ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಡಳಿತದಲ್ಲಿ ನೈತಿಕತೆಯ ಅಗತ್ಯವಿದೆ'

Last Updated 7 ಏಪ್ರಿಲ್ 2013, 20:26 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತದಲ್ಲಿ ಆಂತರಿಕ ಹಾಗೂ ಬಾಹ್ಯ ನೈತಿಕತೆಯ ಅಗತ್ಯ ಹೆಚ್ಚಾಗಿದ್ದು, ಇದನ್ನು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್ ಎಂಜಿನಿಯರುಗಳಿಗೆ ಕರೆ ನೀಡಿದರು.

ನಗರದಲ್ಲಿ ಕರ್ನಾಟಕ ಎಂಜಿನಿಯರುಗಳ ಒಕ್ಕೂಟ ಹಾಗೂ ಕರ್ನಾಟಕ ವಿದ್ಯುತ್ ಎಂಜಿನಿಯರುಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ಒಂದು ದಿನದ ಆಡಳಿತಾತ್ಮಕ ವಿಷಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಡೆ ಗ್ರಾಮಾಂತರ ರೈತಾಪಿ ಜನರು ಆರ್ಥಿಕವಾಗಿ ದಿವಾಳಿಯಾಗಿ, ನೈತಿಕ ಮತ್ತು ಸಾಂಸ್ಕೃತಿಕ ದಿವಾಳಿತನವನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಕಡೆ ವಿದ್ಯಾವಂತರು ಮತ್ತು ಆರ್ಥಿಕವಾಗಿ ಸಬಲರಾಗಿರುವ ಜನರಲ್ಲೂ ನೈತಿಕ ಮತ್ತು ಸಾಂಸ್ಕೃತಿಕ ದಿವಾಳಿತನವನ್ನು ಕಾಣುತ್ತೇವೆ. ಜನರಲ್ಲಿ ಮತ್ತು ಸಮಾಜದಲ್ಲಿ ಮೌಲ್ಯಗಳ ಕೊರತೆ ಇದಕ್ಕೆ ಕಾರಣ ಎಂದರು.

ದೇಶಕ್ಕೆ ಜನರು ದೇಹ ಇದ್ದಂತೆ. ಜನರಲ್ಲಿ ಮತ್ತು ಸಮಾಜದಲ್ಲಿ ಮೌಲ್ಯಗಳು ಆತ್ಮ ಇದ್ದಂತೆ. ಮೌಲ್ಯಗಳು ಜನರ ಜೀವನವನ್ನು ನಿಯಂತ್ರಿಸುತ್ತವೆ ಮತ್ತು ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಮತ್ತು ಬೆಳೆಸುವುದು ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಸಮಾಜದ ಕೆಲಸ ಎಂದರು.

ರಾಜ್ಯದ ಅಧಿಕಾರಿಗಳು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಕೆಲವು ಕನಿಷ್ಠ ನಿಯಮಗಳನ್ನು ಅನುಸರಿಸುವುದನ್ನು ಆಂತರಿಕ ನೈತಿಕತೆ ಎನ್ನಬಹುದು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅನೇಕ ವಿಷಯಗಳ ಬಗ್ಗೆ ತೀರ್ಮಾನ ತಗೆದುಕೊಳ್ಳುವ ಸಂದರ್ಭದಲ್ಲಿ ಇತರ ಜನರ ಹಿತ ಅಡಗಿರುತ್ತದೆ. ಇತರರ ಹಿತಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು.

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಉಪನ್ಯಾಸ ನೀಡಿದರು. ಕರ್ನಾಟಕ ಎಂಜಿನಿಯರುಗಳ ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT