ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ನೋಟಿಕರಗೆ ಗೋವಾ ಡಿಸಿಎಂ ಸಾಥ್

Last Updated 16 ಏಪ್ರಿಲ್ 2013, 11:06 IST
ಅಕ್ಷರ ಗಾತ್ರ

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಸೋಮವಾರ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ತಮ್ಮ `ವಸಂತ' ನಿವಾಸದಿಂದ ನೇರವಾಗಿ ಬಾಡ ಮಹಾದೇವಸ್ಥಾನ ನಂತರ ಸದಾಶಿವಗಡ ಭೂದೇವಿ ದೇವಸ್ಥಾನ ಬಳಿಕ ಪಿಕಳೆ ರಸ್ತೆಯಲ್ಲಿರುವ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡರು.ಅಲ್ಲಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಹೊರಟ ಅಸ್ನೋಟಿಕರ್ ಸಂಚಾರ ಠಾಣೆಯ ಎದುರು ಇರುವ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನೇರವಾಗಿ ನಗರಸಭೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆಯ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.

`ಕಾಂಗ್ರೆಸ್‌ಗೆ ನನಗೆ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಹಿಂದೆ ಅನೇಕ ಬಾರಿ ಸ್ಪಷ್ಟಪಡಿಸಿದ್ದೇನೆ. ಮೈದಾನ, ಬ್ಯಾಟ್, ಬಾಲ್ ಎಲ್ಲವೂ ನನ್ನದೇ  ಕ್ಷೇತ್ರ ರಕ್ಷಕರು ಯಾರೂ ಎನ್ನುವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಗೆಲ್ಲುವುದೊಂದೆ ನನ್ನ ಮುಂದಿನ ಗುರಿ' ಎಂದರು.

`ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಅದಿರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದ ಬಳ್ಳಾರಿಯ ವರೆಗೆ ಕೈಗೊಂಡ ಪಾದಯಾತ್ರೆ ಸಾರ್ಥಕವಾದಂತಾಗಿದೆ' ಎಂದು ಅಸ್ನೋಟಿಕರ ಹೇಳಿದರು.

`ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಬೇಲೆಕೇರಿ ಅದಿರು ಅವ್ಯವಹಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೈಲ್ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ' ಎಂದರು.

ಗೋವಾದ ಉಪ ಮುಖ್ಯಮಂತ್ರಿ ಪ್ರಾನ್ಸಿಸ್ಕೊ ಡಿಸೋಜಾ, ಗೋವಾ ಬಿಜೆಪಿಯ ವಕ್ತಾರ ದಾಮೋದರ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕರ, ಗಣಪತಿ ಉಳ್ವೇಕರ್, ಮಾಜಿ ಶಾಸಕ ಗಂಗಾಧರ ಭಟ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT