ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ನಗರದಲ್ಲಿ ಹಂದಿಗಳ ಹಾವಳಿ

Last Updated 19 ಜುಲೈ 2012, 9:15 IST
ಅಕ್ಷರ ಗಾತ್ರ

ಗದಗ:  ಗದಗ-ಬೆಟಗೇರಿ ನಗರದಲ್ಲಿ ಹೆಚ್ಚಿರುವ ಹಂದಿಗಳ ಹಾವಳಿ ನಿಯಂತ್ರಿಸಲು ನಗರಸಭೆ ಮುಂದಾಗಿದ್ದು, ನಗರದಿಂದ ಬೇರೆಡೆ ಸ್ಥಳಾಂತರಿಸುವಂತೆ ಹಂದಿ ಮಾಲೀಕರಿಗೆ ಹದಿನೈದು ದಿನಗಳ ಗಡುವು ನೀಡಿದೆ.

ಅವಳಿ ನಗರದ ಮುಖ್ಯ ರಸ್ತೆಗಳಲ್ಲಿ ಹಂದಿಗಳದ್ದೇ ದರ್ಬಾರು. 25 ಸಾವಿರ ಹಂದಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಹಿಂಡು ಹಿಂಡಾಗಿ ನಗರದಲ್ಲಿ ಪ್ರತಿಯೊಂದು ರಸ್ತೆಯಲ್ಲಿ ಸಂಚರಿಸಿ, ಚರಂಡಿಯಲ್ಲಿ ಹೊರಳಾಡಿ ಹೊಲಸನ್ನು ರಸ್ತೆಯ ಮೇಲೆಲ್ಲ ತಂದು ಬಿಸಾಡುತ್ತಿವೆ. ಗಬ್ಬು ವಾಸನೆಯಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ  ಸಹ ನಿರ್ಮಾಣವಾಗಿತ್ತು.

ಅಲ್ಲದೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಗೆ, ಚಿಕೂನ್ ಗುನ್ಯ ಸೇರಿದಂತೆ ಇತರೆ ಮಾರಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತಿದ್ದು, ಇದಕ್ಕೆ ಹಂದಿಗಳು ಮೂಲ ಕಾರಣ ಎಂಬುದನ್ನರಿತು  ಹಂದಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು. ನಿಗದಿತ ಅವಧಿಯೊಳಗೆ ಹಂದಿಗಳನ್ನು ಸ್ಥಳಾಂತರ ಮಾಡದಿದ್ದರೆ ನಗರಸಭೆಯೇ ಹಂದಿಗಳನ್ನು ಹಿಡಿದು ಬೇರೆಡೆಗೆ ಬಿಡಲು ನಿರ್ಧರಿಸಿದೆ,

ನಗರಸಭೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಹಂದಿ ಮಾಲೀಕರು, `ಹಂದಿಗಳ ಸ್ಥಳಾಂತರದಿಂದ ಸಾಕಷ್ಟು ತೊಂದರೆಯಾಗಲಿದೆ. ಇದನ್ನೇ ಉದ್ಯಮವನ್ನಾಗಿ ಮಾಡಿಕೊಂಡಿದ್ದೇವೆ. ನಗರಸಭೆ ವತಿಯಿಂದ ಸೂಕ್ತ ಜಾಗ ನೀಡಿದರೆ ಅದನ್ನೇ ಫಾರ್ಮ್ ಹೌಸ್ ಮಾಡಿಕೊಂಡು ಅಲ್ಲಿಯೇ ಸಾಕಾಣಿಕೆ ಮಾಡಲಾಗುವುದು. ಬೇರೆ ಉದ್ಯೋಗ ಇಲ್ಲ~ ಎಂದು ಅಳಲು ತೋಡಿಕೊಂಡರು.

ನಗರದ ಪ್ರಮುಖ ಸ್ಥಳಗಳಾದ ಮಾರ್ಕೇಟ್ ರಸ್ತೆ, ಗ್ರೇನ್ ಮಾರ್ಕೇಟ್, ನಾಮಜೋಷಿ ರಸ್ತೆ, ತೀಸ್ ಬಿಲ್ಡಿಂಗ್ ಹತ್ತಿರ, ಬಸ್ ನಿಲ್ದಾಣ ಹತ್ತಿರ, ಬೆಟಗೇರಿ, ಸ್ಟೇಷನ್ ರಸ್ತೆ, ಹುಯಿಲಗೋಳ ನಾರಾಯಣರಾವ್ ವೃತ್ತ, ಜವುಳ ಗಲ್ಲಿಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿರುವುದರಿಂದ ನಗರದ ವಾತಾವರಣ ಕಲುಷಿತಗೊಂಡು ಸೌಂದರ್ಯವೂ ಹಾಳಾಗುತ್ತಿದೆ ಎಂಬುದನ್ನು ಅಧಿಕಾರಿಗಳು ಮಾಲೀಕರಿಗೆ ಮನವರಿಕೆ ಮಾಡಿಕೊಟ್ಟರು.
ನಗರಸಭೆ ಸೂಚನೆಗೆ ಸ್ಪಂದಿಸಿರುವ ಮಾಲೀಕರು ವಿವಿಧ ಬಡಾವಣೆಗಳಿಂದ ಎರಡು ದಿನಗಳಿಂದ ಹಂದಿಗಳನ್ನು ಬೇರೆಡೆಗೆ ಸಾಗಿಸುವ ಕೆಲಸದಲ್ಲಿ ತೊಡಗಿದ್ದಾರೆ. 

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, `ಹಂದಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಬೇರೆಡೆಗೆ ಸಾಗಿಸುವಂತೆ ಮಾಲೀಕರಿಗೆ ಹದಿನೈದು ದಿನ ಗಡುವು ನೀಡಲಾಗಿದೆ.

ಅಷ್ಟರಲ್ಲಿ ಸಾಗಿಸದಿದ್ದರೆ ನಗರಸಭೆ ವತಿಯಿಂದಲೇ ಅವುಗಳನ್ನು ಹಿಡಿದು ಬೇರೆಡೆಗೆ ಸಾಗಿಸಲಾಗುವುದು. ಇವುಗಳನ್ನು ಹೊರಗೆ ಸಾಗಿಸದಿದ್ದರೆ ಸಂತತಿ ಬೆಳೆದು ಹಂದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ಅದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT