ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ವಿ.ವಿ.ಗೆ ಚಿಂತನೆ

Last Updated 7 ಅಕ್ಟೋಬರ್ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: `ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸಲು ಮತ್ತು ಪ್ರೋತ್ಸಾಹಿಸಲು ರಾಜ್ಯದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯಿದ್ದು, ಈ ಬಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ನುಡಿದರು.

ಕನಕಪುರ ರಸ್ತೆಯಲ್ಲಿರುವ `ಆರ್ಟ್ ಆಫ್ ಲಿವಿಂಗ್~ನ ಮುಖ್ಯಸ್ಥ ರವಿಶಂಕರ್ ಗುರೂಜಿ ಅವರು ಸ್ಥಾಪಿಸಿರುವ ಆಯುರ್ವೇದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, `ಆಯುರ್ವೇದ ಭಾರತದ ಪ್ರಮುಖ ವೈದ್ಯಕೀಯ ಪದ್ಧತಿಯಾಗಿದ್ದು, ವೈಜ್ಞಾನಿಕವಾಗಿಯೂ ಇದರ ಮಹತ್ವ ಸಾಬೀತಾಗಿದೆ. ಆ ನಿಟ್ಟಿನಲ್ಲಿ ಗುರೂಜಿ ಅವರು ವಿಶ್ವದರ್ಜೆಯ ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಹೆಮ್ಮೆಯ ಸಂಗತಿ. ಆಯುರ್ವೇದದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಉದ್ದೇಶದಿಂದ ವಿ.ವಿ. ಸ್ಥಾಪನೆಯ ಚಿಂತನೆ ನಡೆದಿದೆ~ ಎಂದು ಹೇಳಿದರು.

`ಯೂರೋಪ್‌ನ ಕೆಲ ರಾಷ್ಟ್ರಗಳಲ್ಲಿ ಆಯುರ್ವೇದ ಚಿಕಿತ್ಸೆಯನ್ನು ನಿಷೇಧಗೊಳಿಸಿದ್ದು ಸರಿಯಲ್ಲ. ಇದರ ವಿರುದ್ಧ ಗುರೂಜಿ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ~ ಎಂದರು.

`ಇಲಾಖೆಯ ನಿಯಮಗಳನ್ವಯ 150 ಹಾಸಿಗೆ ಸಾಮರ್ಥ್ಯವನ್ನು ಹೊಂದಿದ ಈ ಆಸ್ಪತ್ರೆಗೆ ಆಯುರ್ವೇದ ಸ್ನಾತಕೋತ್ತರ ಕೋರ್ಸ್ ಬೋಧನೆಗೆ ಸರ್ಕಾರ ಶೀಘ್ರದಲ್ಲೇ ಅನುಮತಿ ನೀಡಲಿದೆ~ ಎಂದು ಭರವಸೆ ನೀಡಿದರು.
ರವಿಶಂಕರ್ ಗುರೂಜಿ ಮಾತನಾಡಿ, `ಆಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಗೊಳಿಸುವ ಆಶಯ ಮೊದಲಿಂದಲೂ ಇತ್ತು. ಅದನ್ನು ಸಾಕಾರಗೊಳಿಸುವ ಉದ್ದೇಶದಿಂದ ಈ ಆಸ್ಪತ್ರೆ ಆರಂಭಿಸಲಾಗಿದೆ.
 
ಆಶ್ರಮಕ್ಕೆ ಸುಮಾರು 65 ದೇಶಗಳಿಂದ 1,500 ಭಕ್ತರು ಭೇಟಿ ನೀಡುತ್ತಿದ್ದು, ಅವರಿಗೂ ಚಿಕಿತ್ಸೆ ನೀಡಲು ಈ ಆಸ್ಪತ್ರೆ ಅನುಕೂಲವಾಗಲಿದೆ. ಇದರಿಂದ ವೈದ್ಯಕೀಯ ಪ್ರವಾಸೋದ್ಯಮವೂ ಬೆಳೆಯಲಿದೆ. ಆಯುರ್ವೇದ ಸಂಶೋಧನಾ ಸಂಸ್ಥೆಯಲ್ಲಿ ಹಲವು ಬಗೆಯ ಸಂಶೋಧನಾ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಅರವಳಿಕೆ ನೀಡದೇ ಹಲ್ಲುಗಳನ್ನು ಕೀಳುವುದರ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಉಳಿದಂತೆ ಮೂಲವ್ಯಾಧಿಗೂ ಔಷಧಿ ನೀಡಲಾಗುವುದು~ ಎಂದರು.

`ಆಸ್ಪತ್ರೆಗೆ ದುಡ್ಡಿದ್ದವರು, ದುಡ್ಡಿಲ್ಲದವರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಾರೆ. ದುಡ್ಡಿದ್ದವರು ಶುಲ್ಕ ನೀಡಿದರೆ ಇಲ್ಲದವರು ಉಚಿತ ಚಿಕಿತ್ಸೆ ಪಡೆಯುತ್ತಾರೆ. ಸಂಸ್ಥೆಯ ವಾಹನಗಳು ಸುಮಾರು 20 ಗ್ರಾಮಗಳಿಗೆ ಭೇಟಿ ನೀಡಿ ರೋಗಿಗಳನ್ನು ಗುರುತಿಸಿ ಆಸ್ಪತ್ರೆಗೆ ಕರೆತರುತ್ತವೆ. ಚಿಕಿತ್ಸೆಯೊಂದಿಗೆ ಊಟೋಪಚಾರವನ್ನೂ ನೀಡಲಾಗುವುದು~ ಎಂದು ನುಡಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಮಾತನಾಡಿ, `ಈ ಆಸ್ಪತ್ರೆ ಮತ್ತು ಸಂಶೋಧನಾ ಕಾಲೇಜು ಇಡೀ ದೇಶಕ್ಕೇ ಮಾದರಿಯಾಗಲಿದೆ. ಗುರೂಜಿ ಪ್ರಯತ್ನಕ್ಕೆ ಸರ್ಕಾರವೂ ಸ್ಪಂದಿಸುತ್ತಿರುವುದು ಶ್ಲಾಘನೀಯ. ಈ ಕಾಲೇಜಿನಲ್ಲಿ ಹೊಸ ಕೋರ್ಸ್‌ಗಳ ಆರಂಭಕ್ಕೆ ಸಂಬಂಧಪಟ್ಟಂತೆ ಅನುಮತಿ ನೀಡಲು ಸರ್ಕಾರ ಹಿಂಜರಿಯಬಾರದು~ ಎಂದರು.

ಹಿರಿಯ ಚಿತ್ರನಟಿ ಜಯಂತಿ, ಭಾರತ ಕೇಂದ್ರ ವೈದ್ಯಕೀಯ ಮಂಡಳಿ (ಸಿಸಿಐಎಂ)ನ ಅಧ್ಯಕ್ಷ ರಘುನಂದನ್ ಶರ್ಮಾ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT