ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗದ ಸೇತುವೆ ನಿರ್ಮಾಣ: ಭೀತಿ

Last Updated 10 ಜೂನ್ 2011, 8:55 IST
ಅಕ್ಷರ ಗಾತ್ರ

ರಾಯಚೂರು: ಕೃಷ್ಣಾ ನದಿಗೆ ಆಂಧ್ರಪ್ರದೇಶದ ಗದ್ವಾಲ ಹತ್ತಿರ ಪ್ರಿಯದರ್ಶಿನಿ ಜುರಾಲಾ ಜಲಾಶಯ ನಿರ್ಮಾಣ ಆಗಿದ್ದರೂ ಈ ಜಲಾಶಯದ ಹಿನ್ನೀರಿನಲ್ಲಿ ಇಂದಿಗೂ ಮುಳುಗಡೆ ಭೀತಿ ಎದುರಿಸುತ್ತಿರುವ ರಾಯಚೂರು ತಾಲ್ಲೂಕಿನ ಆತ್ಕೂರು, ಡೊಂಗಾರಾಂಪುರ, ಬುರ್ದಿಪಾಡ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿಲ್ಲ.

ನಾಲ್ಕಾರು ವರ್ಷಗಳ ಹಿಂದೆ ಶೀಘ್ರ ಸೇತುವೆ ನಿರ್ಮಿಸಿ ಈ ಮೂರು ಗ್ರಾಮಸ್ಥರಿಗೆ, ಕೃಷ್ಣಾ ನದಿ ಹತ್ತಿರ ಇರುವ ಕೆಲ ದೇವಸ್ಥಾನ ಮತ್ತು ನಡುಗಡ್ಡೆಗಳಿಗೆ ಸಂಪರ್ಕ ಕಲ್ಪಿಸುವ ಭರವಸೆ ಕೊಡಲಾಗಿತ್ತು. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಗ್ರಾಮಗಳು ನಡುಗಡ್ಡೆಗಳಾಗುತ್ತವೆ. ಪುನರ್ವಸತಿ ಗ್ರಾಮ ನಿರ್ಮಾಣವೂ ಆಮೆವೇಗದಲ್ಲಿ ಸಾಗುತ್ತಿದೆ. 2009ರಲ್ಲಿ ಪ್ರವಾಹ ಎದುರಾದಾಗ ಶೀಘ್ರ ಸೇತುವೆ ನಿರ್ಮಿಸುವ ಕುರಿತು ಮತ್ತು ಪುನರ್ವಸತಿ ಗ್ರಾಮದ ಬಗ್ಗೆ ಸರ್ಕಾರ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ.

ಪ್ರಿಯದರ್ಶಿನಿ ಜುರಾಲಾ ಜಲಾಶಯ ನಿರ್ಮಾಣ ಯೋಜನೆ ರೂಪಿಸಿದ ಆಂಧ್ರಪ್ರದೇಶ ಸರ್ಕಾರವು, ಈ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗುವ ಈ ಮೂರು ಗ್ರಾಮದ ಪುನರ್ವಸತಿ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 22 ಕೋಟಿ ದೊರಕಿಸಿದೆ. ಈ ಹಣ ರಾಯಚೂರು ಜಿಲ್ಲಾಡಳಿತದಲ್ಲಿ ಇಂದಿಗೂ ಹಾಗೆಯೇ ಇದೆ.

ಸೇತುವೆ ನಿರ್ಮಾಣ ಕಾಮಗಾರಿ ವರ್ಷದಿಂದ ವರ್ಷಕ್ಕೆ ನೆನೆಗುದಿಗೆ ಬೀಳುತ್ತ ಬಂದಿದ್ದರಿಂದ ನಿರ್ಮಾಣ ವೆಚ್ಚವೂ ಹೆಚ್ಚಾಗುತ್ತಿದೆ. ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿರುವುದು 2228.82 ಲಕ್ಷ(22 ಕೋಟಿಗೂ ಹೆಚ್ಚು). ಸದ್ಯ ನಿರ್ಮಾಣಕ್ಕೆ ಬೇಕಾಗಿರುವುದು 3465.00 ಲಕ್ಷ(34 ಕೋಟಿಗೂ ಹೆಚ್ಚು). ಅಂದರೆ ಸುಮಾರು 1236.18 ಲಕ್ಷ(12 ಕೋಟಿ) ಹೆಚ್ಚುವರಿ ಮೊತ್ತದ ಅಗತ್ಯವಿದೆ. ಸರ್ಕಾರ ಈ ಹೆಚ್ಚುವರಿ ಮೊತ್ತ ನೀಡಿ ಶೀಘ್ರವಾಗಿ ಸೇತುವೆ ನಿರ್ಮಾಣಕ್ಕೆ ಈವರೆಗೂ ಮುಂದಾಗಿಲ್ಲ ಎಂದು ಗ್ರಾಮದ ಜನತೆ ಆರೋಪಿಸುತ್ತಾರೆ.

ಸರ್ಕಾರ ಮೊದಲು ಕಾಮಗಾರಿಗೆ ಟೆಂಡರ್ ಕರೆಯುವಲ್ಲಿ ವಿಳಂಬ ಮಾಡಿತು. ಒತ್ತಾಯ, ಹೋರಾಟದ ಬಳಿಕ ಸರ್ಕಾರ ಟೆಂಡರ್ ಕರೆಯಿತು. ಆದರೆ, ಕಾಮಗಾರಿಗೆ ಮೊದಲು ನಿಗದಿಪಡಿಸಿದ ಮೊತ್ತ ತೀರಾ ಕಡಿಮೆ ಎಂಬ ಕಾರಣದಿಂದ ಗುತ್ತಿಗೆದಾರರೇ ಬರಲಿಲ್ಲ. 2-3 ಬಾರಿ ಟೆಂಡರ್ ಆಹ್ವಾನಿಸಿದ ಬಳಿಕ ಒಂದೊಂದು ಸೇತುವೆಗೆ ಒಬ್ಬರೇ ಗುತ್ತಿಗೆದಾರರು ಟೆಂಡರ್ ಹಾಕಿದ್ದರು. ಹೆಚ್ಚುವರಿ ಮೊತ್ತ ನಮೂದಿಸಿದ್ದರು. ಮೊದಲಿನ ಮೊತ್ತಕ್ಕೆ ಕಾಮಗಾರಿ ಕೈಗೊಂಡರೆ ಸಾಕಷ್ಟು ನಷ್ಟ ಆಗುತ್ತದೆ ಎಂಬ ಕಾರಣವನ್ನೂ ನೀಡಿದ್ದರು. ಆದರೆ, ಸರ್ಕಾರ ಹೆಚ್ಚುವರಿ ಮೊತ್ತ ದೊರಕಿಸಲು ಈವರೆಗೂ ಮುಂದಾಗಿಲ್ಲ ಎಂದು ಸಮಸ್ಯೆ ವಿವರಿಸಿದರು.

ನೀರಿನ ಮಟ್ಟ ಹೆಚ್ಚಳ: ಮುಂಗಾರು ಮಳೆ ಈಗಷ್ಟೇ ಆರಂಭವಾಗಿದೆ. ಜುರಾಲಾ ಜಲಾಶಯದಲ್ಲಿ ಬುಧವಾರದ ದಾಖಲಾತಿ ಪ್ರಕಾರ 315.50 ಅಡಿ(ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ ಮಟ್ಟ 318.50) ನೀರು ಸಂಗ್ರಹ ಇದೆ. ಮುಂಬರುವ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಮೂರು ಗ್ರಾಮಗಳ ಸಂಪರ್ಕಕ್ಕೆ ಸಮಸ್ಯೆ ಎದುರಾಗಲಿದೆ. ನದಿಯ ಅಕ್ಕಪಕ್ಕದಲ್ಲಿರುವ ನಡುಗಡ್ಡೆ, ದೇವಸ್ಥಾನಗಳು ಮುಳುಗಡೆ ಭೀತಿ ಎದುರಿಸಲಿವೆ. ಹೀಗಾಗಿ ಜನತೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT