ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನಗಳ ಲೋಕ...

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾನು, ಕಡತಗಳ ನಮೂದಿನ ಪ್ರಕಾರ ಬ್ರಾಹ್ಮಣ ಜಾತಿಗೆ ಸೇರಿದವಳು. ಆದರೆ ನಮ್ಮ ಸಂಸಾರ ನಮ್ಮ ತಂದೆಯವರ ಕಾರಣವಾಗಿ ಮೂರಾಬಟ್ಟೆಯಾಗಿ ಹೋದಮೇಲೆ, ನನಗೆ ನನ್ನ ದುಡಿಮೆಯೇ ಶ್ರೀರಕ್ಷೆಯಾಗಿದೆ. ಜಾತಿಯ ಬಗ್ಗೆ ಜಿಗುಪ್ಸೆ ಬಂದು ಹೋಗಿದೆ. ಬಲು ಶಠ ಸಂಪ್ರದಾಯಸ್ಥರಾದ ನಮ್ಮಪ್ಪ, ನನ್ನಮ್ಮ ನನ್ನನ್ನು ಹೆತ್ತ ಮೇಲೆ ‘ನನ್ನಮ್ಮ ಕುರೂಪಿ’ ಎಂದು ತಗಾದೆ ತೆಗೆದು ಮನೆಯಿಂದ ಹೊರಹಾಕಿದರಂತೆ. ನಮ್ಮಮ್ಮ ಅವರಿವರ ಮನೆಯಲ್ಲಿ ಕಸಮುಸುರೆ ಮಾಡಿಕೊಂಡು ನನ್ನನ್ನು ಓದಿಸಿದಳು. ಒಂದು ಹೊತ್ತು ಉಂಡು ಬೆಳೆಯುತ್ತಿದ್ದ ನನ್ನನ್ನು ಹೋರಿಯ ಹಾಗೆ ಹಾಯುವ ಗಂಡಸರಿಂದ ಕಾಪಾಡುವ ಕಷ್ಟದಲ್ಲಿಯೇ ಆಕೆ ನನಗೆ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗುವಷ್ಟು ಓದಿಸಿದರು.

ನಾನು ಕೆಲಸಕ್ಕೆ ಸೇರಿ ಎರಡು ತಿಂಗಳು. ನಾವಿಬ್ಬರೂ ಎರಡು ಹೊತ್ತು ಊಟ ಮಾಡುವ ಹೊತ್ತಿಗೆ ಆಕೆ ಕ್ಷಯದಿಂದ ತೀರಿಹೋದಳು. ಕ್ಷಯಕ್ಕೆ ಮದ್ದು ಇದೆ ಎಂಬುದೇ ನಮ್ಮ ಪಡಿಪಾಟಲಿನಲ್ಲಿ ನಮಗೆ ತಿಳಿದಿರಲಿಲ್ಲ. ನನ್ನ ಸಂಕಟವನ್ನು ನೋಡಲಾರದೆ ಶೂದ್ರ ಜಾತಿಗೆ ಸೇರಿದ ಸ್ನೇಹಿತರೊಬ್ಬರು ಪೇಪರು ಓದು, ಇಂಟರ್ನೆಟ್ ಬಳಸುವುದನ್ನು ಕಲಿ ಎಂದು ಹುಮ್ಮಸ್ಸು ತುಂಬಿದರು. ಆ ಪ್ರಕಾರ ನಾನು ಈಗ ವಾರಕ್ಕೊಂದು ಸಲ ನಾನು ಕೆಲಸ ಮಾಡುವ ಹಳ್ಳಿಯಿಂದ 30 ಕಿ.ಮೀ. ದೂರದಲ್ಲಿರುವ ತಾಲ್ಲೂಕು ಊರಿಗೆ ಹೋಗಿ  ಪೇಪರು ಓದುವುದು, ಸೈಬರ್ ಕೆಫೆಗೆ ಹೋಗಿ ಇಂಟರ್ನೆಟ್ ನೋಡುವುದು, ಕನ್ನಡದಲ್ಲಿ ಟೈಪು ಮಾಡುವುದು ಕಲಿತಿದ್ದೇನೆ. ಹೀಗೆ ನಾನು ತಮ್ಮ ಪತ್ರಿಕೆಯನ್ನು ಓದುವವಳಾಗಿದ್ದೇನೆ.

ಕೆ.ವಿ.ಅಕ್ಷರ ಎಂಬುವವರು ಬರೆದ ಲೇಖನವನ್ನು ಓದಿದೆ. ಹೆಚ್ಚು ಓದಿಲ್ಲದ ನನಗೆ ಅವರ ಲೇಖನ ಪೂರ ಅರ್ಥವಾಗಲಿಲ್ಲ. ಆದರೆ ಆ ಲೇಖನದ ಒಂದು ಕಡೆ ಅವರು, ‘ಯಾವುದೇ ಒಂದು ವಿಷಯ ಅವಮಾನ ಎಂಬುದು ನೋಡುವವರ ಭಾವನೆ, ಅಂಥ ಅವಮಾನವನ್ನು ಹೊತ್ತವರಿಗೆ ಹಾಗೆನಿಸುವುದಿಲ್ಲ’ ಎಂಬಂತಹ ಮಾತುಗಳನ್ನು ಬರೆದಿದ್ದಾರೆ. ಅದನ್ನು ಓದಿ ನನಗೆ ತುಂಬಾ ಸಿಟ್ಟು ಬಂತು. ಹಾಗೆಂದರೇನು? ನಾನು, ನನ್ನಮ್ಮ ಅನುಭವಿಸಿದ ಕಷ್ಟಗಳನ್ನು ನಾನು ಬೇರೆಯವರಿಂದ ತಿಳಿದುಕೊಳ್ಳಬೇಕಿಲ್ಲ. ಅದು ದಿನವೂ ನಮ್ಮ ಜೀವನದದಲ್ಲಿ ಹೆಣ ಭಾರದ ಹಾಗೆ ಹೇರಿಕೊಂಡು ಹೈರಾಣಾಗಿಸಿದೆ. ಯಾರಾದರೂ ಆಸರೆ ಇತ್ತರೆ ಅವರ ಬಳಿ ಹೇಳಿಕೊಂಡು ಭಾರ ಕಡಿಮೆ ಮಾಡಿಕೊಳ್ಳಬೇಕು, ಇಂಥ ಗತಿ ಯಾವ ಹೆಣ್ಣಿಗೂ ಬರದ ಹಾಗೆ ಏನಾದರೂ ಮಾಡುವವರು ಈ ಪ್ರಪಂಚದಲ್ಲಿ ಇಲ್ಲವೇ ಎಂದು ಬೇಡಬೇಕು ಎಂದು ನನಗೆ ಯಾವಾಗಲೂ ಅನಿಸುತ್ತದೆ.

ತಿಳುವಳಿಕೆ ಬಂದಾಗಿನಿಂದಲೂ, ‘ಏನೇ ಸುಬ್ಬಕ್ಕ, ಅಪ್ಪ ಇದಾನೆ ಅಂತಿ, ಒಂದು ದಿವ್ಸನೂ ನೋಡ್ಲಿಲಲ್ಲೇ, ಮಿಂಡ್ರಿಗುಟ್ಟಿದಿಯಾ?’ ಅಂತ ಮಾತು ಕೇಳಿ ನನಗೆ ಥೂ ಯಾಕಾದ್ರು ಬದುಕಬೇಕು ಅನಿಸುತ್ತಿತ್ತಲ್ಲ ಅದು ಏನು? ಅವಮಾನವೋ ಅಥವ ನನ್ನಂಥವರು ಕೇಳಿಸಿಕೊಂಡು ತಲೆ ತಗ್ಗಿಸಿ ಸುಮ್ಮನಿರುವ ರೀತಿಯೋ- ಶಬ್ದಗಳು ನನಗೆ ಗೊತ್ತಿಲ್ಲ. ಆದರೆ ಅದನ್ನು ಎಂದಿಗೂ ಸಹಿಸಿಕೊಳ್ಳಲಿಕ್ಕೆ ಆಗುತ್ತಿರಲಿಲ್ಲ. ಇಂತಹುದೇ ಕಥೆಗಳನ್ನು ನನ್ನ ಜೊತೆ ಕೆಲಸ ಮಾಡುವ ದಲಿತಳಾದ ಸ್ನೇಹಿತೆಯೂ ಹೇಳುತ್ತಾಳೆ. ಅದರ ಕೂಡ, ದಲಿತರ ಸಂಘ ನಮ್ಮೂರಲ್ಲಿದ್ದಾಗ ಹೀಂಗೆ ಯಾವ ಮಗನು ಮಾತಾಡಂಗಿರ್ಲಿಲ್ಲ ಅಂತ ಸಿಟ್ಟು ಮಾಡ್ತಾಳೆ. ಅಕ್ಷರ ಅವರ ಲೇಖನ ಓದಿ ಅವಳಿಗೆ ಅನಿಸಿದ್ದನ್ನು ಹೇಳಿದೆ. ಅವಳು ಬರಿದು ಕಳಿಸು ಅಂದಳು. ಸರಿಯೊ-ತಪ್ಪೋ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT