ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆದಾಳಿ: ಪರಿಹಾರ ಒಂದೇ ರೀತಿಯಲ್ಲಿರಲಿ-ಸಲಹೆ

Last Updated 12 ಜೂನ್ 2011, 9:15 IST
ಅಕ್ಷರ ಗಾತ್ರ

ಹಾಸನ:`ಆನೆ ದಾಳಿಯಿಂದ ಮೈಸೂರಿನಲ್ಲಿ ಮೃತಪಟ್ಟಿರುವ ರೇಣುಕಾ ಪ್ರಸಾದ್ ಕುಟುಂಬದವರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಸ್ವಾಗತಾರ್ಹ. ಹಾಸನ ಜಿಲ್ಲೆಯಲ್ಲಿ ಈವರೆಗೆ ಆನೆದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೂ ಇದೇ ರೀತಿ ಪರಿಹಾರ ನೀಡಬೇಕು ಮತ್ತು ಮುಂದೆಯೂ ಇದೇ ಪ್ರಮಾಣದಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು~ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ಜಿಲ್ಲೆಯಲ್ಲಿ ಈವರೆಗೆ ಹತ್ತಾರು ಮಂದಿ ಆನೆ, ಕರಡಿ ಮುಂತಾದ ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ತೆತ್ತಿದ್ದಾರೆ. ಅವರ ಕುಟುಂಬದವರು ಸಹ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಎಲ್ಲರಿಗೂ ಇದೇ ಮಾನದಂಡ ಅನುಸರಿಸಿ ಪರಿಹಾರ ನೀಡಬೇಕು~ ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆನೆಗಳ ಹಾವಳಿಯಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿಯ ಬೆಳೆ ನಾಶವಾಗುತ್ತಿದೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಿಲ್ಲೆಯಲ್ಲಿ ಆನೆದಾಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಂದಾಯ ಇಲಾಖೆ ಕಾರ್ಯದರ್ಶಿ ಜಾಮದಾರ್  ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
 
ಕೃಷಿ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಶ್ಚಿಮ ಘಟ್ಟ ಪ್ರದೇಶದ ಶಾಸಕರು ಈ ಸಮಿತಿಯ ಸದಸ್ಯರಾಗಿದ್ದರು. ಸಮಿತಿ ಅಧ್ಯಯನ ನಡೆಸಿ ಒಂದು ವರದಿಯನ್ನೂ ನೀಡಿತ್ತು. ಆದರೆ ಆ ವರದಿ ಈಗ ಧೂಳು ತಿನ್ನುತ್ತಿದೆ. ವರದಿಗೆ ಮರು ಜೀವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು  ಎಂದರು.

ಪಶ್ಚಿಮ ಘಟ್ಟದಲ್ಲಿ ಅರಣ್ಯ ನಾಶವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವನಾಥ್, `ಈ ಅರಣ್ಯದಲ್ಲಿ ಜಲ ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬಾರದು. ಈಗಾಗಲೇ ಕೆಲವು ಯೋಜನೆಗಳು ಜಾರಿಗೆ ಬಂದಿದ್ದು, ನೂರಾರು ಮರಗಳು ನಾಶವಾಗಿದೆ.

ಅರಣ್ಯದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಜನರ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ಎಲ್ಲ ಕಿರು ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಬೇಕು, ಅರಣ್ಯ ಒತ್ತುವರಿ ತೆಡಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಕಲೇಶಪುರ ಪುರಸಭೆ ಅಧ್ಯಕ್ಷ ಎಸ್.ಡಿ. ಆದರ್ಶ, ಮಾಜಿ ಅಧ್ಯಕ್ಷ ಝಾಕಿರ್  ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT