ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯಸ್ವಾಮಿ ರಥೋತ್ಸವ

Last Updated 8 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಕೊಂಡ್ಲಹಳ್ಳಿಯ ಅಂಜನೇಯಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ನಡೆಸಿಕೊಂಡು ಬರುತ್ತಿರುವ ಈ ಜಾತ್ರೆಯ ಅಂಗವಾಗಿ ಸೋಮವಾರ ಸಂಜೆ ನಡೆದ ಭವ್ಯ ಮೆರವಣಿಗೆಯಲ್ಲಿ ಅಂಜನೇಯಸ್ವಾಮಿಯನ್ನು ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರ ರಸ್ತೆಯಲ್ಲಿನ ಹೊಂಡದಲ್ಲಿ ಗಂಗಾಪೂಜೆ ಸಲ್ಲಿಸಿ ವಾಪಸ್ಸು ದೇವಸ್ಥಾನಕ್ಕೆ ಕರೆತಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
ಮಂಗಳವಾರ ಬೆಳಗಿನ ಜಾವ 4ಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ 9ಕ್ಕೆ ಹೋಮ ಸುಡುವುದು, ಬಲಿ ಅರ್ಪಿಸುವ ಕಾರ್ಯಕ್ರಮ ನಡೆಯಿತು. 10ರಿಂದ ತೇರು ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಥದ ಮುಂಭಾಗದಲ್ಲಿ ಬಲಿ, ಅನ್ನಸಮರ್ಪಣೆ, ಹೋಮ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿ ಅಂಜನೇಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ 2.30ಕ್ಕೆ ಆರಂಭವಾದ ರಥೋತ್ಸವ ಹನುಮಂತನಹಳ್ಳಿ ರಸ್ತೆ ತಿರುವಿನವರೆಗೆ ಸಾಗಿ ವಾಪಸ್ಸು ಕರೆತರಲಾಯಿತು. ಕೋಲಾಟ, ನಂದಿಕೋಲು, ಡೊಳ್ಳು ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳು ಭಕ್ತರ ಗಮನ ಸೆಳೆದರು.

ರಥ ಸಾಗುವಾಗ ಬಾಳೆಹಣ್ಣು, ಸೂರುಬೆಲ್ಲ, ಹೂವುಗಳನ್ನು ಅರ್ಪಿಸಿ ಭಕ್ತಿ ಮೆರೆದರು. ಪುನೀತ ಭಾವ ತಳೆದರು.
ಗ್ರಾಮದ ವಿವಿಧ ಯುವಕ ಸಂಘಗಳ ಪದಾಧಿಕಾರಿಗಳು ಮೆರವಣಿಗೆ ಮೂಲಕ ಬೃಹತ್ ಹೂವಿನ ಹಾರಗಳನ್ನು ತಂದು ರಥಕ್ಕೆ ಸಮರ್ಪಿಸಿದರು.

ಇದೇ ವೇಳೆ ಸ್ಥಳೀಯ ಮಾರುತಿ ಕಲಾ ಸಂಘದ ಕಲಾವಿದರು `ಸರ್ಪ ಸಾಮ್ರಾಜ್ಯ~ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನವನ್ನು ತಿಮ್ಮಪ್ಪ ದೇವಸ್ಥಾನ ಆವರಣದಲ್ಲಿ  ನಡೆಸಿಕೊಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಕೆ. ಗುರುಲಿಂಗಪ್ಪ, ಪಿಎಲ್‌ಡಿ ಅಧ್ಯಕ್ಷ ಟಿ. ರೇವಣ್ಣ, ಗ್ರಾ.ಪಂ. ವನದಮ್ಮ, ಗ್ರಾಮದ ಮುಖಂಡರಾದ ಟಿ. ಷಡಾಕ್ಷರಪ್ಪ, ಈಶ್ವರಪ್ಪ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬುಧವಾರ ಮಧ್ಯಾಹ್ನ 12ಕ್ಕೆ ಅಂಜನೇಯಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಸಂಜೆ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬಿಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT