ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲಿ ಚೆಲುವಿನ ಚಿತ್ತಾರ

Last Updated 6 ಫೆಬ್ರುವರಿ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು:  ಆಕಾಶವನ್ನೇ ಸೀಳುವಂತೆ 20 ನಿಮಿಷಗಳ ಕಾಲ ಬಾನಂಗಳದಲ್ಲಿ ರುದ್ರರಮಣೀಯ ನರ್ತನ ಮಾಡಿದ ಝೆಕ್ ರಿಪಬ್ಲಿಕ್‌ನ ಹಾರುವ ಹೋರಿಗಳ (ಫ್ಲೈಯಿಂಗ್ ಬುಲ್ಸ್) ಮೋಡಿಗೆ ಹಕ್ಕಿಗಳೇ ನಾಚಿ ನೀರಾಗಿ ದೂರ ಸರಿದವು. ಭಾರತದ ತೇಜಸ್ ಹಾಗೂ ಫ್ರಾನ್ಸಿನ ರಫೇಲ್ ಭಯಂಕರ ಸದ್ದು ಮಾಡುತ್ತಾ ಆಗಸದಲ್ಲಿ ಗಿರಕಿ ಹೊಡೆದವು!

ರಕ್ಷಣಾ ಇಲಾಖೆಯ ಆಶ್ರಯದಲ್ಲಿ ಯಲಹಂಕದ ವಾಯುನೆಲೆಯಲ್ಲಿ ಬುಧವಾರ ಆರಂಭಗೊಂಡ `ಏರೋ ಇಂಡಿಯಾ-2013' ವೈಮಾನಿಕ ಪ್ರದರ್ಶನದಲ್ಲಿ ಉಕ್ಕಿನ ಹಕ್ಕಿಗಳ ಚಾಕಚಕ್ಯತೆಗೆ ಸಾವಿರಾರು ಜನರು ಬೆರಗುಗೊಂಡರು. ಹಳೆಯ ಹಾಗೂ ಹೊಸ ತಲೆಮಾರಿನ ವಿಮಾನಗಳು ಬಾನಿನಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿದವು. ಈ ಪ್ರದರ್ಶನ ವೈಮಾನಿಕ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಗೆ ಬೆಳಕು ಚೆಲ್ಲಿತು.

ಮೋಡಿ ಮಾಡಿದ `ಹುಲಿ ಮರಿ': ಬೆಳಿಗ್ಗೆ 10.45ರ ವೇಳೆಗೆ `ಉದ್ಘಾಟನಾ ವೇದಿಕೆ' ಮಾಯವಾಗುತ್ತಿದ್ದಂತೆ ಲೋಹದ ಹಕ್ಕಿಗಳು ಆಗಸದಲ್ಲಿ ಚೆಲುವಿನ ಚಿತ್ತಾರ ಮೂಡಿಸಲು ಶುರು ಹಚ್ಚಿದವು. ಮೊದಲು ಹಾರಿ ಬಂದದ್ದು ಹಳೆಯ ಹುಲಿಮರಿ (ಟೈಗರ್ ಮಾತ್).
ಎರಡನೇ ವಿಶ್ವ ಸಮರದ ಕಾಲದಲ್ಲಿ ನಿರ್ಮಾಣಗೊಂಡ ಈ ತರಬೇತಿ ವಿಮಾನ ಮೂರು ನಿಮಿಷಗಳ ಕಾಲ ಮೋಡಿ ಮಾಡಿತು. ಒಮ್ಮೆ ಭೂಮಿಗೆ ಹತ್ತಿರವಾಗಿ ಮತ್ತೊಮ್ಮೆ ಸುರುಳಿ ಸುತ್ತುತ್ತಾ ಸಾಗಿದ `ವೈಮಾನಿಕ ಅಜ್ಜ'ನ ನಾಟ್ಯಕ್ಕೆ ಜನರು ಬೆಕ್ಕಸ ಬೆರಗಾದರು.

ಬಳಿಕ ಭಾರತದ ಲಘು ಯುದ್ಧ ವಿಮಾನ `ತೇಜಸ್' ಸರದಿ. ಎದೆ ನಡುಗಿಸುವಂತೆ ಸದ್ದು ಮಾಡುತ್ತಾ ಹೊಗೆ ಉಗುಳುತ್ತಾ ಸಾಗಿಬಂದ ತೇಜಸ್ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡಿತು. ಚೇತೋಹಾರಿಯಾಗಿ, ಮೈನವಿರೇಳುವಂತೆ ಈ ವಿಮಾನ ಪ್ರದರ್ಶನ ನೀಡಿತು. ಆಗಸದಲ್ಲಿ ಹತ್ತಾರು ಬಾರಿ ಪಲ್ಟಿ ಹೊಡೆಯುತ್ತಾ ಸುಮಾರು ಐದು ನಿಮಿಷಗಳ ಕಾಲ ಪ್ರದರ್ಶನ ನೀಡಿದ ತೇಜಸ್ ನಭಕ್ಕೆ ಜಿಗಿದು ಮರೆಯಾಯಿತು.

ದಿನದ ಆಕರ್ಷಣೆಯ ಕೇಂದ್ರಬಿಂದುಗಳಾಗಿ ಕಾಣಿಸಿಕೊಂಡದ್ದು ಝೆಕ್ ರಿಪಬ್ಲಿಕ್‌ನ ಫ್ಲೈಯಿಂಗ್ ಬುಲ್ಸ್. ತಳದಲ್ಲಿ ನೀಲಿ, ಮೇಲ್ಭಾಗದಲ್ಲಿ ಬಿಳಿ ಬಣ್ಣ ಬಳಿದುಕೊಂಡು ಬಂದಿದ್ದ ಈ `ಹೋರಿ'ಗಳು, ಕನ್ನಡಿಯ ಪ್ರತಿಬಿಂಬದಂತೆ ಒಂದರ ಮೇಲೆ ಒಂದು ಉಲ್ಟಾ ದೇಹ ಮಾಡಿಕೊಂಡು ನಿಂತು ಒಂದೇ ಬಣ್ಣವನ್ನು ಪ್ರತಿಫಲಿಸುತ್ತಿದ್ದವು.

ಹಿರಿಯ ಪೈಲೆಟ್‌ಗಳಾದ ರಾಡ್ಕಾ ಮಚೋವಾ (64), ಜಿರಿ ಸ್ಯಾಲರ್ (60), ಜಿರಿ ವಿಪ್ರೆಕ್ (53) ಹಾಗೂ ಮಿರೊಸ್ಲೊವ್ ಕ್ರೇಜಿ (56) ಅವರನ್ನು ಹೊತ್ತ ನಾಲ್ಕು ಹೋರಿಗಳು ಪೈಪೋಟಿಯ ಪ್ರದರ್ಶನ ನೀಡಿದವು.

ಐದು ದಶಕಗಳಿಂದ ಬಾಹ್ಯಾಕಾಶದಲ್ಲಿ ಕಸರತ್ತು ನಡೆಸುತ್ತಿರುವ ಯುರೋಪಿನ ಸಾಹಸಮಯ ತಂಡ ನೀಡಿದ ಸುಮಾರು 20 ನಿಮಿಷಗಳ ರುದ್ರಭಯಂಕರ ಚಾಕಚಕ್ಯತೆಗೆ ವೀಕ್ಷಕರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟರು.

ಶುರುವಿನಲ್ಲಿ ಈ ಹೋರಿಗಳ ಜೊತೆಗೆ ಪೈಪೋಟಿಗೆ ಇಳಿದಿದ್ದ ಬಾನಾಡಿಗಳು ಸೋತು ಸ್ವಲ್ಪ ಹೊತ್ತಿನಲ್ಲೇ ದೂರ ಸರಿದವು. ಮತ್ತೆ ಎರಡು ವಿಮಾನಗಳು ಎದುರು ಬದುರಾಗಿ ಸಾಗಿ ಬಂದು ಕಸರತ್ತು ನಡೆಸಿದಾಗ ಪ್ರೇಕ್ಷಕರ ಮೊಗದಲ್ಲಿ ಆತಂಕದ ಛಾಯೆ.

580 ಕೆ.ಜಿ. ತೂಕದ ಈ ಲೋಹದ ಹಕ್ಕಿಗಳು ಪರಸ್ಪರ ಡಿಕ್ಕಿ ಹೊಡೆದವು ಎಂದು ಜನರು ಭಯದಿಂದ ಕಣ್ಣು ಮುಚ್ಚಿ ತೆರೆಯುವುದರೊಳಗೆ ಇವೆರಡು ಪಥ ಬದಲಿಸಿ ಸಾಗಿಯಾಗಿತ್ತು.

ಸ್ವಲ್ಪ ಹೊತ್ತು ಶಿಸ್ತಿನ ಸಿಪಾಯಿಗಳಂತೆ ಜೊತೆಜೊತೆಗೆ ಸಾಗಿದ ಇವುಗಳ ಸ್ವಲ್ಪ ಹೊತ್ತು ಮುನಿಸು ಮಾಡಿಕೊಂಡ ಜೋಡಿಗಳಂತೆ ನಾಲ್ಕು ದಿಕ್ಕಿಗೆ ಸರಿದವು. ಬಳಿಕ ಫ್ರಾನ್ಸಿನ ಯುದ್ಧ ವಿಮಾನ ರಫೆಲ್ ಹಾಗೂ ಭಾರತೀಯ ವಾಯುಪಡೆಗೆ ಸೇರಿದ ಸಾರಂಗ ಹೆಲಿಕಾಪ್ಟರ್ ತಂಡದ ಪ್ರದರ್ಶನ ಮನಸೂರೆಗೊಂಡಿತು.

ಚೀನಾ ಗಡಿಯಲ್ಲಿ `ಪರ್ವತ ಪಡೆ': ಆಂಟನಿ
`ಚೀನಾ ಕಡೆಯಿಂದ ಎದುರಾಗುವ ಸಂಭಾವ್ಯ ಅಪಾಯ ತಡೆಗಟ್ಟಲು ಈಶಾನ್ಯ ಭಾಗದಲ್ಲಿ 60,000 ಸೈನ್ಯಬಲದ `ಪರ್ವತ ಕಾರ್ಯಾಚರಣೆ ಪಡೆ' ಕಟ್ಟಲು ನಿರ್ಧರಿಸಲಾಗಿದೆ' ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಪ್ರಕಟಿಸಿದರು. ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT