ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೆ ನಿಂತ ಕಾಮಗಾರಿ-ತಪ್ಪದ ಕಿರಿಕಿರಿ

Last Updated 17 ಡಿಸೆಂಬರ್ 2012, 20:10 IST
ಅಕ್ಷರ ಗಾತ್ರ

ಯಲಹಂಕ: ಹೆಣ್ಣೂರು ರಿಂಗ್ ರಸ್ತೆಯಿಂದ ಹೆಣ್ಣೂರು ಬಸ್ ನಿಲ್ದಾಣದವರೆಗಿನ (ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ) ಮುಖ್ಯರಸ್ತೆಯಲ್ಲಿ  ಹೊಂಡಗಳು ನಿರ್ಮಾಣವಾಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.    

ಹೆಣ್ಣೂರು ತಿರುವಿನಿಂದ ಬಾಗಲೂರು ಮಾರ್ಗವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯರಸ್ತೆಯಲ್ಲಿ ನಿತ್ಯವೂ  ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಹೆಣ್ಣೂರು ರಿಂಗ್ ರಸ್ತೆಯಿಂದ ಬಸ್ ನಿಲ್ದಾಣದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

`ರಸ್ತೆ ಅಭಿವೃದ್ಧಿ ನೆಪದಲ್ಲಿ ಹಳೆಯ ಒಳಚರಂಡಿಯನ್ನು ಮುಚ್ಚಲಾಯಿತು. ಹೊಸದಾಗಿ ಚರಂಡಿ ನಿರ್ಮಾಣ ಮಾಡದ ಪರಿಣಾಮ ಒಳಚರಂಡಿ ಕೊಳವೆ ಮಾರ್ಗ ಒಡೆದು ಕೊಳಚೆನೀರು ರಸ್ತೆಯಲ್ಲೇ ಹರಿಯುತ್ತಿದೆ. ಮಳೆ ಬಂದ ಸಂದರ್ಭದಲ್ಲಿ ರಸ್ತೆ ಕೆರೆಯಂತಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಿ ನಿಧಾನಗತಿಯಲ್ಲಿ ವಾಹನಗಳು ಸಂಚರಿಸುವುದರಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಗಿದೆ' ಎಂದು ಹೆಣ್ಣೂರು ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎನ್. ಮುನಿರಾಜು ದೂರಿದರು. 

`ರಸ್ತೆ ಅವ್ಯವಸ್ಥೆಯ ಬಗ್ಗೆ ಮುಖ್ಯ ಎಂಜಿನಿಯರ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ನಿಯಂತ್ರಣ ಕೊಠಡಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಯಾವಾಗ ಆರಂಭವಾಗುತ್ತದೋ ಗೊತ್ತಿಲ್ಲ. ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿದರೆ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಅನುಭವಿಸುತ್ತಿರುವ ನರಕಯಾತನೆ ತಪ್ಪಲಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

`ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಿಂಗ್‌ರಸ್ತೆಯಲ್ಲಿ ಸುರಂಗಮಾರ್ಗ ಮತ್ತು ಮೇಲ್ಸೇತುವೆ ಕಾಮಗಾರಿ ಆರಂಭವಾಗಿ 2 ವರ್ಷಗಳು ಕಳೆದಿದ್ದು, ಸುರಂಗಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಮೇಲ್ಸೇತುವೆ ಪಕ್ಕದಲ್ಲಿ ಏಳು ಅಡಿಗಳಷ್ಟು ಅಗಲದ ರಸ್ತೆ ಇದೆ. ಮಳೆ ಬಂದಾಗ ಚರಂಡಿಯಲ್ಲಿ ನೀರು ಹರಿಯಲು ಜಾಗವಿಲ್ಲದೆ ರಸ್ತೆಯೆಲ್ಲ ಕೆಸರಿನ ಗದ್ದೆಯಂತಾಗಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ನಡೆಸಬೇಕಾಗಿದೆ. ಜತೆಗೆ ಧೂಳಿನ ಸಮಸ್ಯೆಯೂ ಇದೆ' ಎಂದು ಸಂಘದ ಅಧ್ಯಕ್ಷ ಭಕ್ತವತ್ಸಲಂ ಅಳಲು ತೋಡಿಕೊಂಡರು.

`ರಸ್ತೆ ಅಗಲವಿದ್ದರೂ ಪ್ರಯೋಜನವಾಗುತ್ತಿಲ್ಲ'
ನಾಗವಾರ, ಲಿಂಗರಾಜಪುರ, ಬಾಗಲೂರು ಹಾಗೂ ಕೆ.ಆರ್.ಪುರ ಮಾರ್ಗಗಳಿಂದ ಬರುವ ವಾಹನಗಳು ಹೆಣ್ಣೂರು ವೃತ್ತದ ಬಳಿ ಬಂದು ಇತರೆ ಕಡೆಗಳಿಗೆ ಸಾಗುವುದರಿಂದ ಇಲ್ಲಿ ಸಂಚಾರದ ದಟ್ಟಣೆ ಹೆಚ್ಚಾಗಿದೆ. ಹೆಣ್ಣೂರು ಮುಖ್ಯರಸ್ತೆಯಿಂದ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

ಎಷ್ಟೇ ಬಾರಿ ಮಣ್ಣಿನಿಂದ ಹೊಂಡ ಮುಚ್ಚಿದರೂ ಪ್ರಯೋಜನವಾಗುತ್ತಿಲ್ಲ. ಕಾಲೇಜಿನ ಬಳಿ ಒಳಚರಂಡಿ ಕೊಳವೆ ಸೋರಿಕೆಯಾಗುವುದರಿಂದ ಹಾಗೂ ಮಳೆ ಬಂದ ಸಂದರ್ಭದಲ್ಲಿ ಮತ್ತೆ ಗುಂಡಿಗಳು ತೆರೆದುಕೊಳ್ಳುತ್ತವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ. ಅಗಲವಾದ ರಸ್ತೆಯಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.
-ಉಮೇಶ್,  ಸಂಚಾರ ಇನ್‌ಸ್ಪೆಕ್ಟರ್, ಬಾಣಸವಾಡಿ


`ಶೀಘ್ರ ಹೊಂಡ ಮುಚ್ಚಿಸುವ ಕಾಮಗಾರಿ'
ಈ ಹಿಂದೆ ಬ್ಯಾಟರಾಯನಪುರ ವಲಯದ ರಸ್ತೆ ವಿಸ್ತರಣೆಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಈ ಹಿಂದಿನ ಗುತ್ತಿಗೆದಾರರೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ವಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಪತ್ರವನ್ನೂ ಬರೆಯಲು ತೀರ್ಮಾನಿಸಲಾಗಿದೆ. ಅವರು ಕಾಮಗಾರಿ ಕೈಗೊಳ್ಳುವುದು ವಿಳಂಬವಾದರೆ ಬಿಬಿಎಂಪಿ ವತಿಯಿಂದ ಮುಂದಿನ ವಾರ ಹೊಂಡಗಳನ್ನು ಮುಚ್ಚಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
-ಜಯಶಂಕರ ರೆಡ್ಡಿ, ಕಾರ್ಯನಿರ್ವಾಹಕ ಎಂಜಿನಿಯರ್,  ಬಿಬಿಎಂಪಿ (ಪೂರ್ವ ವಲಯ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT