ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಲ್ಲಿ ಅಬ್ಬರಿಸಿದ ಮಳೆರಾಯ

Last Updated 1 ಆಗಸ್ಟ್ 2013, 10:43 IST
ಅಕ್ಷರ ಗಾತ್ರ

ಸೋಮವಾರಪೇಟೆ: ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ತಾಲ್ಲೂಕಿನಾದ್ಯಂತ ಬುಧವಾರದಿಂದ ಬಿರುಸುಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ತಾಲ್ಲೂಕಿನಲ್ಲಿ ಮಳೆ ಜೋರಾಗಿದ್ದು, ಗಾಳಿಯೂ ತೀವ್ರವಾಗಿದ್ದು ಜನ ಪರದಾಡುವಂತಾಗಿದೆ. ಕೆಲ ಮರಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಗಾಳಿ ಮಳೆಗೆ ಹಲವು ಮನೆಗಳು ಹಾನಿಗೊಳಗಾಗಿವೆ. ಕುಶಾಲನಗರ ಸೋಮವಾರಪೇಟೆ ರಸ್ತೆಯ ಬೇಳೂರು ಬಾಣೆಯ ಸಮೀಪ, ಶನಿವಾರಸಂತೆ ಕೊಡ್ಲಿಪೇಟೆ ರಸ್ತೆಯ ಅವರೆದಾಳು ಗ್ರಾಮದ ಬಳಿ, ಮಡಿಕೇರಿ ಸೋಮವಾರಪೇಟೆ ರಸ್ತೆಯ ಕೋವರ್‌ಕೊಲ್ಲಿ ಹಾಗೂ ಕೆಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದೆ.

ಸಮೀಪದ ಯಡೂರು ಗ್ರಾಮದ ದೇವಕ್ಕಿ ಎಂಬವರ ವಾಸದ ಮನೆಯ ಗೋಡೆಯ ಒಂದು ಪಾರ್ಶ್ವ ಕುಸಿದು ಮನೆಗೆ ಹೊದಿಸಿದ್ದ 5 ಶೀಟ್‌ಗಳು ಒಡೆದು ಹೋಗಿದ್ದು, ರೂ 30 ಸಾವಿರ ನಷ್ಟ ಸಂಭವಿಸಿದೆ. ಅದೇ ಗ್ರಾಮದ ಧರ್ಮಪ್ಪ ಎಂಬವರ ಮನೆಯ ಕಾಂಪೌಂಡ್ ಕುಸಿದು ನಷ್ಟವಾಗಿದೆ. ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ಬಿ.ಬಿ. ರಫೀಕ್ ಎಂಬವರ ಮನೆಯ ಗೋಡೆಯ ಒಂದು ಪಾರ್ಶ್ವ ಕುಸಿದು ರೂ 15 ಸಾವಿರ ನಷ್ಟವಾಗಿದೆ, ಗರಗಂದೂರಿನ ಜನಾರ್ದನ ಎಂಬವರ ಮನೆಯ ಮೇಲೆ ಮರವೊಂದು ಬಿದ್ದಿದ್ದು, ಗೋಡೆ ಹಾಗೂ ಹಂಚಿಗೆ ಹಾನಿಯಾಗಿದ್ದು, ರೂ 30 ಸಾವಿರ ನಷ್ಟವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 70.6, ಶನಿವಾರಸಂತೆಗೆ 47.6 ಮಿ.ಮೀ, ಕೊಡ್ಲಿಪೇಟೆಗೆ 45.2, ಸೋಮವಾರಪೇಟೆ ಕಸಬಾಗೆ 40.2, ಕುಶಾಲನಗರಕ್ಕೆ 3.4, ಹಾಗೂ ಸುಂಟಿಕೊಪ್ಪಕ್ಕೆ 11 ಮಿ.ಮೀ. ಮಳೆಯಾಗಿದೆ.

ರಭಸದ ಮಳೆ
ಗೋಣಿಕೊಪ್ಪಲು: ಒಂದು ಕಡೆಗೆ ಬಿಸಿಲಿನೊಂದಿಗೆ ತುಂತುರು ಮಳೆ, ಮತ್ತೊಂದು ಕಡೆಗೆ ರಭಸದ ಗಾಳಿಯೊಂದಿಗೆ ಧಾರಾಕಾರ ಮಳೆ . ಇದು ದಕ್ಷಿಣ ಕೊಡಗಿನಲ್ಲಿ  ಬುಧವಾರ ಕಂಡು ಬಂದ ವಿಶಿಷ್ಟ ವಾತಾವರಣ.

ಬಿ. ಶೆಟ್ಟಿಗೇರಿ, ಹುದಿಕೇರಿ, ಪೊನ್ನಂಪೇಟೆ, ಬಾಳೆಲೆ ಮೊದಲಾದ ಭಾಗಗಳಿಗೆ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದರೆ ಕೇವಲ 5 ಕಿಮೀ ದೂರದಲ್ಲಿರುವ ಗೋಣಿಕೊಪ್ಪಲಿಗೆ ಎಳೆ ಬಿಸಿಲು ಕಾಯುತ್ತಿತ್ತು. ಪೊನ್ನಂಪೇಟೆ, ಹುದಿಕೇರಿ ಭಾಗದಲ್ಲಿ ಬೆಳಿಗ್ಗೆ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಛತ್ರಿ ಹಿಡಿದು ನಡುಗುತ್ತ ಶಾಲೆಗೆ ಹೋಗುತ್ತಿದ್ದರೆ, ಗೋಣಿಕೊಪ್ಪಲು ಭಾಗದಲ್ಲಿ ಎಳೆ ಬಿಸಿಲಿಗೆ ಮೈ ಒಡ್ಡಿ ನಗುತ್ತ ಸಾಗುತ್ತಿದ್ದರು.

ಬೆಟ್ಟ ಸಾಲುಗಳನ್ನು ಒಳಗೊಂಡ ಬಿ. ಶೆಟ್ಟಿಗೇರಿ ದಕ್ಷಿಣ ಕೊಡಗಿನ ಮಳೆಯ ಗೂಡು ಎನ್ನಿಸಿಕೊಂಡಿದೆ.

ಈ ಸಾಲಿನಲ್ಲಿಯೇ ಬರುವ ಹುದಿಕೇರಿ ಭಾಗಕ್ಕೂ ಯಥೇಚ್ಛ ಮಳೆ ಬೀಳುತ್ತಿದೆ.  ಮುಂದುವರಿದ ಪೊನ್ನಂಪೇಟೆ, ಬಾಳೆಲೆಗೂ ಮಳೆಯಾಗುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿದ್ದು ಹುದಿಕೇರಿ, ಬಿ. ಶೆಟ್ಟಿಗೇರಿ ಭಾಗಗಳಲ್ಲಿ  ಶೀತಕ್ಕೆ ಗಿಡದಲ್ಲಿ ಕಾಫಿ ಬೀಜ ಉದುರತೊಡಗಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ತಿತಿಮತಿ ಭಾಗದಲ್ಲಿ ಕಾಫಿಗೆ ಹದವಾದ ಮಳೆಯಾಗಿದೆ. ಆದರೆ ಕಾಫಿ  ಫಸಲು ಕಡಿಮೆ ಇದೆ. ಭತ್ತದ ಕೃಷಿಗೆ ಮಳೆ ಸಾಕಾಗುತ್ತಿಲ್ಲ. ಮುಂದೆ  ನಿರಂತರ ಮಳೆ ಬಿದ್ದರೆ ಮಾತ್ರ ಗದ್ದೆ  ಭತ್ತಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ತಿತಿಮತಿಯ ಕಾಫಿ ಬೆಳೆಗಾರ ಸಣ್ಣುವಂಡ ಚಂಗಪ್ಪ.

ಮತ್ತೆ ಬಿರುಸುಗೊಂಡ ಮಳೆ
ಮಡಿಕೇರಿ: ಕೊಡಗಿನಲ್ಲಿ ಬುಧವಾರ ಸಾಧಾರಣ ಮಳೆ ಸುರಿದಿದೆ. ಕಳೆದೆರಡು ದಿನಗಳಿಂದ ಕೊಂಚ ಇಳಿಮುಖವಾದ ಮಳೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪುನಃ ಬಿರುಸುಗೊಂಡಿದೆ.

ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ಕುಟ್ಟ ಮತ್ತು ಟಿ. ಶೆಟ್ಟಿಗೇರಿ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಬಸವರಾಜು ಆದೇಶಿಸಿದ್ದಾರೆ.

ಮಡಿಕೇರಿ ಹೊರತುಪಡಿಸಿದರೆ ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ.
ಮಳೆ ಹಾನಿ: ಸುಂಟಿಕೊಪ್ಪ ಹೋಬಳಿಯ ಗರಗಂದೂರು ಗ್ರಾಮದ ಜನಾರ್ದನ ಅವರ ಮನೆಯ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಬುಧವಾರ 8 ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಗಳಲ್ಲಿ 40.88 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 7.12 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2,284.68 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 944.9 ಮಿ.ಮೀ. ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 33.6 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 52.7 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 36.33 ಮಿ.ಮೀ. ಮಳೆ ಸುರಿದಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 13.2 ಮಿ.ಮೀ., ನಾಪೋಕ್ಲು 41.4 ಮಿ.ಮೀ., ಸಂಪಾಜೆ 7.8 ಮಿ.ಮೀ., ಭಾಗಮಂಡಲ 72 ಮಿ.ಮೀ., ವೀರಾಜಪೇಟೆ ಕಸಬಾ 39.6 ಮಿ.ಮೀ., ಹುದಿಕೇರಿ 44.2 ಮಿ.ಮೀ.,

ಶ್ರಿಮಂಗಲ 160.2 ಮಿ.ಮೀ., ಪೊನ್ನಂಪೇಟೆ 34.2 ಮಿ.ಮೀ., ಅಮ್ಮತ್ತಿ 23 ಮಿ.ಮೀ., ಬಾಳಲೆ 15 ಮಿ.ಮೀ., ಸೋಮವಾರಪೇಟೆ ಕಸಬಾ 40.2 ಮಿ.ಮೀ., ಶನಿವಾರಸಂತೆ 47.6 ಮಿ.ಮೀ., ಶಾಂತಳ್ಳಿ 70.6 ಮಿ.ಮೀ., ಕೊಡ್ಲಿಪೇಟೆ 45.2 ಮಿ.ಮೀ., ಕುಶಾಲನಗರ 3.4 ಮಿ.ಮೀ., ಸುಂಟಿಕೊಪ್ಪ 11 ಮಿ.ಮೀ. ಮಳೆಯಾಗಿದೆ. 

ಹಾರಂಗಿ ಜಲಾಶಯ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2,854.75 ಅಡಿಗಳು, ಕಳೆದ ವರ್ಷ ಇದೇ ದಿನ 2,853.5 ಅಡಿ ಮಳೆ ಸುರಿದಿದೆ.

ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ 6.6 ಮಿ.ಮೀ. ಕಳೆದ ವರ್ಷ ಇದೇ ದಿನ 0.0 ಮೀ.ಮೀ, ಇಂದಿನ ನೀರಿನ ಒಳ ಹರಿವು 4,271 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2,866 ಕ್ಯೂಸೆಕ್.
ಇಂದಿನ ನೀರಿನ ಹೊರ ಹರಿವು ನದಿಗೆ 9,200 ಕ್ಯೂಸೆಕ್, ನಾಲೆಗೆ 658ಕ್ಯೂಸೆಕ್.

ಗೋಡೆ ಕುಸಿದು ಅಪಾರ ನಷ್ಟ
ಶನಿವಾರಸಂತೆ: ಹೋಬಳಿಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಹಲವು ಮನೆಗಳಿಗೆ ಹಾನಿ ಉಂಟಾಗಿದೆ. ಪಟ್ಟಣದ ಗುಂಡೂರಾವ್ ಬಡಾವಣೆಯ ಬೀಬಿಜಾನ್ ಅವರ ಮನೆಯ ಗೋಡೆ ಕುಸಿದು ರೂ 15 ಸಾವಿರ ನಷ್ಟವಾಗಿದೆ.

ಗೋಡೆ ಕುಸಿತದಿಂದಾಗಿ ಮಾಲತಿ ಅವರಿಗೆ ರೂ 12 ಸಾವಿರ, ಎಡೆಹಳ್ಳಿಯ ವೇದಮೂರ್ತಿ ಅವರಿಗೆ ರೂ 15 ಸಾವಿರ, ಹಿತ್ಲಕೇರಿ ಗ್ರಾಮದ ಪುಟ್ಟೇಗೌಡ ಅವರಿಗೆ ರೂ 10 ಸಾವಿರ, ಬಡಬನ ಹಳ್ಳಿಯ ಬಾಲಚಂದ್ರ ಅವರಿಗೆ ರೂ 5 ಸಾವಿರ, ಹೊಸಗುತ್ತಿ ಗ್ರಾಮದ ಈರಮ್ಮ ಅವರಿಗೆ (ಕೊಟ್ಟಿಗೆ ಆದ ಹಾನಿಯೂ ಸೇರಿ) ರೂ 25 ಸಾವಿರ, ಮಾಲಂಬಿ ಗ್ರಾಮದ ಕಲ್ಯಾಣಿ ಅವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಕುಸಿದು ರೂ 5 ಸಾವಿರ ನಷ್ಟ ಸಂಭವಿಸಿದೆ.

ಗೋಡೆ ಕುಸಿತದಿಂದಾಗಿ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗುಂದ ಗ್ರಾಮದ ಅಕ್ಕಣ್ಣಿ ಅವರಿಗೆ ರೂ 5 ಸಾವಿರ, ಲೋಕೇಶ್ ಕುಮಾರ್ ಅವರಿಗೆ ರೂ 10 ಸಾವಿರ, ಗೌಡಳ್ಳಿ ಗ್ರಾಮದ ಗಣೇಶ್ ಮತ್ತು ಜಗದೀಶ್ ಅವರಿಗೆ ತಲಾ ರೂ 2 ಸಾವಿರ, ಕೂಗೂರು ಗ್ರಾಮದ ವಿಜಯಕುಮಾರ್ ಅವರಿಗೆ ರೂ 10 ಸಾವಿರ ಹಾಗೂ ನಂದಿಗುಂದ ಗ್ರಾಮದ ಧರ್ಮಪ್ಪ ಅವರಿಗೆ ರೂ 5 ಸಾವಿರ ನಷ್ಟ ಸಂಭವಿಸಿದೆ. ಇವರೆಲ್ಲರೂ ಪರಿಹಾರ ಕೋರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗರಾದ ನಾಗರಾಜ್, ರಾಮೆಗೌಡ ಹಾಗೂ ರೂಪಶ್ರೀ ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT