ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋ ಟೆಕ್...

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ನಾವೆಲ್ಲರೂ ಬೈಕ್, ಸ್ಕೂಟರ್, ಕಾರನ್ನು ಪ್ರತಿನಿತ್ಯ ಓಡಿಸುತ್ತೇವೆ. ಆದರೆ ಈ ವಾಹನಗಳ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದೇ ಇಲ್ಲ. ಬೈಕ್‌ನಲ್ಲಿನ ಕ್ಲಚ್ ಎಂದರೇನು, ಎಕ್ಸಿಲರೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ. ಎಂಜಿನ್‌ನ ಒಳ ಸ್ವರೂಪ ಎಂಥದ್ದು.

ಹೌದು, ಇದು ನಿಜಕ್ಕೂ ವಿಸ್ಮಯದ ಗಣಿ. ಅತ್ಯಂತ ಸರಳ ಯಾಂತ್ರಿಕ ರಚನೆಯಿಂದ, ಕ್ಲಿಷ್ಟಕರವಾದ ಕಂಪ್ಯೂಟರ್ ನಿಯಂತ್ರಿತ ಸಾಧನಗಳು ವಾಹನವೊಂದನ್ನು ಚಾಲೂ ಮಾಡುತ್ತಿರುತ್ತವೆ. ಈ ತಂತ್ರಜ್ಞಾನಗಳ ಪುಟ್ಟ ಪರಿಚಯ ಇಲ್ಲಿದೆ.

ಕಾರ್ಬುರೇಟರ್
ನಾವೆಲ್ಲಾ ಬೈಕ್ ಓಡಿಸುವಾಗ ಕಾರ್ಬುರೇಟರ್ ರಿಚ್ ಆಗಿ ಬೈಕ್ ನಿಂತು ಹೋಯಿತು ಎಂಬ ಮಾತು ಕೇಳಿದ್ದೇವೆ ಅಲ್ಲವೆ. ಕೆಲವೊಮ್ಮೆ ಅನುಭವಕ್ಕೂ ಬಂದಿರಬಹುದು. ಹಾಗಾದರೆ ಈ ಕಾರ್ಬುರೇಟರ್ ರಿಚ್ ಆಗುವುದು ಎಂದರೆ ಏನರ್ಥ. ಶ್ರಿಮಂತವಾಯಿತು ಎಂದು ಖಂಡಿತಾ ಅಲ್ಲ!

ಹಾಗಾದರೆ ಈ ಕಾರ್ಬುರೇಟರ್ ಅಂದರೇನು? ಸುಲಭ ಮಾತಲ್ಲಿ, ಎಂಜಿನ್‌ಗೆ ಇಂಧನವನ್ನು ಉಣಿಸುವ ಸಾಧನವೇ ಕಾರ್ಬುರೇಟರ್. ತಂತ್ರಜ್ಞಾನದಲ್ಲಿ ಹಳೆಯದಾದರೂ ಇನ್ನೂ ಬಳಕೆಯಲ್ಲಿರುವ ಸಾಧನ. ಯಾವುದೇ ಎಂಜಿನ್‌ಗೆ ಇಂಧನ ಬೇಕೇ ಬೇಕು. ಅದರಲ್ಲೂ ಪಿಸ್ಟನ್ ಹೊಂದಿರುವ ಇಂಟರ್ನಲ್ ಕಂಬಶ್ಚನ್ (ಅಂತರ್ದಹನ) ಎಂಜಿನ್‌ಗಳಲ್ಲಿ ಇಂಧನ ಉರಿಯುವ ಪ್ರಮಾಣವನ್ನು ನಿಯಂತ್ರಿಸುವ ಸಾಧನವೊಂದರ ಸಹಾಯ ಬೇಕಿರುತ್ತದೆ. ಇದೇ ಕಾರ್ಬುರೇಟರ್‌ನ ಕೆಲಸ. ಇಂಧನವನ್ನು ಎಂಜಿನ್‌ಗೆ ಕಳುಹಿಸುವುದು ಮಾತ್ರ ಕಾರ್ಬುರೇಟರ್ ಕೆಲಸವಲ್ಲ. ಕೇವಲ ಇಂಧನದಿಂದ ಎಂಜಿನ್‌ನಲ್ಲಿ ದಹನ ಕ್ರಿಯೆ ಆಗದು. ನಿಗದಿತ ಪ್ರಮಾಣದಲ್ಲಿ ಗಾಳಿಯನ್ನು ಇಂಧನದೊಂದಿಗೆ ಬೆರೆಸಿ ಎಂಜಿನ್‌ಗೆ ಕಳುಹಿಸಬೇಕು. ಕಾರ್ಬುರೇಟರ್‌ನಲ್ಲಿ ಇರುವ `ಜೆಟ್~ ಎಂಬ ಸೂಕ್ಷ್ಮ ಕೊಳವೆಯು ಇಂಧನ ಹಾಗೂ ಗಾಳಿಯನ್ನು ಬೆರೆಸಿ ಅದನ್ನು ಎಂಜಿನ್‌ನ `ಬೋರ್~ಗೆ (ಪಿಸ್ಟನ್ ಚಲಿಸುವ ಕವಾಟ) ಕಳುಹಿಸುತ್ತದೆ. ಎಂಜಿನ್ ಹೆಡ್‌ನಲ್ಲಿರುವ ಬೋರ್ ಒಳಗಿನ `ಟಿಡಿಸಿ~ (ಟಾಪ್ ಡೆಡ್ ಕಾರ್ನರ್) ಮತ್ತು `ಬಿಡಿಸಿ~ (ಬಾಟಮ್ ಡೆಡ್ ಕಾರ್ನರ್) ಗಳಲ್ಲಿ ಇಂಧನ ಉರಿದು, ಪಿಸ್ಟನ್ ಒತ್ತಡಲ್ಲಿ ಚಲಿಸಿ, ವಾಹನಕ್ಕೆ ಚಲನೆ ಸಿಗುತ್ತದೆ.
 
ವಾಹನದ ಚಾಲಕನ ನಿಯಂತ್ರಣದಲ್ಲಿರುವ `ಎಕ್ಸಿಲರೆಟರ್~ ಮೂಲಕ ವೇಗವನ್ನು ನಿಯಂತ್ರಿಸುವ ಮತ್ತೊಂದು ಸಾಧನ, ಕಾರ್ಬುರೆಟರ್‌ನಲ್ಲಿ ಅಡಕವಾಗಿರುತ್ತದೆ. ಒಮ್ಮಮ್ಮೆ ಕಾರ್ಬುರೇಟರ್ ಹಳೆಯದಾಗಿ ಒಳಗಿನ ಸಾಧನಗಳು ಸವೆದಿದ್ದಾಗ, ಅದು ಬರೆಸುವ ಇಂಧನ ಹಾಗೂ ಗಾಳಿಯ ಪ್ರಮಾಣ ವ್ಯತ್ಯಾಸವಾಗಿ, ಕೇವಲ ಇಂಧನವೇ ತುಂಬಿ ತುಳುಕುತ್ತದೆ. ಹೀಗಾದಾಗ ಬೈಕ್ ಅಥವಾ ಸ್ಕೂಟರ್ ನಿಂತ ಹೋಗುತ್ತದೆ. ಇದನ್ನೇ ರಿಚ್ ಆಯಿತು ಎನ್ನುವುದು. ಆಗ, ಕಾರ್ಬುರೇಟರ್‌ಗೆ ಇಂಧನ ಕಳುಹಿಸುವ ರಬ್ಬರ್‌ನ ಪೈಪ್‌ನ್ನು ಬಿಚ್ಚಿ ಕಾರ್ಬುರೇಟರ್‌ನಿಂದ ಇಂಧನ ಹೊರತೆಗೆಯಬೇಕಷ್ಟೇ. ಕಾರ್ಬುರೇಟರ್ ಬದಲಿಸುವುದು ಶಾಶ್ವತ ಪರಿಹಾರ!
 

ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ
ಕಾರ್ಬುರೇಟರ್‌ಗೆ ಪರ್ಯಾಯವಾದ ಕಂಪ್ಯೂಟರ್ ನಿಯಂತ್ರಿತ ಸಾಧನವೇ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ. ಕಾರ್ಬುರೇಟರ್ ಜಾಗದಲ್ಲಿ ಅಳವಡಿಸಲಾಗಿರುವ ಈ ಸಾಧನ, ಪೂರ್ವ ಮುದ್ರಿತ ಕಂಪ್ಯೂಟರ್ ಸಿಗ್ನಲ್‌ಗಳಿಗೆ ತಕ್ಕಂತೆ ಇಂಧನ ಹಾಗೂ ಗಾಳಿಯನ್ನು ಬೆರೆಸಿ ಎಂಜಿನ್‌ಗೆ ನೀಡುತ್ತದೆ. ಇಲ್ಲಿ ಯಂತ್ರದ ಸಹಾಯ ಇಲ್ಲದ ಹಾಗೂ ಯಾವುದೇ ರೀತಿಯ ಮಾನವ ನಿಯಂತ್ರಣ ಬೇಕಿಲ್ಲದ ಕಾರಣ, ಎಂಜಿನ್‌ನಲ್ಲಿ ಉತ್ತಮ ರೀತಿಯಲ್ಲಿ ಇಂಧನ ದಹನವಾಗಿ, ಹೆಚ್ಚು ಶಕ್ತಿ ಹಾಗೂ ಸುಧಾರಿತ ಮೈಲೇಜ್ ವಾಹನಕ್ಕೆ ದೊರೆಯುತ್ತದೆ. ಹಾಗಾಗಿ ಈಗಿನ ಬಹುತೇಕ ಸುಧಾರಿತ ಬೈಕ್ ಮತ್ತು ಕಾರುಗಳಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ. ಇಲ್ಲಿ ರಿಚ್ ಆಗುವ ಸಾಧ್ಯತೆಯೇ ಇಲ್ಲ. ಆದರೆ ಸಿಸ್ಟಂನ ಮೈಕ್ರೋಪ್ರಾಸೆಸರ್ ಚಿಪ್‌ಗೆ ನೀರು ಬೀಳದಂತೆ ನೋಡಿಕೊಳ್ಳಬೇಕು. ವಾಟರ್‌ಪ್ರೂಫಿಂಗ್ ವ್ಯವಸ್ಥೆ ಇರುವುದಾದರೂ, ಜಾಗ್ರತೆ ವಹಿಸಿದರೆ ಒಳ್ಳೆಯದು. ಒಮ್ಮೆ ನೀರು ಬಿದ್ದು, ಶಾರ್ಟ್ ಸರ್ಕೀಟ್ ಆದರೆ, ಹೊಸ ಸಾಧನವನ್ನೇ ಅಳವಡಿಸಬಾಕಾದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT