ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳ ದೇಹ ಅವನದಲ್ಲ; ಅವಳದೇ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯವೊಂದರಲ್ಲಿ ಬೋಧಿಸುತ್ತಿದ್ದ ಆಕೆಗೆ, ಪುರುಷ ಸಹೋದ್ಯೋಗಿಗಳು `ಸಿಂಹ~, `ಶಕ್ತಿ~ ಅಂತ ಕಿಚಾಯಿಸಿಯೇ ಇತರರಿಗೆ ಪರಿಚಯಿಸುತ್ತಿದ್ದರು. ಮಹಿಳಾ ಪರವಾದ ನಿಲುವುಗಳಿಂದಾಗಿ ಆಕೆಗೆ ಈ ಬಿರುದುಗಳು ಪುಕ್ಕಟೆಯಾಗಿ ದೊರೆತಿದ್ದವು. ಆದರೆ, ಸಹೋದ್ಯೋಗಿಗಳ ಮಾತಿಗೆ ಸೊಪ್ಪು ಹಾಕದ ಆಕೆ ಅವರ ಕಿಚಾಯಿಸುವಿಕೆಯ ಬಿರುದುಗಳನ್ನೇ ತಿದ್ದಿ `ನಾನು ಸಿಂಹ ಅಲ್ಲ ಸಿಂಹಿಣಿ, ಅಫ್‌ಕೋರ್ಸ್ ನಾನು ಶಕ್ತಿ~ ಎಂದು ಹೇಳುತ್ತಲೇ ವಿಶ್ವವಿದ್ಯಾಲಯದಲ್ಲಿ `ಮಹಿಳಾ ಅಧ್ಯಯನ~ ವಿಭಾಗ ಆರಂಭಿಸಿದರು.

ಮೊದಮೊದಲು ಬರೀ ಹುಡುಗಿಯರಷ್ಟೇ ಕೋರ್ಸ್‌ಗೆ ಸೇರುತ್ತಿದ್ದ ಆ ವಿಭಾಗದಲ್ಲೆಗ ಪುರುಷರು ಕೂಡಾ ಉನ್ನತ ಸಂಶೋಧನೆ ಕೈಗೊಂಡಿದ್ದಾರೆ. ಅವರಿಗೆಲ್ಲಾ ಪ್ರೇರಕ ಶಕ್ತಿ ಅದೇ ಸಿಂಹಿಣಿ!.
ಹೌದು ಅವರು ಡಾ.ರಂಜನಾ ಹರೀಶ್.


ಗುಜರಾತ್‌ನ ಅಹಮದಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ರಂಜನಾ ಮನಸ್ಸು ಮಾಡಿದ್ದರೆ, ವಿದೇಶಿ ವಿವಿಗಳಲ್ಲಿ ಪ್ರಾಧ್ಯಾಪಕಿಯಾಗಿಯೋ ಅಥವಾ ಕಲಾವಿದೆಯಾಗಿಯೋ (ಅವರು ಹಿಂದೂಸ್ತಾನಿ ಸಂಗೀತ ಗಾಯಕಿ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ) ಜೀವನ ಕಳೆಯಬಹುದಿತ್ತು.

ಆದರೆ, ವಿದೇಶದಲ್ಲಿ ಓದುತ್ತಿದ್ದ ದಿನಗಳಲ್ಲಿ ಅಲ್ಲಿನ ಮಹಿಳೆಯರ ಸ್ವತಂತ್ರ ಆಲೋಚನೆ, ವ್ಯಕ್ತಿತ್ವದಿಂದ ಪ್ರೇರಿತರಾಗಿದ್ದ ಅವರಿಗೆ, ತಾಯ್ನೆಲ ಭಾರತದಲ್ಲಿ ಅದಕ್ಕೆ ಪಕ್ಕಾ ತದ್ವಿರುದ್ಧ ಪರಿಸರ ಕಂಡು ಬೇಸರ ಉಂಟಾಗುತ್ತಿತ್ತು.

ಸ್ನಾತಕೋತ್ತರ ಪದವಿ, ಪಿಎಚ್.ಡಿ ಪೂರೈಸಿದ ಅವರು ತವರುಮನೆ ಗುಜರಾತ್‌ಗೆ ವಾಪಸ್ ಹೋಗುವ ಮಾತನಾಡಿದಾಗ, ಅವರ ವಿಭಾಗದ ಮುಖ್ಯಸ್ಥ ಹಣ ಮತ್ತು ಅವಕಾಶದ ಮಹಾಪೂರಗಳ ಆಮಿಷ ಒಡ್ಡಿದ್ದರು. ಆದರೆ, ಹೆಸರು, ಹಣದ ಪ್ರಸಿದ್ಧಿಗೆ ಜಗ್ಗದ ರಂಜನಾ ಅವರ ಮನಸ್ಸಿನಲ್ಲಿ ಸದಾ ಕಾಡಿದ್ದು ಭಾರತದ ಗ್ರಾಮೀಣ ಮಹಿಳೆ. ಸ್ವಂತ ನೆಲದಲ್ಲಿ ತನ್ನಂತೆಯೇ ಮಹಿಳೆಯರು ಸಬಲವಾಗಿ ಕಾಲೂರಬೇಕು, ಅದಕ್ಕೆ ನನ್ನ ಓದು ಪೂರಕವಾಗಬೇಕು ಎಂಬ ಹಂಬಲದಿಂದ ವಿದೇಶದಿಂದ ವಾಪಸಾದ ಅವರು ಗುಜರಾತ್ ವಿವಿಯಲ್ಲಿ ಪ್ರಪ್ರಥಮ ಮಹಿಳಾ ಅಧ್ಯಯನ ವಿಭಾಗದ ಸ್ಥಾಪನೆಗೆ ನಾಂದಿ ಹಾಡಿದರು.
 
ಹತ್ತು ಕೃತಿಗಳನ್ನು ಬರೆದಿರುವ ರಂಜನಾ, ಇಂಡಿಯನ್ ಅಸೋಸಿಯೇಷನ್ ಫಾರ್ ಕೆನಡಿಯನ್ ಸ್ಟಡೀಸ್‌ನ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಎಟಿಸಿ ಅಧಿಕಾರಿಗಳಿಗೆ ಇಂಗ್ಲಿಷ್ ತರಬೇತಿಗಾರ್ತಿಯಾಗಿಯೂ ಕೆಲಸ ಮಾಡಿರುವ ಅವರು, ದೆಹಲಿ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸದಸ್ಯೆಯೂ ಹೌದು. 2009ರಲ್ಲಿ ಜಿನೀವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಲೀಗ್ ಫಾರ್ ಪೀಸ್ ಅಂಡ್ ಫ್ರೀಡಂ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಗುಜರಾತ್‌ನ ಗೋಧ್ರಾ ಹತ್ಯಾಕಾಂಡವೊಂದು `ಡರ್ಟಿ ಪಾಲಿಟಿಕ್ಸ್~ ಎಂದೇ ಆಕ್ರೋಶ ವ್ಯಕ್ತಪಡಿಸುವ ರಂಜನಾ ಹರೀಶ್, ಈಚೆಗೆ ದಾವಣಗೆರೆಯಲ್ಲಿ ನಡೆದ ವಿಚಾರಸಂಕಿರಣವೊಂದಕ್ಕೆ ಆಗಮಿಸ್ದ್ದಿದಾಗ ಅವರೊಂದಿಗೆ  ನಡೆಸಿದ ಆಪ್ತ ಮಾತುಕತೆ ಇಲ್ಲಿದೆ.

* ಭಾರತೀಯ ಸ್ತ್ರೀವಾದ ಸಿದ್ಧಾಂತ ಪಾಶ್ಚಾತ್ಯ ಮೂಲದ ಅನುಕರಣೆ ಅನ್ನುವ ಆರೋಪವಿದೆಯಲ್ಲ?
ಆರೋಪ ಮೇಲ್ನೋಟಕ್ಕೆ ನಿಜ ಎನಿಸಬಹುದು. ಆದರೆ, ಪ್ರಾಯೋಗಿಕ ನೆಲೆಯಲ್ಲಿ ನೋಡಿದರೆ ಇಂದಿನ ಭಾರತದ ಗ್ರಾಮೀಣ ಮಹಿಳೆಯೇ ನಿಜವಾದ ನೆಲೆಯಲ್ಲಿ ಸ್ತ್ರೀವಾದವನ್ನು ಜಾರಿಗೆ ತಂದಿದ್ದಾಳೆ, ಹೇಗೆಂದರೆ ಹಿಂದೆ ಮಹಿಳೆಗೆ ಓದುವ, ಮನೆಯ ಹೊಸಿಲಾಚೆ ಕಾಲಿಡಲು ಸ್ವಾತಂತ್ರ್ಯವಿರಲಿಲ್ಲ.

ಆದರೆ, ಇಂದು ಸಣ್ಣ ಹಳ್ಳಿಯೊಂದರ ಹೆಣ್ಣುಮಗಳು ಕೂಡಾ ತನ್ನ ಮಗಳು ತನ್ನಂತಾಗಬಾರದು. ಆಕೆ ಓದಬೇಕು. ನೌಕರಿ ಹಿಡಿಯಬೇಕು. ನಂತರ ಮದುವೆಯಾಗಬೇಕು. ಮದುವೆಯ ನಂತರವೂ ಕೆಲಸ ಬಿಡಬಾರದು ಎಂಬ ಚಿಂತನೆ ಹೊಂದಿದ್ದಾಳೆ. ಅಷ್ಟೇ ಅಲ್ಲ ಆಕೆ ಪುರುಷನಿಗಿಂತ ಭಿನ್ನವಾಗಿ ತನ್ನನ್ನು ಗುರುತಿಸಿಕೊಳ್ಳಲು ಬಯಸುತ್ತಾಳೆ.
 
ಹಾಗೆ ನೋಡಿದರೆ ಪಾಶ್ಚಾತ್ಯರಲ್ಲಿ ಮೊದಲು ಸಿದ್ಧಾಂತ ರೂಪುಗೊಂಡು ನಂತರ ಪ್ರಾಯೋಗಿಕ ನೆಲೆಯಲ್ಲಿ ಸ್ತ್ರೀವಾದ ಅಭಿವ್ಯಕ್ತವಾಗುತ್ತದೆ. ಆದರೆ, ಭಾರತೀಯ ಮಹಿಳೆ ಸ್ತ್ರೀವಾದದಲ್ಲೇ ಜೀವಿಸಿ, ನಂತರ ತತ್ವ, ಸಿದ್ಧಾಂತದತ್ತ ಗಮನಹರಿಸುತ್ತಾಳೆ. ಹಾಗಾಗಿ, ಬರೀ ತತ್ವ, ಸಿದ್ಧಾಂತ ಎಂದು ಭಾಷಣ ಮಾಡುವ ಸ್ತ್ರೀವಾದಿಗಳಿಗಿಂತ, ಗ್ರಾಮೀಣ ಮಹಿಳೆಯೇ ನಿಜವಾದ ಸ್ತ್ರೀವಾದಿ.

* 37 ವರ್ಷದಿಂದ ಮಹಿಳಾಪರ ಚಿಂತನೆ, ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಿಮ್ಮ ದೃಷ್ಟಿಯಲ್ಲಿ ಸ್ತ್ರೀವಾದ ಅಂದರೇನು?
ಮೊದಲೇ ಸ್ಪಷ್ಟಪಡಿಸುತ್ತೇನೆ ಸ್ತ್ರೀವಾದ ಅಂದರೆ ಖಂಡಿತಾ ಪುರುಷ ವಿರೋಧಿ ಅಲ್ಲ. ಹೆಣ್ಣು ಗಂಡಿನಂತೆ ಆಗಬೇಕು ಎಂಬ ಕಲ್ಪನೆಯೇ ತಪ್ಪು. ಹೆಣ್ಣಿಗೆ ತನ್ನದೇ ಆದ ವಿಭಿನ್ನತೆ ಇದೆ.

ಅದು ದೈಹಿಕ ನೆಲೆಯಲ್ಲಾಗಿರಬಹುದು ಅಥವಾ ಮಾನಸಿಕ ನೆಲೆಯಲ್ಲಾಗಿರಬಹುದು. ಪುರುಷನನ್ನು ಅನುಕರಿಸದೇ, ತನ್ನ ಜೈವಿಕ ನೆಲೆಯ ಅಸ್ತಿತ್ವ ಒಪ್ಪಿಕೊಳ್ಳುತ್ತಲೇ ತನ್ನದೇ ಅನನ್ಯ ಗುರುತು ಹೊಂದುವುದೇ ನಿಜವಾದ ಸ್ತ್ರೀವಾದ.

* ಇಂದಿನ ಮಹಿಳೆ ಹೇಗೆ ರೂಪುಗೊಳ್ಳಬೇಕು?
ಮೊದಲು ಆಕೆ  ಭೌತಿಕ ಬದಲಾವಣೆಗೆ ತನ್ನನ್ನು ತೆರೆದುಕೊಳ್ಳಬೇಕು. ಶಿಕ್ಷಣ ಪಡೆಯಲೇಬೇಕು. ನಮ್ಮಲ್ಲಿನ ಬಹುತೇಕ ಮಹಿಳೆಯರಿಗೆ `ಸ್ವಂತ ಸ್ಪೇಸ್~ ಕೊರತೆ ಇದೆ.

ಮನೆಯಲ್ಲೇ ಸ್ವಂತ ಸ್ಪೇಸ್ ಪಡೆಯಬೇಕು. ಮುಖ್ಯವಾಗಿ ತನ್ನ ದೇಹ ತನ್ನದಲ್ಲ ಪತಿಯದು ಎಂಬ ಭಾವನೆಯಿಂದ ಆಕೆ ಹೊರಬರಬೇಕು. ಮನಸ್ಸು, ದೇಹ, ಹೃದಯ ಎಲ್ಲವೂ ತನ್ನ ಸ್ವಂತದ್ದು ಎಂದು ಪರಿಭಾವಿಸಿದಾಗ ಆಕೆಗೆ ಆತ್ಮವಿಶ್ವಾಸ ಮೂಡಲು ಸಾಧ್ಯ. ಮಹಿಳೆ `ಗೈನೋಸೆಂಟ್ರಿಕ್~ ಆದ ಕಾರಣ ಆಕೆಯ ದೇಹ, ಭಾವನೆಯಲ್ಲಿ ಭಿನ್ನತೆ ಸಹಜ. ಅದನ್ನು ಒಪ್ಪಿಕೊಂಡೇ ತನ್ನದೇ ಸ್ವಂತ ವ್ಯಕ್ತಿತ್ವ ಕಟ್ಟಿಕೊಳ್ಳಲು ಆಕೆ ಖಂಡಿತಾ ಸಮರ್ಥಳು.

`ಮಹಿಳೆಗೆ ಮಹಿಳೆಯೇ ಶತ್ರು~ ಎಂಬ ಮಾತು ನಿಜಕ್ಕೂ ಸುಳ್ಳು. ವಾಸ್ತವದಲ್ಲಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಆಕೆಗೆ ಹಿರಿಯ ಮಹಿಳೆಯ ಮಾರ್ಗದರ್ಶನದ ಆವಶ್ಯಕತೆ ಇದೆ.

* ಭಾರತದ ಮಹಿಳೆ-ಕೆನಡಾದ ಮಹಿಳೆ ನಡುವಿನ ಅಂತರ ಹೇಗೆ ಗುರುತಿಸುತ್ತೀರಿ?
ದಶಕಗಳ ಹಿಂದೆ ಕೆನಡಾದಲ್ಲಿ ಮಹಿಳೆಯನ್ನು `ವ್ಯಕ್ತಿ~ ಎಂದು ಪರಿಗಣಿಸುತ್ತಿರಲಿಲ್ಲ. ಇದಕ್ಕಾಗಿ ಅಲ್ಲಿನ ಮಹಿಳಾವಾದಿಗಳು ತೀವ್ರ ಹೋರಾಟ ನಡೆಸಿದ ಫಲವಾಗಿ ಇಂದು ಆಕೆಯನ್ನು `ವ್ಯಕ್ತಿ~ ಎಂದು ಸ್ವೀಕರಿಸಿ, ಮತದಾನದ ಹಕ್ಕು ದೊರೆತಿದೆ. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಮಹಿಳೆ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಗೆ ಬಂದಳು.

ಆದರೆ, ಆಕೆ ಇತರ ವಿದೇಶಿ ಮಹಿಳೆಯರಷ್ಟು ಸಬಲತೆ ಸಾಧಿಸಲಿಲ್ಲ. ಏಕೆಂದರೆ ಭಾರತದಲ್ಲಿ ಮಹಿಳೆಯನ್ನು ಸಂಸ್ಕೃತಿಯ ಸಂಕೋಲೆಯಲ್ಲೇ ಇನ್ನೂ ಬಂಧಿಸಲಾಗಿದೆ. ನಮ್ಮಲ್ಲಿ ಮಹಿಳೆಯನ್ನು `ದೇವಿ~ ಎಂದು ಒಮ್ಮೆಲೇ ಅತ್ಯುನ್ನತ ಸ್ಥಾನ ಇಲ್ಲವೇ `ದಾಸಿ~ ಸ್ಥಾನ ನೀಡಲಾಗಿದೆ. ಆದರೆ, ಮಹಿಳೆಗೆ ಇವೆರೆಡೂ ಸ್ಥಾನ ಬೇಡ. ಅವಳಿಗೆ ಅವಳದೇ ಆದ ಗುರುತಿನ ಆವಶ್ಯಕತೆ ಇದೆ. ಕೆನಡಾದಲ್ಲಿ ಅಕೆ ಪುರುಷ ಕೇಂದ್ರಿತ ವೃತ್ತವನ್ನು ಮುರಿದು ತನ್ನದೇ ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿದ್ದಾಳೆ.

...ಹೀಗೆ ಹೇಳುತ್ತಾ, ಈ ವರ್ಷದಲ್ಲಿ `ಭಾರತದ ಮಹಿಳಾ ಆತ್ಮಕಥನಗಳು~ ವಿಷಯದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ. ಆದರೆ, ಈ ಎಲ್ಲದರ ನಡುವೆ ನಾನು ನನ್ನ ಗಂಡ, ಮಕ್ಕಳು, ವಿದ್ಯಾರ್ಥಿಗಳನ್ನು ತುಂಬಾ ಪ್ರೀತಿಸುತ್ತೇನೆ ಗೊತ್ತಾ? ಎಂದು ಕಣ್ಣುಮಿಟುಕಿಸಿದ ರಂಜನಾ, ಮಾತಿಗೆ ವಿರಾಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT