ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿನಗರ ಅಭಿವೃದ್ಧಿಗೆ ಬದ್ಧ: ಸಿದ್ದರಾಮಯ್ಯ

Last Updated 23 ಸೆಪ್ಟೆಂಬರ್ 2013, 9:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡದ ಅಭಿವೃದ್ಧಿಗೆ ನಾನು ಬದ್ಧ. ಈ ಬಗ್ಗೆ ಯಾವುದೇ ಸಂದೇಹ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಶ್ವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಕನ್ನಡ ಭವನ’ವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಭಾಗದ ಅಭಿವೃದ್ಧಿಗಾಗಿ ಈಗಾಗಲೇ ಮಂಜೂರು
ಮಾಡಿದ ಅನುದಾನ­ದಲ್ಲಿ ಬಿಡುಗಡೆಯಾಗದೆ ಉಳಿಕೆಯಾದ ಹಣ ಬಿಡುಗಡೆ ಮಾಡುತ್ತೇನೆ’ ಎಂದರು.

‘ಹುಬ್ಬಳ್ಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್‌ ಇನ್ನಷ್ಟು ಅನುದಾನ ನೀಡುವಂತೆ ಕೇಳಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಇಲ್ಲಿಗೆ ಅನುದಾನ ಹೆಚ್ಚು ಕೊಟ್ಟಿದ್ದಾರೆ ಅಂದುಕೊಂಡಿದ್ದೇನೆ. ಈ ಹಿಂದಿನ ಸರ್ಕಾರ ಬಿಡುಗಡೆ  ಮಾಡಿದ 200 ಕೋಟಿ ಅನುದಾನದಲ್ಲಿ ಮೈಸೂರು ನಗರಪಾಲಿಕೆಗೆ ರೂ 100 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿತ್ತು. ನಾನು ಮುಖ್ಯಮಂತ್ರಿ­ಯಾದ ಬಳಿಕ ಉಳಿಕೆಯಾಗಿದ್ದ ರೂ 100 ನೀಡಿದ್ದೇನೆಯೇ ಹೊರತು ಹೆಚ್ಚುವರಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘2001ರಲ್ಲಿ ಇಂಡೋ ಚೀನಾ ಸಂಬಂಧ ವೃದ್ಧಿ ಸಂದರ್ಭದಲ್ಲಿ ನಾನೂ ಚೀನಾಕ್ಕೆ ಹೋಗಿದ್ದೆ. ಮತ್ತೆ 12 ವರ್ಷಗಳ ಬಳಿಕ ಮೊನ್ನೆ ಮತ್ತೆ ಹೋಗಿದ್ದಾಗ ಅಲ್ಲಿ ನಂಬಲು ಸಾಧ್ಯವಾಗ­ದಷ್ಟು ಬದಲಾವಣೆ ಆಗಿದೆ. ಮೂಲ ಸೌಕರ್ಯ ಒದಗಿಸಲು ಅಲ್ಲಿ ವಿಶೇಷ ಗಮನ ಕೊಡಲಾಗಿದೆ. ನಾವೂ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದರು.

‘ರಾಜ್ಯ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಪ್ರದೇಶಗಳಿಗೂ ಮೂಲಸೌಕರ್ಯ ಒದಗಿಸುವುದು ಅವಶ್ಯ. ಆದರೆ ನಮಗೆ ಇನ್ನೂ ಕೆಲವು ಭಾಗಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ’ ಎಂದ ಅವರು, ‘ಕನ್ನಡ ಕಟ್ಟುವ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಭವನಗಳು ಅಗತ್ಯವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಗದೀಶ ಶೆಟ್ಟರ್‌, ‘ಯಡಿಯೂರಪ್ಪ  ಮತ್ತು ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಮಹಾ­ನಗರ ಪಾಲಿಕೆಗೆ ವಿಶೇಷ ಅನುದಾನ­ವಾಗಿ ತಲಾ ರೂ 100 ಕೋಟಿಯಂತೆ ಎರಡು ಬಾರಿ ಅನುದಾನ ಬಿಡುಗಡೆಯಾಗಿದೆ. ಸ್ಥಳೀಯವಾಗಿ ಲಭ್ಯ ಆದಾಯ ಪಾಲಿಕೆ, ನಗರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿಯ ಕಾರ್ಯಗಳಿಗೆ ಸಾಕಾಗದೇ ಇರುವುದರಿಂದ ವಿಶೇಷ ಅನುದಾನ ನೀಡುವುದನ್ನು ಮುಂದುವ­ರಿಸಬೇಕು’ ಎಂದು ಒತ್ತಾಯಿಸಿದರು.

‘ಹುಬ್ಬಳ್ಳಿ– ಧಾರವಾಡ ಪಾಲಿಕೆಗೆ ನೀಡಿದ ರೂ 26 ಕೋಟಿ ವಿಶೇಷ ಅನುದಾನದಲ್ಲಿ 9 ಕೋಟಿ ಮಾತ್ರ ಬಿಡುಗಡೆಯಾಗಿದೆ. ಉಳಿಕೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಅದೇ ರೀತಿ ಜಿಲ್ಲಾ ಪಂಚಾಯ್ತಿಗೂ 25 ಕೋಟಿ ಅನುದಾನ ಬಿಡುಗಡೆ ಮಾಡಬೇಕಿದೆ’ ಎಂದರು. ‘ಕಳಸಾ ಬಂಡೂರಿ ಯೋಜನೆಗೆ ಕಳಸಾದಲ್ಲಿ ತಿರುವು ಯೋಜನೆಗೆ ಅನುದಾನ ಅಗತ್ಯ­ವಾಗಿದೆ. ಅಲ್ಲದೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದರು.

‘ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನ ವಿಳಂಬ ಸಾಧ್ಯತೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಧ್ಯೆ ಚತುಷ್ಪಥ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದ ಅವರು, ಕನ್ನಡ ಭವನಕ್ಕೆ ಹಿರಿಯ
ಕವಿ ಡಿ.ಎಸ್‌. ಕರ್ಕಿ ಹೆಸರಿಡವಂತೆ ಸೂಚಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ, ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾಸಕರಾದ ಪ್ರಸಾದ ಅಬ್ಬಯ್ಯ, ಸಿ.ಎಸ್‌.ಶಿವಳ್ಳಿ, ಎನ್‌. ಎಚ್‌. ಕೋನರಡ್ಡಿ, ವಿಧಾನಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ ಮತ್ತಿತರರು ಇದ್ದರು.

‘ಜಿಮ್ಖಾನಾ ವಿವಾದ: ದಾಖಲೆ ಪರಿಶೀಲಿಸಿ ಕ್ರಮ’
ಹುಬ್ಬಳ್ಳಿ:
ದೇಶಪಾಂಡೆ ನಗರದ ಜಿಮ್ಖಾನಾ ಅಸೋಸಿಯೇಷನ್‌ ಕುರಿತ ವಿವಾದಕ್ಕೆ ಸಂಬಂಧಪಟ್ಟಂತೆ ದಾಖಲೆ­ಗಳನ್ನು ಪರಿಶೀಲಿಸಿ ಕ್ರಮ ಕೈ­ಗೊಳ್ಳ­ಲಾಗು­ವುದು’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿಯಾದ ಬಳಿಕ ನಗರಕ್ಕೆ ಮೊದಲ ಬಾರಿಗೆ ಭಾನು­ವಾರ ಬಂದ ಅವರು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವನ್ನು ಭೇಟಿಯಾಗಿ ಸುಮಾರು 45 ನಿಮಿಷ ಚರ್ಚೆ ನಡೆಸಿದರು.

ಜಿಮ್ಖಾನಾ ಮೈದಾನದಲ್ಲಿ ರಿಕ್ರಿಯೇಷನ್‌ ಕ್ಲಬ್‌ ನಿರ್ಮಾಣವನ್ನು ವಿರೋಧಿಸಿ ಮತ್ತು ಮೈದಾನವನ್ನು ಸಾರ್ವಜನಿಕ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಿಳಿಸಿ­ದಿರುವ ಗ್ರೌಂಡ್‌ ಬಚಾವೊ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಪಾಪು ಜೊತೆ ಈ ವಿವಾದ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಿದರು. ಈ ವೇಳೆ ಉಪಸ್ಥಿತರಿದ್ದ ಹಿರಿಯ ವಕೀಲ ಬಿ.ಡಿ. ಹೆಗಡೆ, ಮೈದಾನ ಕುರಿತ ದಾಖಲೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು, ‘ಕಾನೂನು ಉಲ್ಲಂಘಿಸಿ ಕ್ಲಬ್‌ ನಿರ್ಮಿಸಲಾಗುತ್ತಿದೆ’ ಎಂದು ವಾದಿಸಿದರು.

ಬಳಿಕ ಜರುಗಿದ ‘ಕನ್ನಡ ಭವನ’ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ,
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಯಾವುದೇ ಪಕ್ಷ ಜನಪರ ಅಭಿವೃದ್ಧಿ ಕೆಲಸ ಮಾಡಿದಾಗ ಮೆಚ್ಚಬೇಕು. ಜನ ವಿರೋಧಿ ಕೆಲಸ ಮಾಡುವಾಗ ವಿರೋಧಿಸಬೇಕು’ ಎಂದು ಸೂಚ್ಯವಾಗಿ ಹೇಳಿದರು. ‘ಈ ಸರ್ಕಾರ ಜನಪರ ಆಗಿರುತ್ತದೆ. ಜನರ ಆಶೋತ್ತರಗಳು, ನಿರೀಕ್ಷೆ­ಗಳಿಗೆ ತಕ್ಕಂತೆ, ವಿಶ್ವಾಸಕ್ಕೆ ದಕ್ಕೆ ಬಾರದಂತೆ ಕೆಲಸ ಮಾಡಲಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿದೆ. ಪಾಟೀಲ ಪುಟ್ಟಪ್ಪ­ನವರಂತಹ ಹಿರಿಯರ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟು, ಅಭಿಪ್ರಾಯಗಳನ್ನು ಪಡೆದು ಕೆಲಸ ಮಾಡಲಿದೆ’ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ  ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಇದ್ದರು.

ಬಳಿಕ ಪಾಟೀಲ ಪುಟ್ಟಪ್ಪ ಸುದ್ದಿಗಾರರ ಜೊತೆ ಮಾತನಾಡಿ, ಜಿಮ್ಖಾನಾ ಮೈದಾನ
ವಿವಾದಕ್ಕೆ ಸಂಬಂಧಿಸಿ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಹುಬ್ಬಳ್ಳಿಯ  ಚಿತ್ರಣವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇನೆ. ವಿಜಾಪುರ, ಕಲ್ಬುರ್ಗಿಯಲ್ಲಿ ಆಗಿರುವಷ್ಟು ಅಭಿವೃದ್ಧಿ ಹುಬ್ಬಳ್ಳಿಯಲ್ಲಿ ಆಗಿಲ್ಲ. ಇನ್ನೂ ಹಳ್ಳಿಯಂತಿರುವ ಇಲ್ಲಿ ರಸ್ತೆಗಳು ಚರಂಡಿಗಳಾಗಿವೆ. ಈ ಬಗ್ಗೆ ಮಾಹಿತಿ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT