ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಆಗರವಾದ ಪೊಲೀಸ್ ವಸತಿಗೃಹ

Last Updated 12 ಸೆಪ್ಟೆಂಬರ್ 2011, 4:55 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆ ಹಾಗೂ ರಾಜ್ಯದ ವಿಧೆಡೆಯಿಂದ ಕರ್ತವ್ಯ ನಿಮಿತ್ತ ನಗರಕ್ಕೆ ಆಗಮಿಸುವ ಪೊಲೀಸ್ ಸಿಬ್ಬಂದಿಗಾಗಿಯೇ ಇರುವ ಪೊಲೀಸ್ ಕಲ್ಯಾಣ ಕೇಂದ್ರದ ವಸತಿ ಗೃಹ ಅವ್ಯವಸ್ಥೆಯ ಆಗರವಾಗಿದ್ದು, ಒಂದೆರಡು ದಿನದ ಮಟ್ಟಿಗೆ ಅಲ್ಲಿ ವಸತಿ ಸೌಲಭ್ಯ ಪಡೆಯುವ ಸಿಬ್ಬಂದಿ ವಿವಿಧ ಕಾಯಿಲೆಗೆ ತುತ್ತಾಗುವ ಅಪಾಯ ಎದುರಿಸುವಂ ತಾಗಿದೆ.

ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಸಂಚಾರ ಪೊಲೀಸ್ ಠಾಣೆಯ ಹಿಂಭಾಗ ಇರುವ ಈ ಕಲ್ಯಾಣ ಕೇಂದ್ರದ ವಸತಿಗೃಹದಲ್ಲಿ 12 ಕೊಠಡಿಗಳಿದ್ದು, 30 ಜನ ಸಿಬ್ಬಂದಿ ತಂಗಲು ವ್ಯವಸ್ಥೆ ಇದೆ. ಆದರೆ, ಸಮರ್ಪಕ ಸೌಲಭ್ಯಗಳೇ ಇಲ್ಲದ್ದರಿಂದ ವಸತಿ ಕೋರಿ ಬರುವವರು ಪರದಾಡುವ ಸ್ಥಿತಿ ಇದೆ.

ಪ್ರತಿಭಟನೆ, ಬಂದ್, ಬೃಹತ್ ಸಮಾವೇಶ ಮತ್ತಿತರ ಸಂದರ್ಭ ಭದ್ರತೆ ಒದಗಿಸಲು, ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿಯಲು ಆಗಾಗ ನಗರಕ್ಕೆ ಬರುವ ಪೊಲೀಸ್ ಸಿಬ್ಬಂದಿ ಇಲ್ಲಿ ವಸತಿ ಕೋರಿ ಆಗಮಿಸಿದಲ್ಲಿ, ನಿತ್ಯ ರೂ 10 ಶುಲ್ಕ ವಿಧಿಸುವ ವಸತಿಗೃಹದ ಉಸ್ತುವಾರಿ ನೋಡಿಕೊಳ್ಳುವವರು, ಅದಕ್ಕೆ ತಕ್ಕಂತೆ ಸೂಕ್ತ ಸೌಲಭ್ಯ ನೀಡುವಲ್ಲಿ ವಿಫಲವಾಗಿದ್ದಾರೆ.

ಕುಡಿಯುವ ನೀರು, ಸ್ವಚ್ಛವಾದ ಹಾಸಿಗೆ, ಹೊದಿಕೆ, ಸ್ನಾನಗೃಹದ ವ್ಯವಸ್ಥೆ ಕೊರತೆಯಿಂದಾಗಿ ಪೊಲೀಸರು ಈ ವಸತಿಗೃಹದಲ್ಲಿ ಇಳಿದುಕೊಳ್ಳು ವುದಕ್ಕೇ ಹಿಂಜರಿಯುವ ವಾತಾವರಣ ಇದೆ.

ಚಿಕ್ಕ ಚಿಕ್ಕ ಕೊಠಡಿಗಳು, ಗಲೀಜು ಶೌಚಾಲಯ ಮತ್ತು ಸ್ನಾನಗೃಹಗಳು ಸಮರ್ಪಕ ನಿರ್ವಹಣೆ ಇಲ್ಲದೇ ದುರ್ನಾತ ಬೀರುತ್ತಿವೆ.

ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ಶೌಚಾಲಯದ ನಲ್ಲಿಗಳಲ್ಲಿ ನೀರು ಬರುತ್ತಿದ್ದು, ಕಟ್ಟಡದ ಮೇಲೆ ಅಳವಡಿಸಲಾದ ಚಿಕ್ಕ ಟ್ಯಾಂಕ್‌ನಲ್ಲಿ ಶೇಖರಣೆಯಾಗುವ ನೀರಿನ ಪ್ರಮಾಣವೂ ಕಡಿಮೆ ಇರುವುದರಿಂದ ನೈಸರ್ಗಿಕ ಕರೆಯ ಮೇರೆಗೆ ಶೌಚಾಲಯಕ್ಕೆ ತೆರಳಿದವರೂ ಕಕ್ಕಾಬಿಕ್ಕಿಯಾಗುವ ಸ್ಥಿತಿ ಇದೆ.

ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಎಎಸ್‌ಐ ದರ್ಜೆವರೆಗಿನ ಸಿಬ್ಬಂದಿ ಇದೇ ವಸತಿ ಗೃಹದಲ್ಲಿ ತಂಗ ಬೇಕಾಗಿದ್ದು, ಒಮ್ಮಮ್ಮೆ ನೂರಾರು ಸಂಖ್ಯೆಯಲ್ಲಿ ಬಳ್ಳಾರಿಗೆ ಬರುವ ಸಿಬ್ಬಂದಿ ಇಲ್ಲಿ ಕೊಠಡಿಗಳೇ ದೊರೆಯದೆ ರಾತ್ರಿ ವಸತಿ ಸೌಲಭ್ಯಕ್ಕೆ ಪರದಾಡುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.

ಪ್ರತಿ ಸಿಬ್ಬಂದಿಗೆ ಇಲಾಖೆ ನಿತ್ಯ ಪ್ರವಾಸ ಭತ್ಯೆಯಾಗಿ ರೂ 75 ಮಾತ್ರ ನೀಡುತ್ತಿದ್ದು, ಊಟ, ತಿಂಡಿ, ವಸತಿ ಸೌಲಭ್ಯ ಪಡೆಯುವುದಕ್ಕೆ ಈ ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಬೇರೆಡೆ ಭವ್ಯ ವಸತಿಗೃಹ ನಿರ್ಮಿಸಿ ಅನುಕೂಲ ಕಲ್ಪಿಸುವ ಅಗತ್ಯವಿದೆ ಎಂಬ ಮನವಿ ನೊಂದ ಸಿಬ್ಬಂದಿಯದು.

ಈ ವಸತಿಗೃಹದ ಕೊಠಡಿಗಳೂ ಕಸದ ತೊಟ್ಟಿಗಳಾಗಿವೆ. ಸ್ವಚ್ಛತೆಯ ಕೊರತೆಯೂ ಇದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ ಎಂಬುದು  ಸಿಬ್ಬಂದಿಯ ಆರೋಪ.

ಜಿಲ್ಲೆಯ ಪೊಲೀಸ್ ಸಿಬ್ಬಂದಿಯಿಂದ ಮಾಸಿಕ 10 ರೂಪಾಯಿಯನ್ನು ಪೊಲೀಸ್ ಕಲ್ಯಾಣ ನಿಧಿಗೆ ಸಂಗ್ರಹಿಸ ಲಾಗುತ್ತಿದ್ದು, ಸಿಬ್ಬಂದಿಯ ಕಲ್ಯಾಣ ವನ್ನೇ ಕಡೆಗಣಿಸಲಾಗಿದೆ.

ಶೋಚನೀಯ: ಮುಖ್ಯವಾಗಿ ಕರ್ತವ್ಯ ನಿಮಿತ್ತ ಆಗಮಿಸುವ ಮಹಿಳಾ ಸಿಬ್ಬಂದಿಗೆ ನಗರದಲ್ಲಿ ಪ್ರತ್ಯೇಕ ವಸತಿ ಸೌಲಭ್ಯವೇ ಇಲ್ಲದ್ದರಿಂದ ಅವರ ಗೋಳಂತೂ ಶೋಚನೀಯವಾಗಿದೆ.

ಬ್ರಿಟಿಷ್ ಕಾಲದಲ್ಲಿ ಕಾರಾಗೃಹವಾಗಿ ಬಳಕೆಯಾಗುತ್ತಿದ್ದ ಈ ಕಲ್ಯಾಣ ಕೇಂದ್ರದ ವಸತಿ ಗೃಹ ಹಳೆಯ ದಾಗಿದ್ದು, ಬೇರೆಡೆ ವಸತಿಗೃಹ ನಿರ್ಮಿಸುವ ಆಲೋಚನೆಯನ್ನೇ ಮಾಡ ಲಾಗಿಲ್ಲ. ಮೇಲ್ವರ್ಗದ ಅಧಿಕಾರಿಗಳಿಗೆ ನಗರದ ಪೊಲೀಸ್ ಜಿಮಖಾನಾ ಮತ್ತಿತರ ಕಡೆ ಸುವ್ಯವಸ್ಥಿತ ವಸತಿ ಸೌಲಭ್ಯ ಕಲ್ಪಿಸಿರುವ ಇಲಾಖೆ, ಕೆಳ ಹಂತದ ಸಿಬ್ಬಂದಿಯನ್ನು ಕಡೆಗಣಿಸಿದೆ ಎಂಬುದು ಇತ್ತೀಚೆಗಷ್ಟೇ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬಂದು ಈ ವಸತಿಗೃಹದಲ್ಲಿ ತಂಗಿದ್ದ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯ ಆರೋಪವಾಗಿದೆ.

ಅಲ್ಲದೆ, ಕೆಲವರು ಈ ವಸತಿಗೃಹದ ಕೊಠಡಿಯಲ್ಲಿ ಅನೇಕ ತಿಂಗಳಿಂದ ವಾಸವಾಗಿದ್ದು, `ಸ್ವಂತ ಮನೆ~ ಎಂದೇ ಭಾವಿಸಿದ್ದಾರೆ. ಮಿಕ್ಕ ಕೊಠಡಿಗಳಲ್ಲಿ ಮಾತ್ರ ಬೇರೆಡೆಯಿಂದ ಬಂದ ಸಿಬ್ಬಂದಿಗೆ ಸೌಲಭ್ಯ ದೊರೆಯುತ್ತಿದ್ದು, ಒಂದೆರಡು ದಿನ ಇರುವ ಸಿಬ್ಬಂದಿ ಸಿಗರೇಟು, ಬೀಡಿ ಸೇದಿ ಅಲ್ಲಲ್ಲೇ ಎಸೆದು ಹೋಗುವುದರಿಂದ ಇತರರಿಗೆ ತೀವ್ರ ತೊಂದರೆ ಎದುರಾಗುತ್ತದೆ. ಸ್ವಚ್ಛತೆಯ ಕೊರತೆಯಿಂದಾಗಿ ಕೆಲವರಲ್ಲಿ ವಾಕರಿಕೆ ತರಿಸುವ ಈ ಜಾಗೆಯನ್ನು ಶುಭ್ರಗೊಳಿಸುವತ್ತ  ಆಲೋಚಿಸಬೇಕಿದೆ ಎಂದು ಅವರು ಕೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT