
ಅಕ್ಷರ ಗಾತ್ರ

ಕಾರವಾರ: ಬಿಲ್ ಕಲೆಕ್ಟರ್, ಕ್ಲರ್ಕ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಅರೆಕುಶಲ ಎಂದು ಪರಿಗಣಿಸಬಾರದು ಹಾಗೂ ಜನಶ್ರೀ ವಿಮಾ ಯೋಜನೆ ಎಲ್ಲ ನೌಕರರಿಗೂ ಜಾರಿಗೊಳಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿ.ಪಂ. ಸಿಇಓ ವಿಜಯಮೋಹನರಾಜ್ ಅವರಿಗೆ ಮನವಿ ಸಲ್ಲಿಸಿತು.

ಇಲ್ಲಿಯ ಮಾಲಾದೇವಿ ಮೈದಾನದಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಜಿ.ಪಂ. ಕಚೇರಿಗೆ ಆಗಮಿಸಿದರು. ಕನಿಷ್ಠ ಕೂಲಿ ನೀಡುವ ಕುರಿತು ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಗ್ರಾಮ ಪಂಚಾಯಿತಿ ನೌಕರರ ಬ್ರಹತ್ ಚಳಚಳಿ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಪರಿಗಣಿಸದೆ ಪಂಚಾಯಿತಿ ನೌಕರರಿಗೆ ವಿಶ್ವಾಸದ್ರೋಹ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಲ್ ಕಲೆಕ್ಟರ್ ಬಡ್ತಿ ಪ್ರಮಾಣವನ್ನು ಶೇ 40ರಿಂದ 70ಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ ಆದರೆ, ಬಡ್ತಿ ಸಂದರ್ಭದಲ್ಲಿ ಸದ್ಯಕ್ಕಿರುವ ಜೇಷ್ಠತಾ ಪಟ್ಟಿಯನ್ನು ಪರಿಗಣಿಸದೇ ಅರ್ಹತಾ ಪರೀಕ್ಷೆಯಲ್ಲಿಗಳಿಸಿರುವ ಅಂಕಗಳನ್ನು ಪರಿಗಣಿಸಬೇಕೆಂಬ ಷರತ್ತು ಹಾಕಿ ಆದೇಶ ಹೊರಡಿಸಲಾಗಿದೆ. ಈ ಕ್ರಮ ಅನ್ಯಾಯದ ಪರಮಾವಧಿಯಾಗಿದೆ ಎಂದು ಪಂಚಾಯಿತಿ ನೌಕರರು ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನದಲ್ಲಿ ಸಂಬಳಕ್ಕೆ ಪ್ರತ್ಯೇಕ ಹೆಡ್ ಮೂಲಕ ವ್ಯವಸ್ಥೆ ಮಾಡುವ ಭರವಸೆಯೂ ಕಾರ್ಯಗತವಾಗಿಲ್ಲ. ಅನುದಾನದಲ್ಲಿ ಶೇ 40ರಷ್ಟು ಹಣವನ್ನು ಪ್ರತ್ಯೇಕ ಹೆಡ್ ಮೂಲಕ ನೀಡುವಂತೆ ಪದೇಪದೇ ಆಗ್ರಹಿಸಿದ್ದೇವೆ. ಈಗಿರುವ ಅನುದಾನದ ಪ್ರಮಾಣವನ್ನು ರೂ. 9ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಸಬೇಕು ಎನ್ನುವ ಹಣಕಾಸು ಆಯೋಗದ ಶಿಫಾರಸು ಜಾರಿಗೆ ಬಾರದೇ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನೌಕರರಿಗೆ ಸಂಬಂಳವೂ ದೊರೆಯುತ್ತಿಲ್ಲ ಎಂದರು.

ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಅಪರೇಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ತೀವ್ರ ಶೋಷಣೆ ಮಾಡಲಾಗುತ್ತಿದೆ. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಗ್ರಾಮ ಪಂಚಾಯಿತಿಗಳಿಂದಲೇ ಈ ನೌಕರರ ನೇಮಕ ಆಗಬೇಕಿದೆ. ಕಂಪ್ಯೂಟರ್ ನೌಕರರ ವರ್ಗವನ್ನು ಕನಿಷ್ಠ ಶೆಡ್ಯೂಲ್‌ನಲ್ಲಿ ಸೇರಿಸಿ ಕುಶಲ ಶ್ರೇಣಿಯ ಸಂಬಂಳ ನಿಗದಿಪಡಿಸಬೇಕು ಎಂದು ನೌಕರರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಮೋಹನರಾಜ್ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುಭಾಷ್ ಕೊಪ್ಪಿಕರ, ಪ್ರಧಾನ ಕಾರ್ಯದರ್ಶಿ ಮುತಾ ಪ್ರಜಾರಿ ಹಾಗೂ ಖಜಾಂಚಿ ಗಣಪತಿ ಭಾಗತ್ವ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT