ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರಮಣ ಸಹಿಸುವುದಿಲ್ಲ: ಭಯ್ಯಾಜಿ

Last Updated 28 ಜನವರಿ 2012, 12:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಕೆಟ್ಟ ಪರಂಪರೆ ಆರಂಭವಾಗಿದ್ದು, ಅಂತಹ ಯತ್ನಗಳಿಗೆ ತಡೆಯೊಡ್ಡಿ ಸಾಮರಸ್ಯದ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಗುರಿಯಾಗಿದೆ~ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ ಹೇಳಿದರು.

ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿರುವ `ವಿಜಯನಗರ~ದಲ್ಲಿ ಶುಕ್ರವಾರ `ಹಿಂದು ಶಕ್ತಿ ಸಂಗಮ~ ಮಹಾಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. `ನಿರಂತರವಾಗಿ ನಡೆಯುತ್ತಾ ಬಂದ ಅನ್ಯರ ಆಕ್ರಮಣ ಹಾಗೂ ಆಂತರಿಕ ಸಮಸ್ಯೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿದ್ದರಿಂದಲೇ ಹಿಂದೂ ಸಮಾಜ ಇಂದಿಗೂ ಸಶಕ್ತವಾಗಿ ಉಳಿದಿದೆ~ ಎಂದು ಅವರು ತಿಳಿಸಿದರು.

`ನಾವು ಮಾಡುತ್ತಿರುವುದು ಶಕ್ತಿಯ ಪ್ರದರ್ಶನವಲ್ಲ; ಬದಲಾಗಿ ಶಕ್ತಿಯ ದರ್ಶನ. ಯಾವುದೇ ಬಲ ಧನಾತ್ಮಕ ಭಾವದಿಂದ ಲೇಪ ಆಗಿರಬೇಕು. ಅದರ ದುರುಪಯೋಗ ಖಂಡಿತ ಸಲ್ಲದು~ ಎಂದ ಅವರು, `ರಾಜಕೀಯ ಆಕಾಂಕ್ಷೆಯಿಂದ ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ನಾವು ಸಹಿಸುವುದಿಲ್ಲ~ ಎಂಬ ಎಚ್ಚರಿಕೆಯನ್ನೂ ನೀಡಿದರು.

`ಚರಿತ್ರೆಯ ಉದ್ದಕ್ಕೂ ದೇವ-ಅಸುರ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸಜ್ಜನ-ದುರ್ಜನ ಸಂಗತಿಗಳ ಮಧ್ಯ ಸಂಘರ್ಷ ನಡೆಯುತ್ತಲೇ ಬಂದಿದೆ. ಯಾವಾಗಲೂ ದೈವಿಶಕ್ತಿ, ಸತ್ಯ, ಧರ್ಮ, ನ್ಯಾಯಗಳೇ ಜಯ ಸಾಧಿಸಿವೆ. ಅಂತಹ ದಾರಿ ನಮ್ಮದು~ ಎಂದು ಹೆಮ್ಮೆಯಿಂದ ಹೇಳಿಕೊಂಡರು.

`ಸಾಧು-ಸಂತರು, ರಾಜರು, ಸಮಾಜ ಸುಧಾರಕರು ಸ್ವಸ್ಥ ಸಮಾಜವನ್ನು ನಿರ್ಮಾಣದ ಕೈಂಕರ್ಯ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದೂ ಕೆಟ್ಟ ಪರಂಪರೆ ನುಸುಳುತ್ತಲೇ ಇದೆ. ಸಮಾಜ ದುರ್ಬಲಗೊಳಿಸುವ ಯತ್ನಗಳು ನಡೆದಿವೆ. ಅಂತಹ ಸವಾಲುಗಳ ವಿರುದ್ಧ ಹಿಂದೂಗಳು ಸಂಘಟಿತರಾಗಿ ಹೋರಾಡಬೇಕಿದೆ~ ಎಂದರು.

`ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ರಾಜಸ್ತಾನದ ಮರಭೂಮಿಯಿಂದ ಮಣಿಪುರದ ಪರ್ವತ ಶ್ರೇಣಿವರೆಗೆ ಸಂಘ ವ್ಯಾಪಕವಾಗಿ ಬೆಳೆದಿದ್ದು, ಸ್ವಯಂಸೇವಕರು ಸಂಘದ ಸಿದ್ಧಾಂತವನ್ನೇ ಆಧಾರವಾಗಿ ಇಟ್ಟುಕೊಂಡು ಹಿಂದೂ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ~ ಎಂದು ತಿಳಿಸಿದರು. `ಶ್ರೇಷ್ಠ ಚಿಂತನೆ, ಉತ್ತಮ ಸಂಸ್ಕಾರಗಳ ಮೂಲಕ ಸಶಕ್ತ ಸಮಾಜವನ್ನು ಕಟ್ಟಬೇಕು~ ಎಂದು ಸ್ವಯಂಸೇವಕರಿಗೆ ಕಿವಿಮಾತು ಹೇಳಿದರು.

ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ಪ್ರಮುಖರಾದ ಡಾ.ಸತೀಶ್ ಜಿಗಜಿನ್ನಿ, ನ್ಯಾ.ಪರ್ವತರಾವ್, ಖಗೇಶನ್ ಪಟ್ಟಣಶೆಟ್ಟಿ, ಮೈ.ಚ.ಜಯದೇವ, ಎನ್.ಕೃಷ್ಣಪ್ಪ, ಎಸ್.ರಾಮಣ್ಣ, ಮಂಗೇಶ ಭೇಂಡೆ, ಡಿ.ಎಂ.ರವೀಂದ್ರ, ವಿ.ನಾಗರಾಜ್, ಡಾ.ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ತಿಪ್ಪೆಸ್ವಾಮಿ, ಅರವಿಂದ ದೇಶಪಾಂಡೆ ಹಾಜರಿದ್ದರು.

ಶಾಸಕರಾದ ಅರುಣ್ ಶಾಪೂರ, ವಿ.ಎಸ್. ಪಾಟೀಲ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದು, ಸಚಿವರಾದ ಮುರುಗೇಶ ನಿರಾಣಿ, ರೇವು ನಾಯಕ ಬೆಳಮಗಿ ಸೇರಿದಂತೆ ಹಲವು ಜನ ಬಿಜೆಪಿ ಮುಖಂಡರು ಶಿಬಿರಕ್ಕೆ ಭೇಟಿ ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT